Advertisement

ಗುರಿ ತಲುಪಲು ಬದ್ಧತೆ ಮುಖ್ಯ

02:13 PM Jul 17, 2021 | Team Udayavani |

ಯುವಜನತೆ ಛಲದೊಂದಿಗೆ ನಿರಂತರ ಪ್ರಯತ್ನಪಟ್ಟರೆ ಜೀವನದಲ್ಲಿ ಗೆಲುವು ಸಾಧಿಸಬಹುದು. ಆದರೆ ಗುರಿ ತಲುಪುವ ಬದ್ಧತೆ ಹೊಂದಿರಬೇಕಾದುದು ಮುಖ್ಯ.

Advertisement

ಹಾಗಾಗಿಯೇ ಎಲ್ಲಿ ಬದ್ಧತೆ ಇದೆಯೋ ಅಲ್ಲಿ ಉನ್ನತಿ ಸುಲಭ ಸಾಧ್ಯ ಎಂಬ ಮಾತಿದೆ. ಯುವ ಜನರು ಬದ್ಧತೆಯನ್ನು ಅಳವಡಿಸಿಕೊಳ್ಳಲಿ ಎಂದು ಪ್ರೇರೇಪಿಸುವ ದೃಷ್ಟಿಯಿಂದಲೇ ಸ್ವಾಮಿ ವಿವೇಕಾನಂದರು “ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂದಿದ್ದಾರೆ.

ಶ್ರದ್ಧೆ, ಆತ್ಮವಿಶ್ವಾಸ, ಪರಿಶ್ರಮ ಮತ್ತು ನಿಶ್ಚಿತ ಗುರಿಯಿದ್ದಲ್ಲಿ ಮಾತ್ರವೇ ಜೀವನದಿ ಯಶಸ್ಸು ಗಳಿಸಲು ಸಾಧ್ಯ.ಮೊದಲು ತಮ್ಮನ್ನು ತಾವು ಪ್ರೀತಿಸುವುದನ್ನು ಕಲಿಯಬೇಕು. ಆಗ ಮಾತ್ರ ಇಡೀ ಸಮಾಜ ನಮ್ಮನ್ನು, ಮಾಡುವ ಕೆಲಸವನ್ನು ಪ್ರೀತಿಸಲು ಸಾಧ್ಯ. ಇದಕ್ಕಾಗಿಯೇ ಬದ್ಧತೆ ಅಳವಡಿಸಿಕೊಳ್ಳುವುದು ಅಗತ್ಯ.  ಸವಾಲುಗಳು, ಕಷ್ಟ-ನಷ್ಟಗಳು ಜೀವನದಲ್ಲಿ ಎದುರಾಗುವುದು ಸಹಜ. ಆದರೆ ಮಾಡುವ ಕೆಲಸದಲ್ಲಿ ಬದ್ಧತೆಯೊಂದಿದ್ದರೆ ಅವುಗಳನ್ನು ಸುಲಭವಾಗಿ ಮೆಟ್ಟಿನಿಲ್ಲಬಹುದು. ಬದ್ಧತೆ ಎಂದರೆ ಒಬ್ಬ ವ್ಯಕ್ತಿ  ತಾನು ನಿರ್ವಹಿಸಲು ಇಚ್ಛಿಸಿದ ಕೆಲಸವನ್ನು ಶ್ರದ್ಧೆ, ನಿಷ್ಠೆ, ಪ್ರಾಮಾಣಿಕವಾಗಿ ಪೂರ್ಣಗೊಳಿಸಲು ಪ್ರಯತ್ನಿಸುವ ಮನೋಭಾವವಾಗಿದೆ.

ನಿಜವಾಗಿ ಬದ್ಧತೆ ಹೊಂದಿರುವ  ವ್ಯಕ್ತಿಯು ಎಂತಹ ಕಷ್ಟದ ಸನ್ನಿವೇಷ ಬಂದರೂ ವಿಮುಖನಾಗುವುದಿಲ್ಲ. ಅವರು ವಾಸ್ತವವಾದಿಗಳಾಗಿದ್ದು, ತಮ್ಮ ಶಕ್ತಿ, ಸಾಮರ್ಥ್ಯದ ಬಗ್ಗೆ ನಂಬಿಕೆ ಹೊಂದಿರುತ್ತಾರೆ. ಹಾಗೇ ಸವಾಲುಗಳನ್ನು ಎದುರಿಸುವ ವಿಷಯದಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಇತರರಿಗೆ ಮಾದರಿಯಾಗುತ್ತಾರೆ.

ವಿದ್ವತ್ತಿನ ಗಣಿಯಾಗಿದ್ದ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಪಡೆದಿದ್ದ ಉನ್ನತ ಶಿಕ್ಷಣಕ್ಕೆ ಓರ್ವ ಅಧಿಕಾರಿಯಾಗಿ ಉನ್ನತ ಸ್ಥಾನಮಾನ ಹೊಂದಿ ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಅವರು ತಾನು ಪ್ರತಿನಿಧಿಸಿದ ದಲಿತ ಸಮುದಾಯದ ಒಳಿತಿಗಾಗಿ ನಡೆಸಿದ ಹೋರಾಟ ಕೆಲವು ತಲೆಮಾರುಗಳ ಕಾಲ ಅಸ್ಪೃಶ್ಯತೆಯ ಉರುಳಿನಲ್ಲಿ ನೊಂದ ಜನತೆಗೆ ಬಿಡುಗಡೆಯ ದಾರಿ ತೋರಿಸಿತು. ಇದು ಆ ಸಮುದಾಯಕ್ಕೆ ಸ್ಫೂರ್ತಿಯ ಹೋರಾಟವಾಗಿ ದೇಶದಲ್ಲಿ ಬದಲಾವಣೆಯ ಶಕೆ ಆರಂಭಿಸಿತು.

Advertisement

ದ. ಆಫ್ರಿಕಾದಲ್ಲಿ ವರ್ಣಭೇದ ನೀತಿ, ಆಫ್ರಿಕನ್ನರ ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ನೆಲ್ಸನ್‌ ಮಂಡೇಲಾ, ಬರ್ಮಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಆಂಗ್‌ ಸಾನ್‌ ಸೂಕಿ ಅವರು ದಶಕಗಳ ಕಾಲ ತಾವು ನಂಬಿದ ತತ್ತÌ , ಸಿದ್ಧಾಂತ, ರಾಜಕೀಯ ಗುರಿ ಈಡೇರಿಕೆಗಾಗಿ ದಣಿವಿಲ್ಲದ ಹೋರಾಟ ನಡೆಸಿದ್ದಾರೆ. ಅವರು ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ಕಾರಾಗೃಹ ವಾಸ, ನಿರಂತರ ಸೋಲಿನ ಕಹಿ, ಹಿಂಸೆ ಇವುಗಳಾವುವೂ ಅವರನ್ನು ಕಂಗೆಡಿಸಲಿಲ್ಲ. ಇದೆಲ್ಲ ಹೇಗೆ ಸಾಧ್ಯವಾಯಿತೆಂದರೆ, ಅದಕ್ಕೆಲ್ಲ ಅವರು ಅಳವಡಿಸಿಕೊಂಡಿದ್ದ ಬದ್ಧತೆ ಕಾರಣ.

ಬಹಳಷ್ಟು ಮಂದಿ ದೊಡ್ಡ ಕನಸು ಕಾಣುತ್ತಾರೆ, ಆದರೆ ಬದ್ಧತೆ ಇರದಿದ್ದರೆ ಅವರು ಗುರಿ ಸಾಧನೆಯ ಕಡೆಗೆ ಪಯಣ ಮಾಡುವುದು ಕಷ್ಟ. ಬದ್ಧತೆಯು ವ್ಯಕ್ತಿಯನ್ನು ಗುರಿ ಜತೆಗೆ ಬಂಧಿಸುವ ಅಂಟು ಇದ್ದಂತೆ. ಇದು ವ್ಯಕ್ತಿಯು ಗಂಟೆಗಟ್ಟಲೆ ಕೆಲಸದಲ್ಲಿ ಮಗ್ನನಾಗುವಂತೆ ಮಾಡುತ್ತದೆ. ಬದುಕಿನಲ್ಲಿ ಯಶಸ್ಸಿಗೆ ಬೇಕಾದ ಕೌಶಲಗಳನ್ನು ತನ್ಮೂಲಕ ಪರಿಪೂರ್ಣ ಗೊಳಿಸುತ್ತಾ ಸಾಗುತ್ತದೆ. ಜೆಸ್ಸಿಕಾ ಕಾಕ್ಸ್‌ ಅವರು ಹುಟ್ಟು ಅಂಗವಿಕಲೆಯಾದರೂ ನ್ಯೂನತೆ ಬಗ್ಗೆ ಕೊರಗದೆ ಸವಾಲಾಗಿ ಸ್ವೀಕರಿಸಿ ಪೈಲಟ್‌ ಆಗಿದ್ದಾರೆ.  ಯುವಜನರು ಭವಿಷ್ಯದ ಮುನ್ನೋಟ ಗ್ರಹಿಸಿ  ಕೆಲಸ ಮುನ್ನಡೆಯಬೇಕು. ಬದುಕಲು  ಸಂಶೋಧನ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇದಕ್ಕಾಗಿ ಜೀವನಪರ್ಯಂತ ಬದ್ಧತೆಬೇಕು.

ವಂದನೆಗಳೊಂದಿಗೆ

ಸಂಪಾದಕ

Advertisement

Udayavani is now on Telegram. Click here to join our channel and stay updated with the latest news.

Next