ಬೆಂಗಳೂರು: “ನನಗೆ ಕಿರುಕುಳ ನೀಡುತ್ತಿರುವ ಪತಿಯ ವಿರುದ್ಧ ಮಹದೇವಪುರ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ,” ಎಂದು ಆರೋಪಿಸಿ ಮಹಿಳೆಯೊಬ್ಬರು ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ವಿಷ ಕೊಟ್ಟು ತಾನೂ ಆತ್ಮಹತ್ಯೆಗೆ ಯತ್ನಿಸಿದ ಹೈಡ್ರಾಮಾ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
34 ವರ್ಷದ ಮಹಿಳೆ ಮತ್ತು ಆಕೆಯ 14 ಮತ್ತು 12 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರು ಪ್ರಾಣಾಪಾಯದಿಂದ ಪರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ಆತ್ಮಹತ್ಯೆ ಹೈಡ್ರಾಮಾ ಘಟನೆ ನಡೆದ ಕೂಡಲೇ ಮಹದೇವಪುರ ಠಾಣೆ ಪೊಲೀಸರು ಮಹಿಳೆಯ ಮೂರನೇ ಪತಿ ಮುರುಳಿ ಕುಮಾರ್ ವಿರುದ್ಧ ಪೋಕೊ, ವರದಕ್ಷಿಣೆ ಕಿರುಕುಳ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸೋಮವಾರ ಮಹಿಳೆ ಮುರುಳಿ ಕುಮಾರ್ ವಿರುದ್ಧ ಮಹದೇವಪುರ ಪೊಲೀಸರಿಗೆ ದೂರು ನೀಡಿದ್ದಳು. ಆದರೆ ಪೊಲೀಸರು ಹಾಕಿದ್ದ ಸೆಕ್ಷನ್‌ನಿಂದ ಅಸಮಾಧಾನಗೊಂಡಿದ್ದ ಮಹಿಳೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲು ಮಂಗಳವಾರ ಇಬ್ಬರು ಹೆಣ್ಣುಮಕ್ಕಳೊಂದಿಗೆ ಆಯುಕ್ತರನ್ನು ಭೇಟಿಯಾಗಲು ಬಂದಿದ್ದಳು.
ಈ ವೇಳೆ ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ಇನ್ನೂ ಮಹಿಳೆ ಮೇಲೆ ಮುರುಳಿಧರ್ ನೀಡಿದ ದೂರಿನ ಮೇರೆಗೆ ಆಕೆ ವಿರುದ್ಧ ಕೂಡ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಮೂರು ಮದುವೆಯಾಗಿರುವ ಮಹಿಳೆ: ಮಹಿಳೆಗೆ ಈಗಾಗಲೇ ಎರಡು ಮದುವೆಯಾಗಿ ಇಬ್ಬರು ಗಂಡರಿಂದ ದೂರ ಇದ್ದಳು. ವೃತ್ತಿಯಲ್ಲಿ ಚಾಲಕನಾಗಿರುವ ಮುರುಳಿ ಕುಮಾರ್ ಜತೆ ಮಹಿಳೆ ಸಂಪರ್ಕ ಹೊಂದಿ ಬಳಿಕ ಒಂದು ವರ್ಷದ ಹಿಂದೆ ವಿವಾಹವಾಗಿದ್ದಳು. ಇತ್ತೀಚೆಗೆ ಮುರುಳಿ ಮಹಿಳೆಯಿಂದ ಅಂತರ ಕಾಯ್ದುಕೊಂಡಿದ್ದ. ಆದರೆ ಮುರುಳಿಯನ್ನು ಬಿಡದ ಮಹಿಳೆ ಆತನಿಗೆ ಬೆದರಿಸಿ ಹಣ ಪಡೆಯುತ್ತಿದ್ದಳು.
ಸೋಮವಾರ ರಾತ್ರಿ ಮುರುಳಿ ಅವರ ಕುಟುಂಬಸ್ಥರ ಬಳಿ ಜಗಳವಾಡಿರುವ ಮಹಿಳೆ ಬಳಿಕ ನೇರವಾಗಿ ಮಹದೇವಪುರ ಠಾಣೆಗೆ ಬಂದು ದೂರು ನೀಡಿದ್ದಳು. ಮುರುಳಿ ತನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ದೂರಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.