Advertisement

Cm siddaramaiah: ಪಡಿತರ ವಿತರಕರಿಗೆ ಕಮಿಷನ್‌ ಹೆಚ್ಚಳ ಭಾಗ್ಯ

09:00 PM Feb 29, 2024 | Team Udayavani |

ಬೆಂಗಳೂರು: ಪಡಿತರ ವಿತರಕರಿಗೆ ಪ್ರತಿ ಕೆಜಿ ಅಕ್ಕಿಗೆ ನೀಡಲಾಗುತ್ತಿರುವ ಕಮಿಷನ್‌ ಮೊತ್ತವನ್ನು ಒಂದೂವರೆ ರೂಪಾಯಿಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

Advertisement

ಅರಮನೆ ಮೈದಾನದಲ್ಲಿ ಗುರುವಾರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಆಯೋಜಿಸಿದ್ದ ಅನ್ನಭಾಗ್ಯ ದಶಮಾನೋತ್ಸವ ಹಾಗೂ ರಾಜ್ಯ ಸರಕಾರಿ ಪಡಿತರ ವಿತರಕರ ಸಮಾವೇಶದಲ್ಲಿ ಅವರು ಮಾತನಾಡಿದರು.

ಈವರೆಗೆ ಪ್ರತಿ ಕೆಜಿಗೆ 1.24 ರೂ. ಕಮಿಷನ್‌ ಇತ್ತು. ಪಡಿತರ ವಿತರಕರ ಸಂಕಷ್ಟಗಳ ಅರಿವು ನನಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಎಚ್‌.ಮುನಿಯಪ್ಪ ಕೂಡ ಕಮಿಷನ್‌ ಹೆಚ್ಚಿಸುವಂತೆ ಮನವಿ ಮಾಡಿದ್ದರು. ಇದೆಲ್ಲವನ್ನೂ ಪರಿಗಣಿಸಿ ಕಮಿಷನ್‌ ಅನ್ನು 1.50 ರೂ.ಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದರು.

ಬಿಜೆಪಿ ಕಾಂಗ್ರೆಸ್‌ ಮುಕ್ತ ಭಾರತ ಎನ್ನುತ್ತದೆ. ಆದರೆ ನಾವು ಹಸಿವು ಮುಕ್ತ ಕರ್ನಾಟಕ ನಿರ್ಮಿಸಲು ಹೊರಟಿದ್ದೇವೆ. ನಾವು ರಾಜ್ಯದ ಬಡವರು, ದಲಿತರು, ಹಿಂದುಳಿದವರು, ಕಾರ್ಮಿಕರು ಮತ್ತು ರೈತರ ಪರವಾದ ನಿಲುವು ಮತ್ತು ಕಾರ್ಯಕ್ರಮಗಳನ್ನು ಹೊಂದಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಆಹಾರ ಭದ್ರತಾ ಕಾಯ್ದೆಯನ್ನು ಬಿಜೆಪಿ ವಿರೋಧಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿ ಆಹಾರ ಭದ್ರತೆ ಮತ್ತು ನರೇಗಾ ಕಾರ್ಯಕ್ರಮಗಳನ್ನು ವಿರೋಧಿಸಿದ್ದರು. ಅನ್ನಭಾಗ್ಯ ಯೋಜನೆ ಬಗ್ಗೆ ಕುಹಕದ ಮಾತುಗಳನ್ನು ಬಿಜೆಪಿ ನಾಯಕರು ಆಡಿದ್ದರು. ಅಂತಹ ಬಿಜೆಪಿ ಅಧಿಕಾರಕ್ಕೆ ಬಂದದ್ದು ದುರಂತ ಎಂದು ಹೇಳಿದರು.

Advertisement

ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಮಾತನಾಡಿ, ಮನಮೋಹನ್‌ ಸಿಂಗ್‌ ಆಹಾರ ಭದ್ರತಾ ಹಕ್ಕಿನಡಿ ಅಕ್ಕಿ ಕೊಡುವ ಯೋಜನೆ ಪ್ರಕಟಿಸಿದರು. ಆಗ ನಾನು ಅವರ  ಸಂಪುಟದಲ್ಲಿದ್ದೆ. ಈ ಯೋಜನೆಯನ್ನು ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದರು. ನಿಮ್ಮ ಹಸಿವನ್ನು ನೀಗಿಸಿದವರ ಜತೆಯಲ್ಲಿ ನಿಲ್ಲಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಗ್ರಾಹಕ ರಕ್ಷಕ ತಪಾಸಣ ವಾಹನಗಳಿಗೆ ಚಾಲನೆ ನೀಡಲಾಯಿತು.ಆಹಾರ ನಿಗಮದ ಅಧ್ಯಕ್ಷ ಗೋವಿಂದಪ್ಪ, ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ ಸಹಿತ ಹಲವರು ಉಪಸ್ಥಿತರಿದ್ದರು.

ಸರಕಾರ ಆರ್ಥಿಕವಾಗಿ ದಿವಾಳಿಯಾಗಿಲ್ಲ:

ನಾವು ಅಧಿಕಾರಕ್ಕೆ ಬಂದ ಒಂಬತ್ತು ತಿಂಗಳಲ್ಲೇ 5 ಗ್ಯಾರಂಟಿಗಳನ್ನೂ ಜಾರಿಗೊಳಿಸಿದ್ದೇವೆ. ಆದರೂ ನಮ್ಮ ಖಜಾನೆ ಖಾಲಿಯಾಗಿಲ್ಲ. ಸರಕಾರ ಆರ್ಥಿಕವಾಗಿ ದಿವಾಳಿಯಾಗಿಲ್ಲ. ಆದರೆ ಗ್ಯಾರಂಟಿಗಳಿಂದ ಖಜಾನೆ ಖಾಲಿ ಆಗುತ್ತದೆ ಎಂದು ಟೀಕಿಸಿದ್ದ ಮೋದಿ ಅವರು “ಈಗ  ಮೋದಿ ಗ್ಯಾರಂಟಿ’ ಎಂದು ಹೇಳುತ್ತಿದ್ದಾರೆ.ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next