Advertisement

ಆಯೋಗದ ವರದಿ ಜಟಾಪಟಿ

08:15 AM Nov 16, 2017 | Team Udayavani |

ಸುವರ್ಣಸೌಧ: ಪರಿಶಿಷ್ಟ ಜಾತಿಯಲ್ಲಿ ಜನಸಂಖ್ಯೆ ಆಧಾರದ ಮೇಲೆ ಮೀಸಲು ಹಂಚಿಕೆ ಮಾಡುವ ಕುರಿತಂತೆ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ವಿಚಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಜಟಾಪಟಿಗೆ ಕಾರಣವಾಯಿತು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಸಮಾಜ ಕಲ್ಯಾಣ ಸಚಿವ ಎಚ್‌ ಆಂಜನೇಯ, ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಆರೋಪಿಸಿದರೆ, ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ಸದಾಶಿವ ಆಯೋಗದ ವರದಿಯ ಅಂಶಗಳನ್ನು ಮುಚ್ಚಿಟ್ಟು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಚಿವ ಆಂಜನೇಯ ಮತ್ತು ನರೇಂದ್ರಸ್ವಾಮಿ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸದಾಶಿವ ಆಯೋಗದ ವರದಿ ಜಾರಿ ಕುರಿತಂತೆ ಪಕ್ಷದಲ್ಲಿರುವ ದಲಿತ ಸಮುದಾಯದ ಹಿರಿಯ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ. ಸಂಸದ ಕೆ.ಎಚ್‌.  ಮುನಿಯಪ್ಪ ಕೂಡ ಸದಾಶಿವ ಆಯೋಗದ ವರದಿ ಜಾರಿಯಾಗಬೇಕೆಂದು ಒತ್ತಾಯಿಸಲು ಶಾಸಕಾಂಗ ಸಭೆಗೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.

ಸದನಕ್ಕೆ  ಹಾಜರಾಗಲು ಶಾಸಕರಿಗೆ ಸಿಎಂ ಸೂಚನೆ
ಬೆಳಗಾವಿಯಲ್ಲಿ ತಮ್ಮ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಕೊನೆಯ ಆಧಿವೇಶನ ನಡೆಯುತ್ತಿರುವುದರಿಂದ ಮುಂದಿನ ಎಲ್ಲಾ ಕಲಾಪಗಳಲ್ಲಿ ಪಕ್ಷದ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಶಾಸಕಾಂಗ ಸಭೆಯಲ್ಲಿ ಸೂಚನೆ
ನೀಡಿದ್ದಾರೆ. ಶಾಸಕರು ಕಡ್ಡಾಯವಾಗಿ ಕಲಾಪಗಳಿಗೆ ಹಾಜರಾಗಿ ಪ್ರತಿಪಕ್ಷಗಳ ಟೀಕೆಗಳಿಗೆ ಸಮರ್ಥವಾಗಿ ತಿರುಗೇಟು ನೀಡಬೇಕು. ಸಚಿವ ಜಾರ್ಜ್‌ ವಿಷಯ ದಲ್ಲಿ ಪ್ರತಿಪಕ್ಷದವರು ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಕೇಂದ್ರ ಮತ್ತು ರಾಜ್ಯ ನಾಯಕರ
ವಿರುದ್ಧ ಅನೇಕ ಪ್ರಕರಣಗಳಿದ್ದು, ಇವುಗಳನ್ನು ಮುಂದಿಟ್ಟುಕೊಂಡು ಬಿಜೆಪಿಯವರ ಆರೋಪಗಳಿಗೆ ಪ್ರತ್ಯುತ್ತರ ನೀಡಬೇಕು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next