ಆನೇಕಲ್: ಶಾಂತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಪಡಿಸುವ ಮೂಲಕ ಸಮಸ್ಯೆ ಮುಕ್ತ ಗೊಳಿಸುವುದೇ ನನ್ನ ಧ್ಯೇಯ ಎಂದು ಶಾಂತಿಪುರ ಗ್ರಾಪಂ ಅಧ್ಯಕ್ಷ ಚಿಕ್ಕನಾಗಮಂಗಲ ವೆಂಕಟೇಶ್ (ಗುರು) ತಿಳಿಸಿದರು.
ತಾಲೂಕಿನ ಗಟ್ಟಹಳ್ಳಿ ಗ್ರಾಮದಿಂದ ಕನ್ನಲ್ಲಿಗೆ ಹೋಗುವ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಳೆದ ಹತ್ತಾರು ವರ್ಷಗಳಿಂದ ಗಟ್ಟಹಳ್ಳಿ ಗ್ರಾಮದಿಂದ ಕನ್ನಲ್ಲಿಗೆ ಹೋಗುವ ರಸ್ತೆ ಹಳ್ಳಗಳಿಂದ ಕೂಡಿದ್ದು ಗ್ರಾಮಸ್ಥರು ರಸ್ತೆಯಲ್ಲಿ ಸಂಚರಿಸಲು ಹರ ಸಾಹಸ ಪಡಬೇಕಿತ್ತು. ಹೀಗಾಗಿ ಮನಗೊಂಡು ಗ್ರಾಪಂ ಅನುದಾನದಲ್ಲಿಯೇ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎಂದರು.
ಗ್ರಾಮ ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಸೌಕರ್ಯಗಳನ್ನು ಗ್ರಾಪಂ ವತಿಯಿಂದ ಹಂತ-ಹಂತವಾಗಿ ಕಲ್ಪಿಸಲಾಗಿದೆ. ಶಾಂತಿಪುರ ಗ್ರಾಪಂ ಬೆಂಗಳೂರಿಗೆ ಸ್ವಲ್ಪವೇ ದೂರದಲ್ಲಿದ್ದರೂ ಇಂದಿಗೂ ಅಗತ್ಯ ಸೌಲಭ್ಯಗಳಿಂದ ಜನ ವಂಚಿತರಾಗಿದ್ದಾರೆ.
ಚಿಕ್ಕನಾಗಮಂಗಲ ಗ್ರಾಮದ ಬಳಿ ಇರುವ ಘನ ತ್ಯಾಜ್ಯ ಘಟಕದಿಂದ ಜನರು ನಾನಾ ಸಮಸ್ಯೆ ಅನುಭಸುತ್ತಿದ್ದು, ಕೂಡಲೇ ಘನ ತ್ಯಾಜ್ಯ ಘಟಕವನ್ನು ಸರ್ಕಾರ ಬೇರೆಡೆಗೆ ವರ್ಗಾಯಿಸಬೇಕು. ಹಾಗೂ ಶಾಂತಿಪುರ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಸರ್ಕಾರ ಕೂಡಲೇ ಕಾವೇರಿ ನೀರು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು 6 ತಿಂಗಳಲ್ಲಿ ಗ್ರಾಪಂ ಚುನಾವಣೆ ನಡೆಯಲಿದ್ದು, ಜನರ ಕಷ್ಟಗಳಿಗೆ ಸ್ಪಂದಿಸುವ ಜನ ಪ್ರತಿನಿಧಿಗಳನ್ನು ಮತದಾರರು ಆಯ್ಕೆ ಮಾಡಿಕೊಳ್ಳುವ ಮೂಲಕ ಗ್ರಾಮಾಭಿವೃದ್ಧಿಗೆ ಸಹಕರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಮಂಜುನಾಥ್, ಮುನಿಕೃಷ್ಣ, ಮುಖಂಡರಾದ ಗಟ್ಟಹಳ್ಳಿ ಸೀನಪ್ಪ, ರಾಮಕೃಷ್ಣ, ಶ್ರೀನಿವಾಸ್, ಪಿಡಿಓ ಬಸವರಾಜ್ ಮತ್ತು ಗ್ರಾಮಸ್ಥರು ಹಾಜರಿದ್ದರು.