Advertisement

ಕೆಪಿಸಿಸಿ ನಿರ್ಧಾರಕ್ಕೆ ಬದ್ಧ: ಅತೃಪ್ತ ಕೈ ಸದಸ್ಯರು

06:42 AM Jun 24, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಫ‌ಲಿತಾಂಶ ಪ್ರಕಟಗೊಂಡ ಬಳಿಕ ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು, ಇದೇ ತಿಂಗಳ 25 ರಂದು ನಿಗದಿಯಾಗಿರುವ ಜಿಪಂ ಸಾಮಾನ್ಯ ಸಭೆಗೂ ಮೊದಲೇ ಜಿಪಂನ ಕಾಂಗ್ರೆಸ್‌ ಸದಸ್ಯರಲ್ಲಿ ಉಲ್ಬಣಿಸಿರುವ ಭಿನ್ನಮತ ಶಮನ ಮಾಡಲು ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಂಜೆ 4 ಗಂಟೆಗೆ ಸಭೆ ನಿಗದಿಯಾಗಿದ್ದು, ಸಭೆಯತ್ತ ಎಲ್ಲರ ಚಿತ್ತ ಹರಡಿದೆ.

Advertisement

ಮುಂದೂಡಲಾಗಿತ್ತು: ಕಳೆದ ವರ್ಷ ಡಿ.26 ರಂದು ಜಿಪಂ ಅಧ್ಯಕ್ಷ ಹೆಚ್‌.ವಿ.ಮಂಜುನಾಥ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಗೆ ಆಡಳಿತರೂಢ ಕೈ ಸದಸ್ಯರು ಗೈರಾಗಿದ್ದಕ್ಕೆ ಕೋರಂ ಕೊರತೆಯಿಂದ ಅಧ್ಯಕ್ಷರು ಸಭೆ ಮುಂದೂಡಿದ್ದರು. ಬಳಿಕ ಎದುರಾದ ಲೋಕಸಭಾ ಚುನಾವಣೆಯಿಂದ ಸಾಮಾನ್ಯ ಸಭೆ ನಡೆಸಲು ನೀತಿ ಸಂಹಿತೆ ಅಡ್ಡಿಯಾಗಿತ್ತು.

ಆದರೆ ಇದೀಗ ಸಾಮಾನ್ಯ ಸಭೆ ಜೂ.25ಕ್ಕೆ ನಿಗದಿಯಾಗಿದ್ದರೂ ಜಿಪಂನಲ್ಲಿ ಮತ್ತೆ ಕೈ ಸದಸ್ಯರ ಗುಂಪುಗಾರಿಕೆ ಸ್ಫೋಟಗೊಂಡು ಸಭೆ ರದ್ದಾಗಬಾರದೆಂಬ ಕಾರಣಕ್ಕೆ ಸದಸ್ಯರ ವೈಮನಸ್ಸು ಶಮನ ಮಾಡಲು ಕೆಪಿಸಿಸಿ ಮಧ್ಯ ಪ್ರವೇಶಿಸಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಸಂಸದರು, ಹಾಲಿ ಶಾಸಕರ ಸಭೆ ಕರೆಯಲಾಗಿದೆ.

2-3 ಬಾರಿ ಸಭೆ ಮುಂದೂಡಿಕೆ: ಸಾಮಾನ್ಯ ಸಭೆಯ ದಿನಾಂಕ ನಿಗದಿಯಾಗುತ್ತಿದ್ದಂತೆ ಸದಸ್ಯರ ಭಿನ್ನಮತ ಶಮನಕ್ಕೆ ಹಾಗೂ ಜಿಪಂ ಅಧ್ಯಕ್ಷರ ಬದಲಾವಣೆ ಸಂಬಂಧ ಚರ್ಚೆ ನಡೆಸಲು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇದುವರೆಗೂ ಎರಡು, ಮೂರು ಸಭೆಯ ದಿನಾಂಕ, ಸಮಯ ನಿಗದಿಯಾಗಿ ಮುಂದೂಡಲಾಗಿದೆ.

ಆದರೆ ಜಿಪಂ ಸಭೆ ಮಂಗಳವಾರ ನಡೆಯಲಿರುವುದರಿಂದ ಸೋಮವಾರ ಶತಾಯಗತಾಯ ಅತೃಪ್ತ ಸದಸ್ಯರನ್ನು ಕರೆಸಿ ಮಾತನಾಡಲು ಕೊನೆಗೂ ಕೆಪಿಸಿಸಿ ಮುಹೂರ್ತ ನಿಗದಿಪಡಿಸಿದೆ. ಸಭೆಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಮಾಜಿ ಸಂಸದರ ಜೊತೆಗೆ ಜಿಲ್ಲೆಯ ಶಾಸಕರನ್ನು ಕೂಡ ಆಹ್ವಾನಿಸಲಾಗಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

Advertisement

ಮಂಜುನಾಥ ಮುಂದುವರಿಸಲು ಒತ್ತಾಯ: ಹಾಲಿ ಜಿಪಂ ಅಧ್ಯಕ್ಷ ಹೆಚ್‌.ವಿ.ಮಂಜುನಾಥ, ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಅವರನ್ನೇ ಮುಂದುವರೆಸಬೇಕೆಂಬುದು ಜಿಲ್ಲಾ ಉಸ್ತುವಾರಿ ಶಿವಶಂಕರರೆಡ್ಡಿ ಹಾದಿಯಾಗಿ ಕೆಲ ಶಾಸಕರ ಅಭಿಪ್ರಾಯವಾದರೂ ಶಿವಶಂಕರರೆಡ್ಡಿ ವಿರೋಧಿ ಬಣ ಮಾತ್ರ ಎಲ್ಲಾ ಅಧಿಕಾರ ಗೌರಿಬಿದನೂರಿಗೆ ಸೀಮಿತ ಆಗಬೇಕೆ? ಬೇರೊಬ್ಬರಿಗೆ ಅವಕಾಶ ಮಾಡಿಕೊಡಲಿ ಎಂಬ ವಾದ ಮಂಡಿಸುತ್ತಿದೆ.

ಹೀಗಾಗಿ ಜಿಪಂ ಅಧ್ಯಕ್ಷರ ಬದಲಾವಣೆ ವಿಚಾರ ಜಿಲ್ಲೆಯ ಕೆಲ ಕಾಂಗ್ರೆಸ್‌ನ ಹಾಲಿ, ಮಾಜಿ ಶಾಸಕರಿಗೆ ಪ್ರತಿಷ್ಠೆಯಾಗಿರುವುದರಿಂದ ಸೋಮವಾರ ನಡೆಯುವ ಸಭೆ ಮಹತ್ವ ಪಡೆದುಕೊಂಡಿದೆ. ಈಗಾಗಲೇ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಒಗ್ಗೂಡಿಸಲಾಗದಷ್ಟು ಗುಂಪುಗಾರಿಕೆ, ಭಿನ್ನಮತ ಉಲ್ಬಣಿಸಿದ್ದು, ಲೋಕಸಭಾ ಚುನಾವಣೆ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಅದು ತಾರಕಕ್ಕೇರಿದೆ.

ಕೈ ನಾಯಕರು ಯಾರ ಕಡೆ ಬ್ಯಾಟಿಂಗ್‌?: ಸದ್ಯ ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಕೆ.ಎಚ್‌.ಮುನಿಯಪ್ಪ, ಎಂ.ವೀರಪ್ಪ ಮೊಯ್ಲಿ ಯಾರ ಪರ ಬ್ಯಾಟಿಂಗ್‌ ಬೀಸುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ. ವೀರಪ್ಪ ಮೊಯ್ಲಿ ಹಿಂದುಳಿದ ವರ್ಗದ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಆದ್ದರಿಂದ ಜಿಪಂ ಅಧ್ಯಕ್ಷರಾಗಿ ಹೆಚ್‌.ವಿ.ಮಂಜುನಾಥ ಅಧ್ಯಕ್ಷರಾಗಿ ಮಾಡುತ್ತಿರುವ ಜನಪರ ಕಾರ್ಯ ಅವರ ಕೈ ಹಿಡಿಯುತ್ತಾ? ಅಥವಾ ಸದಸ್ಯರ ಬಂಡಾಯಕ್ಕೆ ಅವರ ತಲೆದಂಡ ಆಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಕೈ ಭಿನ್ನಮತಕ್ಕೆ ಒಡೆದ ಮನೆಯಾದ ಜಿಪಂ: ಚಿಕ್ಕಬಳ್ಳಾಪುರ ಜಿಪಂನಲ್ಲಿ ಒಟ್ಟು 28 ಸದಸ್ಯರ ಬಲಾಬಲದಲ್ಲಿ ಕಾಂಗ್ರೆಸ್‌ ಬರೋಬ್ಬರಿ 21 ಸದಸ್ಯ ಬಲವನ್ನು ಹೊಂದಿದ್ದು, ಜೆಡಿಎಸ್‌ 5 ಹಾಗೂ ಬಿಜೆಪಿ ಮತ್ತು ಸಿಪಿಎಂ ತಲಾ ಒಬ್ಬ ಸದಸ್ಯರನ್ನು ಹೊಂದಿದೆ. ಆಡಳಿತ ಪಕ್ಷ ಕಾಂಗ್ರೆಸ್‌ಗೆ ಬಹುಮತ ಇದ್ದರೂ ಕಾಂಗ್ರೆಸ್‌ ನಾಯಕರೊಳಗಿನ ಗುಂಪುಗಾರಿಕೆ, ಭಿನ್ನಮತದಿಂದ ಇದೀಗ ಮತ್ತೆ ಜಿಪಂ ಒಡೆದ ಮನೆಯಾಗಿದೆ.

ಆರಂಭದಲ್ಲಿ ಮೊದಲ ಅವಧಿಗೆ ಜಿಪಂ ಅಧ್ಯಕ್ಷರಾಗಿದ್ದ ಪಿ.ಎನ್‌.ಕೇಶವರೆಡ್ಡಿ ರಾಜೀನಾಮೆಗೆ ಕಾಂಗ್ರೆಸ್‌ ಭಿನ್ನಮತೀಯ ಸದಸ್ಯರು ಸತತವಾಗಿ ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗಿ ಕೊನೆಗೂ ಅವರಿಂದ ರಾಜೀನಾಮೆ ಪಡೆದು ಹೊಸದಾಗಿ ಗೌರಿಬಿದನೂರು ತಾಲೂಕಿನ ಹೊಸೂರು ಜಿಪಂ ಸದಸ್ಯ ಹೆಚ್‌.ವಿ.ಮಂಜುನಾಥ ಜಿಪಂ ಅಧ್ಯಕ್ಷರಾದರು.

ಎರಡು, ಮೂರು ಸಾಮಾನ್ಯ ಸಭೆಗಳನ್ನು ನಡೆಸಿದರೂ ಇದೀಗ ಮತ್ತೆ ಕಾಂಗ್ರೆಸ್‌ ಒಳಗಿನ ನಾಯಕರ ಗುಂಪುಗಾರಿಕೆ, ಭಿನ್ನಮತಕ್ಕೆ ಹೆಚ್‌.ವಿ.ಮಂಜುನಾಥ ವಿರುದ್ಧ ತಿರುಗಿ ಬಿದ್ದಿರುವ ಸದಸ್ಯರು ಕಳೆದ ಡಿ.26 ರಂದು ಕರೆದಿದ್ದ ಸಾಮಾನ್ಯ ಸಭೆಗೆ ಗೈರಾಗುವ ಮೂಲಕ ಕೋರಂ ಕೊರತೆಯಿಂದಾಗಿ ಸಭೆ ರದ್ದಾಗಿತ್ತು. ಸದ್ಯ ಜಿಪಂ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಸ್ವಪಕ್ಷೀಯ ಸದಸ್ಯರು ನಡೆಸಿರುವ ಬಂಡಾಯಕ್ಕೆ ಜೆಡಿಎಸ್‌, ಬಿಜೆಪಿ, ಸಿಪಿಎಂ ಸದಸ್ಯರು ಕೈ ಜೋಡಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಜಿಪಂ ಅಧ್ಯಕ್ಷರ ಬದಲಾವಣೆ ವಿಚಾರದ ಸಂಬಂಧ ಸೋಮವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಏನೇ ತಿರ್ಮಾನವಾದರೂ ಅದಕ್ಕೆ ನಾವು ಬದ್ಧ.
-ಪಿ.ಎನ್‌.ಪ್ರಕಾಶ್‌, ಜಿಪಂ ಸದಸ್ಯ, ಶಾಸಕ ಸುಧಾಕರ್‌ ಆಪ್ತ

ಜಿಲ್ಲೆಯಲ್ಲಿ ತೀವ್ರ ಬರಗಾಲ ಇರುವ ಸಂದರ್ಭದಲ್ಲಿ ಜಿಪಂ ಸಾಮಾನ್ಯ ಸಭೆಗಳನ್ನು ಪದೇ ಪದೆ ಮುಂದೂಡುವುದು ಸರಿಯಲ್ಲ. ಅವರ ವೈಯಕ್ತಿಕ ಪ್ರತಿಷ್ಠೆಗಳಿಗೆ ಜನರನ್ನು ಬಲಿಪಶು ಮಾಡುವುದು ಸರಿಯಲ್ಲ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳ ಮೇವಿನ ಸಮಸ್ಯೆ ತೀವ್ರವಾಗಿದೆ. 25ಕ್ಕೆ ನಿಗದಿಯಾಗಿರುವ ಸಾಮಾನ್ಯ ಸಭೆಗೆ ನಾವು ಹೋಗುತ್ತೇವೆ.
-ಕೆ.ಸಿ.ರಾಜಾಕಾಂತ್‌, ಜೆಡಿಎಸ್‌ ಜಿಪಂ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next