ಮಾಗಡಿ: ಇತಿಹಾಸ ಪ್ರಸಿದ್ಧ ಸಾವನದುರ್ಗದ ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವದ ಮೇ 18ರಂದು ನಡೆಯಲಿದೆ. ಬ್ರಹ್ಮರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ತಾಲೂಕು ಆಡಳಿತ ಬದ್ಧವಾಗಿದೆ. ಹೀಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಪವಿಭಾಗಾಧಿಕಾರಿ ಟಿ.ಎನ್.ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ಮಾಡಬಾಳ್ ಹೋಬಳಿ ಹಂಚೀಕುಪ್ಪೆ ಗ್ರಾಮ ಪಂಚಾಯ್ತಿಗೆ ಸೇರಿದ ಪ್ರಸಿದ್ಧ ಸಾವನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋತ್ಸವದ ಪ್ರಯಕ್ತ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಪ್ರಕೃತಿಯ ಮಡಿಲಲ್ಲಿರುವ ಪ್ರಸಿದ್ಧ ಸಾವನದುರ್ಗ ಪ್ರವಾಸಿ ತಾಣವಾಗಿದೆ. ಮುಜರಾಯಿ ಇಲಾಖೆಗೆ ಸೇರಿದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರತಿವರ್ಷವೂ ಬ್ರಹ್ಮರಥೋತ್ಸವ ನಡೆದುಕೊಂಡು ಬರುತ್ತಿದೆ. ಆದರೆ, ಪ್ರತಿವರ್ಷವೂ ಸಹ ಜಾತ್ರಾ ಮಹೋತ್ಸವದಲ್ಲಿ ಅವ್ಯವಸ್ಥೆಯ ಹೆಚ್ಚಾಗಿದೆ ಎಂಬ ಆರೋಪ ಭಕ್ತರಿಂದ ಕೇಳಿಬರುತ್ತಿದೆ. ಆದ್ದರಿಂದ ಈ ವರ್ಷ ಯಾವುದೇ ಅವ್ಯವಸ್ಥೆಗೆ ಅವಕಾಶ ನೀಡದಂತೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ನಡೆಸಬೇಕೆಂಬ ಉದ್ದೇಶದಿಂದ ಸಂಬಂಧಪಟ್ಟ ಎಲ್ಲಾ ಇಲಾಖಾ ಅಧಿಕಾರಿಗಳು ಮತ್ತು ದೇವಸ್ಥಾನದ ಸಮಿತಿ ಮುಖ್ಯಸ್ಥರು ಹಾಗೂ ಭಕ್ತರ ಸಮ್ಮುಖದಲ್ಲಿ ಚರ್ಚಿಸಿ, ಸೂಕ್ತ ಸಲಹೆ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿ ವರ್ಗಕ್ಕೆ ತಾಕೀತು ಮಾಡಲಾಗಿದೆ ಎಂದು ತಿಳಿಸಿದರು.
ಕಟ್ಟುನಿಟ್ಟಿನ ಕ್ರಮ: ಪ್ರತಿವರ್ಷವೂ ಸಾವನದುರ್ಗದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಜಮಾಯಿಸುತ್ತಿದ್ದಾರೆ. ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಇದರಿಂದ ಈಗಿರುವ ಶೌಚಾಲಯಗಳ ಜೊತೆಗೆ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲು ಗುತ್ತಿಗೆದಾರರಿಗೆ ಗುತ್ತಿಗೆ ಕೊಡಲು ಸೂಚನೆ ನೀಡಿದ್ದೇನೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ಭಕ್ತರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಾಯಕನಪಾಳ್ಯದ ಗೇಟ್ನಿಂದ ಸಾವನದುರ್ಗದವರೆಗೆ ರಸ್ತೆಯ ಎರಡು ಬದಿ ಯಾವುದೇ ವಾಹನಗಳನ್ನು ಪಾರ್ಕಿಂಗ್ ಮಾಡದಂತೆ ಪೊಲೀಸ್ ಇಲಾಖೆಗೆ ಮಾರ್ಗದರ್ಶನ ಮಾಡಲಾಗಿದೆ ಎಂದು ಹೇಳಿದರು.
ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ: ಸಾವನದುರ್ಗದಲ್ಲಿ ಕಾರು, ಬಸ್, ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕವಾಗಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು. ಹಾಗೊಂದು ವೇಳೆ ಹೆಚ್ಚಿನ ಪಾರ್ಕಿಂಗ್ ವ್ಯವಸ್ಥೆಗೆ ಸಮಸ್ಯೆಯಾದರೆ, ನಾಯಕನಪಾಳ್ಯದ ಬಳಿ ಪಾರ್ಕಿಂಗ್‌ಗೆ ವ್ಯವಸ್ಥೆಗೆ ವಿಸ್ತರಿಸಲಾಗುವುದು. ಆಟೊ, ಮಿನಿ ಬಸ್‌ಗಳಲ್ಲಿ ಸಾರ್ವಜನಿಕರನ್ನು ಕರೆದೊಯ್ಯಲು ವ್ಯವಸ್ಥೆ ಮಾಡಲು ಗ್ರಾಮ ಪಂಚಾಯ್ತಿ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಅಟೋಗಳಲ್ಲಿ ಸಾರಿಗೆ ನಿಯಮ ಪಾಲಿಸುವಂತೆ ನೋಡಿಕೊಳ್ಳಲು ಪೊಲೀಸರಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.
ದರ್ಶನಕ್ಕೆ ಉತ್ತಮ ವ್ಯವಸ್ಥೆ: ಶ್ರೀಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಮತ್ತು ದೇವಸ್ಥಾನದಲ್ಲಿನ ದೇವರ ದರ್ಶನಕ್ಕೂ ಸಹ ಯಾವುದೇ ಗೊಂದಲಕ್ಕೆ ಅವಕಾಶಕೊಡದಂತೆ ಉತ್ತಮ ವ್ಯವಸ್ಥೆ ಕಲ್ಪಿಸಲಾಗುವುದು. ಕುಡಿವ ನೀರು ಪೂರೈಕೆ, ಆರೋಗ್ಯ ಸೇವೆ, ವಿದ್ಯುತ್ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವಂತೆ ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಪ್ರಸಾದ ವಿನಿಯೋಗ ಕಡೆ ಎಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಲಾಗಿದೆ.
ಸಭೆಯಲ್ಲಿ ತಹಶೀಲ್ದಾರ್ ನರಸಿಂಹಮೂರ್ತಿ, ಕಾರ್ಮಿಕದತ್ತಿ ಇಲಾಖೆಯ ಕಾರ್ಯನಿವಾರ್ಹಕ ರಘು, ಮುಜರಾಯಿ ತಹಶೀಲ್ದಾರ್ ಲಕ್ಷ್ಮೀ ನಾರಾಯಣ, ವ್ಯವಸ್ಥಾಪನಾ ಅಧ್ಯಕ್ಷ ನಾಗರಾಜು, ಪಾರುಪತ್ತೆಗಾರ ಸೋಮಶೇಖರ್, ಮುಜರಾಯಿ ಗುಮಾಸ್ತಾ ಚಂದ್ರಶೇಖರ್, ಅರ್ಚಕರು, ದೇವಸ್ಥಾನದ ಸಿಬ್ಬಂದಿ ಭಾಗವಹಿಸಿದ್ದರು