ಬೆಂಗಳೂರು: ಲೋಕಸಭಾ ಚುನಾವಣಾ ಕಣ ರಂಗೇರುತ್ತಿರುವಂತೆ ರಾಜಕೀಯ ಪಕ್ಷಗಳು ಮತ್ತು ಕೆಲವು ರಾಜಕೀಯ ಪ್ರಮುಖರ ಫೇಸ್‌ಬುಕ್, ಟ್ವಿಟರ್ ಮತ್ತಿತರರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಭರಾಟೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಆರಂಭಿಸಿರುವ ಫೇಸ್‌ಬುಕ್ ಹಾಗೂ ಟ್ವಿಟರ್ ಖಾತೆಗಳು ಸೇರಿದಂತೆ ಇತರ ಖಾಸಗಿ ಹಾಗೂ ಪ್ರಾಯೋಜಿತ ಸಾಮಾಜಿಕ ಜಾಲತಾಣಗಳ ಖಾತೆಗಳ ಮೇಲೆ ಚುನಾವಣಾ ಆಯೋಗ ನಿಗಾ ಇಟ್ಟಿದೆ.
ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಇಲ್ಲಿವರೆಗೆ 60ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣ ಖಾತೆಗಳ ಪರಿಶೀಲನೆ ನಡೆಸಿ, ಅವುಗಳಲ್ಲಿನ ಸುಮಾರು 100ಕ್ಕೂ ಹೆಚ್ಚು ಸ್ಟೇಟಸ್ ಗಳನ್ನು ತನಿಖೆಗೆ ಒಳಪಡಿಸುತ್ತಿದೆ ಎಂದು ತಿಳಿದು ಬಂದಿದೆ.
ರಾಜಕೀಯ ಪಕ್ಷಗಳು, ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ರಾಜ್ಯದ, ರಾಷ್ಟ್ರದ ಪ್ರಮುಖ ರಾಜಕೀಯ ಮುಖಂಡರು ಹಾಗೂ ರಾಜಕೀಯವಾಗಿ ಪ್ರಭಾವ ಹೊಂದಿರುವ ವ್ಯಕ್ತಿಗಳು ಮತ್ತು ಅವರ ಅಭಿಮಾನಿ ಬಳಗ ಎಂಬ ಹೆಸರಲ್ಲಿ ತೆರೆದಿರುವ ಸಾಮಾಜಿಕ ಜಾಲತಾಣ ಖಾತೆಗಳ ಮೇಲೂ ಆಯೋಗ ಕಣ್ಣಿಟ್ಟಿದೆ. ಚುನಾವಣಾ ಪ್ರಚಾರದ ವೇಳೆ ಸಮಾಜದಲ್ಲಿ ದ್ವೇಷ ಹರಡುವ ಹೇಳಿಕೆಗಳನ್ನು ನೀಡುವ, ವೈಯುಕ್ತಿಕ ನಿಂದನೆ, ಬರವಣಿಗೆ, ಚಿತ್ರಗಳು ಇತ್ಯಾದಿ ವಿಷಯಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ.
ಾಮಪತ್ರ ಸಲ್ಲಿಕೆ ಆರಂಭಗೊಂಡ ನಂತರ ಫೇಸ್‌ಬುಕ್, ಟ್ವಿಟರ್ ಅಕೌಂಟ್ ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ರಾಜ್ಯದ ಬೇರೆ ಕಡೆಗಳಿಂದ ಪ್ರತಿದಿನ 15ರಿಂದ 20 ವರದಿಗಳು ಆಯೋಗಕ್ಕೆ ಬರುತ್ತಿವೆ ಎಂದು ಸಾಮಾಜಿಕ ಜಾಲತಾಣ ವಿಚಕ್ಷಣಾ ವಿಭಾಗದ ಸಿಬ್ಬಂದಿ ತಿಳಿಸಿದ್ದಾರೆ.
ಭಾಷಣದಲ್ಲಿ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹವಾಗಿ ಮಾತನಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವಕಲ್ಯಾಣ ಕಾಂಗ್ರೆಸ್ ಶಾಸಕ ನಾರಾಯಣರಾವ್ ವಿರುದ್ಧ ಆಯೋಗ ತನಿಖೆ ನಡೆಸುತ್ತಿದ್ದು, ಶಾಸಕರ ಹೇಳಿಕೆ ಕುರಿತ ವಿವರಗಳನ್ನು ಸಾಮಾಜಿಕ ಜಾಲತಾಣ ವಿಚಕ್ಷಣಾ ವಿಭಾಗ ಈಗಾಗಲೇ ಆಯೋಗಕ್ಕೆ ರವಾನಿಸಿದೆ.