Advertisement

ಯಾವ ಯೋಜನೆಯಲ್ಲಿ ಕಮೀಷನ್‌ ಸಾಬೀತುಪಡಿಸಿ

11:11 AM Apr 14, 2019 | Team Udayavani |

ಹಾಸನ: ರಾಜ್ಯದ ಸಮ್ಮಿಶ್ರ ಸರ್ಕಾರ 20 ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮಾಡಿರುವ ಆರೋಪವನ್ನು ಸಾಬೀತು ಪಡಿಸಲಿ ಎಂದು ಉಪ ಉಖ್ಯಮಂತ್ರಿ ಜಿ.ಪರಮೇಶ್ವರ್‌ ಅವರು ಸವಾಲು ಹಾಕಿದರು.

Advertisement

ರಾಜ್ಯದಲ್ಲಿ ಹಿಂದೆ ಇದ್ದಿದ್ದು 10 ಪರ್ಸೆಂಟ್‌ ಸರ್ಕಾರ, ಈಗಿರುವುದು 20 ಪರ್ಸೆಂಟ್‌ ಕಮಿಷನ್‌ ಎಂದಿದ್ದಾರೆ. ಪ್ರಧಾನಿಯವರಿಗೆ ಬೆರಳ ತುದಿಯಲ್ಲಿಯೇ ಎಲ್ಲಾ ಮಾಹಿತಿಗಳು ಸಿಗುತ್ತವೆ. ಮೈತ್ರಿ ಸರ್ಕಾರ ಯಾವ ಯೋಜನೆ ಮತ್ತು ಕ್ಷೇತ್ರದಲ್ಲಿ ಕಮಿಷನ್‌ ಪಡೆದಿದೆ ಎಂಬುದನ್ನು ಸಾಬೀತು ಪಡಿಸಲಿ. ಇಲ್ಲವಾದರೆ ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವಹೇಳನಕಾರಿ ಹೇಳಿಕೆ ನೀಡಬೇಡಿ: ಜನರಿಂದ ಚುನಾಯಿತ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಸಂವಿಧಾನದಲ್ಲಿ ಒಕ್ಕೂಟ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಣ್ಣ, ತಮ್ಮಂದಿರು, ಕುಟುಂಬದ ರೀತಿ ಇರಬೇಕು. ಹೀಗಿರುವಾಗ ಒಂದು ರಾಜ್ಯದ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿರುವುದನ್ನು ಸಹಿಸಲಾಗದು ಎಂದು ಕಿಡಿಕಾರಿದರು.

ರಾಜಕೀಯಕ್ಕೆ ಸೇನೆ ಬಳಕೆಗೆ ವಿರೋಧ: ಬಾಲಾ ಕೋಟ್‌ ದಾಳಿಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಇದನ್ನು ಚುನಾವಣಾ ಆಯೋಗದ ಗಮನಕ್ಕೂ ತರಲಾಗಿದೆ. ಸೈನಿಕರು, ದೇಶದ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳ ಬಾರದು ಎಂದು ಆಯೋಗ ಹೇಳಿದೆ. ಆದರೂ ಮೋದಿ ಅಧಿಕಾರ ದುರ್ಬಳಕೆ ಮಾಡಿಕೊಂಡು ರಕ್ಷಣಾ ಪಡೆಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿ ಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಐಟಿ ಇಲಾಖೆಯಿಂದ ದಬ್ಟಾಳಿಕೆ: ಚುನಾವಣಾ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ದುರ್ಬಳಕೆ  ಮಾಡಿ ಕೊಳ್ಳುತ್ತಿದೆ. ಇದನ್ನು ಖಂಡಿಸಿ ಬೆಂಗಳೂರಿನ ಆದಾಯ ತೆರಿಗೆ ಕಚೇರಿ ಬಳಿ ಮುಖ್ಯಮಂತ್ರಿಯವರು, ಸಮನ್ವಯ ಸಮಿತಿ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರು ಸೇರಿ ಪ್ರತಿಭಟನೆ ನಡೆಸಿದ್ದೇವೆ. ಅದಕ್ಕೆ ನನಗೂ ಸೇರಿ ಹಲವು ಮುಖಂಡರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ಆದರೆ ಅಂದು ನಾವು ಆದಾಯ ತೆರಿಗೆ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದೇವೆ. ಅಧಿಕಾರಿಗಳು, ಸಿಬ್ಬಂದಿಯ ಕೆಲಸಕ್ಕೆ ಅಡ್ಡಿಪಡಿಸಿಲ್ಲ. ಆದರೂ ನೋಟಿಸ್‌ ಜಾರಿ ಮಾಡಿರುವುದು ದಬ್ಟಾಳಿಕೆಯನ್ನು ತೋರಿಸುತ್ತದೆ. ಇಂತಹ ದಬ್ಟಾಳಿಕೆಯಿಂದ ನಮ್ಮ ದನಿ ಅಡಗಿಸಲು ಸಾಧ್ಯವಿಲ್ಲ. ಎಂದರು.

Advertisement

ಬಿಜೆಪಿ ಯಶಸ್ವಿಯಾಗಲ್ಲ: ಲೋಕಸಭಾ ಚುನಾವಣಾ ಫ‌ಲಿತಾಂಶ ಪ್ರಕಟವಾದ ಕೂಡಲೇ ಸಮ್ಮಿಶ್ರ ಸರ್ಕಾರ ಪತನವಾಗಿ ಯಡಿಯೂರಪ್ಪ ಮೇ 24ರಂದೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವರೆಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ. ಬಹುಮತವಿರುವ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನ ಯಶಸ್ವಿಯಾಗಲ್ಲ ಎಂದು ಹೇಳಿದರು.

ಸರ್ವಾಧಿಕಾರ ಸಹಿಸೋಲ್ಲ: ಮಾಜಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಮಾತನಾಡಿ, ಕಾಂಗ್ರೆಸ್‌ ಪಕ್ಷ ಸಮೃದ್ಧ ಭಾರತವನ್ನು ಬಯಸಿದರೆ, ಬಿಜೆಪಿ ಮೋದಿಯವರ ಸರ್ವಾಧಿಕಾರದ ಭಾರತವನ್ನು ಬಯಸುತ್ತದೆ. ದೇಶದ ಜನರು ಎಂದೂ ಸರ್ವಾಧಿಕಾರವನ್ನು ಸಹಿಸಲ್ಲ. ಆದ್ದರಿಂದ ಬಿಜೆಪಿ ಸರ್ಕಾರ ಈ ಬಾರಿ ಬರುವುದಿಲ್ಲ ಎಂದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮಂಜು ನಾಥ್‌, ಪಕ್ಷದ ಮುಖಂಡರಾದ ಬಿ.ಶಿವರಾಮು, ಎಸ್‌. ಎಂ.ಆನಂದ್‌, ಜವರೇಗೌಡ, ಮಹೇಶ್‌, ಸಿದ್ದಯ್ಯ ಜೆಡಿಎಸ್‌ ಮುಖಂಡರಾದ ಪಟೇಲ್‌ ಶಿವರಾಂ, ಕೆ.ಎಂ.ರಾಜೇಗೌಡ, ರಘು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next