Advertisement

ಮೂಲ ಸೌಕರ್ಯ ಒದಗಿಸಲು ಬದ್ಧ: ನಿರಾಣಿ

09:48 AM Sep 04, 2019 | Suhan S |

ಕೆರೂರ: ಬೀಳಗಿ ಮತಕ್ಷೇತ್ರದ ಲಂಬಾಣಿ ತಾಂಡಾಗಳಲ್ಲಿ ಕುಡಿವ ನೀರು, ರಸ್ತೆ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಕರ್ಯ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವುದಾಗಿ ಶಾಸಕ ಮುರಗೇಶ ನಿರಾಣಿ ವಿವಿಧ ಹಳ್ಳಿಗಳ ಗ್ರಾಮಸ್ಥರಿಗೆ ಭರವಸೆ ನೀಡಿದರು.

Advertisement

ಚಿಂಚಲಕಟ್ಟಿ ಲಂಬಾಣಿ ತಾಂಡಾದಲ್ಲಿ ನಡೆದ ಬಂಜಾರಾ ಸಮುದಾಯದ ಕುಂದು ಕೊರತೆ ನಿವಾರಣೆ ಸಭೆಯಲ್ಲಿ ಅವರು ಮಾತನಾಡಿದರು. ಕೆರೂರ ಹೋಬಳಿ ಸುತ್ತಮುತ್ತಲಿನ ನರೇನೂರ ಎಲ್ಟಿ 1 ಹಾಗೂ 2, ಜಲಗೇರಿ ಎಲ್ಟಿ 1,2 ಹಾಗೂ ಚಿಂಚಲಕಟ್ಟಿ ಮತ್ತು ಇನಾಂ ಹುಲ್ಲಿಕೇರಿ ಲಂಬಾಣಿ ತಾಂಡಾಗಳಲ್ಲಿ ಕುಡಿಯುವ ನೀರು, ಸಿಸಿ (ಕಾಂಕ್ರೀಟ್) ರಸ್ತೆ ಸಮಸ್ಯೆ ಸೇರಿದಂತೆ ರುದ್ರಭೂಮಿ ಇಲ್ಲದ ಕಾರಣ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಆಶ್ರಯ ಮನೆಗಳು, ವಿಧವೆಯರಿಗೆ ಮತ್ತು ಅಂಗವಿಕಲರಿಗೆ, ದೇವದಾಸಿಯರಿಗೆ ಸರಿಯಾಗಿ ಮಾಶಾಸನ ವಿಲೇವಾರಿ ಆಗುತ್ತಿಲ್ಲ ಎಂದು ಜಲಗೇರಿ ತಾಂಡಾ ನಿವಾಸಿ ಮಂಜುನಾಥ ಪಮ್ಮಾರ ಸಮಸ್ಯೆಗಳ ಕುರಿತು ಶಾಸಕರ ಗಮನಕ್ಕೆ ತಂದರು.

ಪಿಡಿಒಗಳ ತರಾಟೆಗೆ: ನನ್ನ ಕ್ಷೇತ್ರದ ಪ್ರತಿಯೊಂದು ತಾಂಡಾಗಳಲ್ಲಿ ಯಾರು ಪಿಂಚಣಿ ವಂಚಿತರಾಗಿದ್ದಾರೆ ಎಂಬುದರ ಕುರಿತು ಮೊದಲು ಪಟ್ಟಿ ತಯಾರಿಸಿ, ಶೀಘ್ರದಲ್ಲಿ ಅವರ ಸಮಸ್ಯೆಗಳ ನಿವಾರಣೆಗೆ ಪ್ರಾಧಾನ್ಯತೆ ಕೊಡಿ. ಸೂಚನೆ ನಿರ್ಲಕ್ಷಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಭೆಯಲ್ಲಿದ್ದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳನ್ನು ಶಾಸಕ ತರಾಟೆಗೆ ತೆಗೆದುಕೊಂಡರು.

ಮೊದಲು ನೀರು ಕೊಡಿ: ತಾಂಡಾಗಳ ಜನತೆಗೆ ಮೊದಲು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ. ಅಗತ್ಯವಿದ್ದಲ್ಲಿ ಕೂಡಲೇ ಕೊಳವೆಬಾವಿಗಳನ್ನು ಕೊರೆಸುವಂತೆ ಅಕಾರಿಗಳಿಗೆ ಸೂಚಿಸಿದ ಶಾಸಕರು, ತಾಂಡಾಗಳ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸುವ ಸಲುವಾಗಿ ಹೊಸದಾಗಿ ಬರುವ ಅತಿಥಿ ಶಿಕ್ಷಕರನ್ನು ನಿಯೋಜಿಸುವ ಮೂಲಕ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳುವೆ ಎಂದರು.

ಈ ಭಾಗದಲ್ಲಿ ಪಶು ವೈದ್ಯರ ಅಭಾವವಿದೆ. ಕೆರೂರ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಶಿವಾನಂದ ಕರಡಿಗುಡ್ಡ ಅವರಿಗೆ ಪ್ರಮುಖ ಗ್ರಾಮಗಳಲ್ಲಿ ನಿಗದಿ ಮಾಡಿದ ಒಂದೊಂದು ದಿನ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಜಿಪಂ ಸದಸ್ಯ ಹೂವಪ್ಪ ರಾಠೊಡ, ಹೂಲಗೇರಿ ಗ್ರಾಪಂ ಅಧ್ಯಕ್ಷ ಹನಮಂತ ಮುಗಳೊಳ್ಳಿ, ಗೋವಿಂದಗೌಡ ಕೆರಕಲಮಟ್ಟಿ, ಹನಮಂತಗೌಡ ಗೌಡರ, ಬಾಬುರಾವ್‌ ಕುಲಕರ್ಣಿ, ರಾಜು ಕಕರೆಡ್ಡಿ, ಎಂ.ಡಿ. ವಾಲೀಕಾರ, ಎಂ.ಎಚ್. ಕೆರೂರ, ಮಲ್ಲಪ್ಪ ಪೂಜಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next