ಕಲಬುರಗಿ: ಜೀವನದಲ್ಲಿ ಯಶಸ್ಸಿನಿಂದ ಸರಕಾರಿ ಹುದ್ದೆಗಳಿಗೆ ಆಯ್ಕೆಗೊಂಡು ಸೇವಾ ವಲಯಕ್ಕೆ ಬರುವ ಪ್ರತಿಯೊಬ್ಬರು ಜನರ ಸೇವೆಗೆ ಬದ್ಧತೆ ತೋರಿಸಿ ಎಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇಲ್ಲಿನ ವಿಶ್ವೇಶ್ವರಯ್ಯ ಭವನದಲ್ಲಿ ಗುರುವಾರ ಮಾಪಣ್ಣ ಖರ್ಗೆ ಸ್ಮರಣಾರ್ಥ ಸಿದ್ಧಾರ್ಥ ಕಾನೂನು ಕಾಲೇಜು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವು ಕೆಪಿಎಸ್‌ಸಿ ವಿವಿಧ ಗೆಜೆಟೆಡ್ ಅಧಿಕಾರಿಗಳ ಹುದ್ದೆಗಳಿಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಧಿಕಾರಿಗಳಾಗಿ ಸೇವೆ ಆರಂಭಿಸುವ ಇವತ್ತಿನ ಸಾಧಕರು, ಮುಂದೆ ಆಮಿಷಕ್ಕೆ ಬಲಿಯಾಗಿ ಜನರಿಗೆ ಮೋಸ ಮಾಡುವ ಅಥವಾ ಅವರನ್ನು ಅವರ ಹಕ್ಕಿನಿಂದ ವಂಚನೆ ಮಾಡುವಂತಹ ಕೆಲಸಕ್ಕೆ ಇಳಿಯದೆ ಪ್ರಮಾಣಿಕವಾಗಿ ಸೇವೆ ಮಾಡಬೇಕು ಎಂದರು.
ಈಗಾಗಲೇ ವಿವಿಧ ಹುದ್ದೆಗಳಿಗೆ ಆಯ್ಕೆಗೊಂಡಿರುವ ಈ ಪ್ರದೇಶದ ಅಭ್ಯರ್ಥಿಗಳು ಇನ್ನು ಮುಂದೆ ತಾವು ಸಹ ಕನಿಷ್ಠ 10 ಅಭ್ಯರ್ಥಿಗಳಿಗೆ ಬೋಧಿಸುವ ಮನಸ್ಸು ಮಾಡಬೇಕೆಂದು ಸಲಹೆ ನೀಡಿದರು. ಈಗ ಕೆಪಿಎಸ್‌ಸಿ ಮೂಲಕ ತಹಶೀಲ್ದಾರ್, ಡಿವೈಎಸ್ಪಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳು ಕೇವಲ ಇಷ್ಟಕ್ಕೆ ಸಮಾಧಾನ ತಂದುಕೊಳ್ಳದೆ ಯುಪಿಎಸ್‌ಸಿ ಕನಸು ಇಟ್ಟುಕೊಂಡು ಇನ್ನಷ್ಟು ಮೇಲ್ಮಟ್ಟಕ್ಕೆ ಏರಬೇಕು ಎಂದರು.
ಅಂಬೇಡ್ಕರ್ ಅವರು ಹೇಳುವಂತೆ, 100 ಜನ ಗುಮಾಸ್ತರು ಒಬ್ಬ ಐಎಎಸ್ ಅಧಿಕಾರಿಯನ್ನು ಸರಿಗಟ್ಟಲು ಸಾಧ್ಯವಿಲ್ಲ. ಆದ್ದರಿಂದ ನೀವುಗಳು ನಿಮ್ಮ ಕನಸನ್ನು ಐಎಎಸ್ ಆಗುವುದಕ್ಕೆ ಮೀಸಲಿಡಬೇಕು. ಇವತ್ತು ನೀವು ಹೊಂದಿರುವ ಸ್ಥಾನದಲ್ಲಿಯೇ ಉಳಿಯದೇ ಇನ್ನೂ ಎತ್ತರಕ್ಕೆ ಬೆಳೆಯಿರಿ ಎಂದು ಹಾರೈಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, 371 (ಜೆ) ಮೂಲಕ ಈ ಭಾಗದ ಯುವ ಪೀಳಿಗೆ ಭವಿಷ್ಯ ಭದ್ರಗೊಂಡಂತಾಗಿದೆ ಎಂದು ಸಮಾಧಾನ ವ್ಯಕ್ತಪಡಿಸಿದರು. ರಾಯಚೂರು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸ್ಪರ್ಧಾತ್ಮಕ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳ ಪರವಾಗಿ ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಾರುತಿ ಮಾಲೆ, ಟಿಸಿಸಿಇ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ವೇದಿಕೆಯಲ್ಲಿದ್ದರು. ರಾಹುಲ್ ಎಂ. ಖರ್ಗೆ, ರಾಜ್ಯ ಪ್ರವಾಸೋದ್ಯಮ ಇಲಾಖೆ ವಿಶೇಷಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಇದ್ದರು.