Advertisement

Investment: ಹೂಡಿಕೆದಾರ ಸ್ನೇಹಿ ವಾತಾವರಣ ನಿರ್ಮಿಸಲು ಬದ್ಧ: ಸಿದ್ದರಾಮಯ್ಯ 

11:47 PM Jan 19, 2024 | Team Udayavani |

ಬೆಂಗಳೂರು: ಪ್ರತಿಭಾನ್ವಿತ ಉದ್ಯೋಗಿಗಳು ಹಾಗೂ ಕೌಶಲ ಯುಕ್ತ ಮಾನವ ಸಂಪನ್ಮೂಲ ಹೇರಳ ವಾಗಿರುವ ಕರ್ನಾಟಕ ತಂತ್ರಜ್ಞಾನ ಹಾಗೂ ಜ್ಞಾನಾಧಾರಿತ ಉದ್ಯಮಗಳ ಮೊದಲ ಆಯ್ಕೆಯಾಗಿದೆ. ಹೂಡಿಕೆ ದಾರ ಸ್ನೇಹಿ ವಾತಾವರಣ ನಿರ್ಮಿಸಲು ನಮ್ಮ ಸರಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ವಿವಿಧ ವಲಯಗಳಿಗೆ ನಿರ್ದಿಷ್ಟ ನೀತಿ ಹಾಗೂ ಕೈಗಾರಿಕೆ ಸ್ನೇಹಿ ನೀತಿಗಳನ್ನು ರಾಜ್ಯ ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಬಿ. ಮಾರೇನಹಳ್ಳಿಯಲ್ಲಿ ಬೋಯಿಂಗ್‌ ಸಂಸ್ಥೆಯ ನಿರ್ಮಿಸಿರುವ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ಕೇಂದ್ರ ಹಾಗೂ ವಿಮಾನ ಯಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತೇಜನ ನೀಡುವ ಬೋಯಿಂಗ್‌ ಸುಕನ್ಯಾ ಕಾರ್ಯಕ್ರಮದ ಉದ್ಘಾಟನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ಪಾಲ್ಗೊಂಡು ಮುಖ್ಯ ಮಂತ್ರಿಗಳು ಮಾತನಾಡಿದರು.

ಕರ್ನಾಟಕವು ಜಾಗತಿಕವಾಗಿ ವಿಶ್ವದ 4ನೇ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್‌ ಆಗಿದೆ. ನಾವೀನ್ಯ ಸೂಚ್ಯಂಕದಲ್ಲಿ ಮೊದಲ ಸ್ಥಾನ ಹಾಗೂ ದೇಶದ ಒಟ್ಟಾರೆ ರಫ್ತಿನಲ್ಲಿ ಮುಂಚೂಣಿಯಲ್ಲಿದೆ. ಫಾರ್ಚೂನ್‌ 500 ಕಂಪೆನಿಗಳಲ್ಲಿ 400ಕ್ಕೂ ಹೆಚ್ಚು ಕಂಪೆನಿ ಗಳ ಕಚೇರಿ ಕರ್ನಾಟಕದಲ್ಲಿದೆ. ನಮ್ಮ ರಾಜ್ಯವು, ಸಂಶೋಧನೆ ಮತ್ತು ಅಭಿವೃದ್ಧಿ, ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಮೊದಲ ಸ್ಥಾನದಲ್ಲಿರುವು ದಲ್ಲದೆ, ಸ್ಟಾರ್ಟ್‌ ಅಪ್‌ ರಾಜಧಾನಿ ಎಂಬ ಕೀರ್ತಿಗೂ ಭಾಜನವಾಗಿದೆ. ರಾಜ್ಯವು ದೇಶದ ಏರೋಸ್ಪೇಸ್‌ ವಲಯದಲ್ಲಿ ಪ್ರಾಬಲ್ಯ ಸಾಧಿಸಿದ್ದು, ಏರೋಸ್ಪೇಸ್‌ ಮತ್ತು ರಕ್ಷಣೆ ರಫ್ತಿನ ಶೇ. 65 ರಷ್ಟು ಪಾಲನ್ನು ಹೊಂದಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಬೋಯಿಂಗ್‌ ಸಂಸ್ಥೆಯು ತನ್ನ ಕೇಂದ್ರವೊಂದನ್ನು ಬೆಂಗಳೂರಿನಲ್ಲಿ ಸ್ಥಾಪಿಸಿರುವುದು ತಂತ್ರಜ್ಞಾನದ ವಲಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದ ಮುಕುಟಕ್ಕೆ ಹೊಸದೊಂದು ಮಣಿ ಸೇರ್ಪಡೆಯಾದಂತೆ ಆಗಿದೆ. ಇದರೊಂದಿಗೆ ರಾಜ್ಯದ ಕೈಗಾರಿಕೆ ಅಭಿವೃದ್ಧಿಯಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಲು ಮುನ್ನುಡಿ ಬರೆದಿದೆ. ಈ ಯೋಜನೆಯೊಂದಿಗೆ ಜಾಗತಿಕ ಮಟ್ಟದಲ್ಲಿ ವಿಮಾನಯಾನ ವಲಯದ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡುವ ಆಶಯಕ್ಕೆ ಪುಷ್ಟಿ ನೀಡಿದಂತಾಗಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಬೋಯಿಂಗ್‌ನ ಈ ಹೊಸ ಉಪಕ್ರಮದಿಂದಾಗಿ ಸ್ಥಳೀಯ ಪ್ರತಿಭಾವಂತರಿಗೆ ಜಾಗತಿಕ ಮಟ್ಟದ ಯೋಜನೆಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ದೊರೆಯಲಿದೆ. ಬೋಯಿಂಗ್‌ನ ಭವಿಷ್ಯದ ಯೋಜನೆಗಳಿಗೆ ರಾಜ್ಯ ಸರಕಾರ ಸಾಧ್ಯವಿರುವ ಎಲ್ಲ ಸಹಕಾರ ನೀಡಲಿದೆ ಎಂದು ಅವರು ಭರವಸೆ ನೀಡಿದರು.

ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಎಲ್ಲರ ಒಳಗೊಳ್ಳುವಿಕೆ ಹಾಗೂ ಎಲ್ಲರಿಗೂ ತಂತ್ರಜ್ಞಾನದ ಲಾಭ ದೊರಕುವಂತಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯದ ಹೆಣ್ಣುಮಕ್ಕಳು ಹಾಗೂ ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸರಕಾರ ಆದ್ಯತೆ ನೀಡಿದೆ. ಮಹಿಳೆಯರ ಅಭ್ಯುದಯ ಹಾಗೂ ಸಮಾಜಕ್ಕೆ ಅವರ ಅಮೂಲ್ಯ ಕೊಡುಗೆ ನೀಡುವ ನಿಟ್ಟಿನಲ್ಲಿ ನಮ್ಮ ಸರಕಾರ ಸದಾ ಬೆಂಬಲ ನೀಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಬೋಯಿಂಗ್‌ ಸುಕನ್ಯಾ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು ಸಂತೋಷ ನೀಡಿದೆ. ಇದು ಕೇವಲ ಬೋಯಿಂಗ್‌ ಸಂಸ್ಥೆಗೆ ಮಾತ್ರವಲ್ಲ, ನಮ್ಮ ನಾಡಿಗೂ ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿಗಳು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next