Advertisement

ಅಕ್ಕಿ ಖರೀದಿ ಗುತ್ತಿಗೆದಾರರಿಂದ ಕಮಿಷನ್‌ ಫಿಕ್ಸ್‌: ಮಾಜಿ ಸಿಎಂ ಬೊಮ್ಮಾಯಿ

09:21 PM Jun 25, 2023 | Team Udayavani |

ಬೆಳಗಾವಿ: ಅಕ್ಕಿ ಖರೀದಿಯಲ್ಲಿ ಹುನ್ನಾರ ನಡೆದಿದೆ. ಏನಾಗಿದೆ ಎಂಬುದರ ಬಗ್ಗೆ ಕೆಲವೇ ದಿನಗಳಲ್ಲಿ ಬಣ್ಣ ಬಯಲಾಗಲಿದೆ. ಬೆಂಕಿ ಹತ್ತಿದಾಗ ಗಳ ಎಣಿಸುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ನಮ್ಮ ಮೇಲೆ ಕಮಿಷನ್‌ ಗೂಬೆ ಕೂರಿಸಿದ್ದ ಕಾಂಗ್ರೆಸ್‌ ಈಗ ಗುತ್ತಿಗೆದಾರರಿಂದ ಕಮಿಷನ್‌ ಪರ್ಸೆಂಟೇಜ್‌ ಫಿಕ್ಸ್‌ ಮಾಡಿಕೊಂಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು.

Advertisement

ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿಲ್ಲವೆಂದು ಪ್ರಧಾನಿ ಮೋದಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಪ್ರತಿಭಟನೆ ಮಾಡಲು ಕಾಂಗ್ರೆಸ್‌ಗೆ ಯಾವ ನೈತಿಕತೆ ಇಲ್ಲ. ಸರ್ಕಾರದಲ್ಲಿ ಇದ್ದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಅಕ್ಕಿ ಖರೀದಿಯಲ್ಲಿ ಹುನ್ನಾರ ಆಗಿದೆ. ಏನಾಗಿದೆ ಎಂಬುದು ನನಗೆ ಗೊತ್ತು. ಬಣ್ಣ ಬಯಲಾಗಲಿದೆ ಎಂದರು.

ಕಮಿಷನ್‌ ಹೆಸರಲ್ಲಿ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದ ಕಾಂಗ್ರೆಸ್‌ ಈಗ ಪರ್ಸೆಂಟೇಜ್‌ ಫಿಕ್ಸ್‌ ಮಾಡುತ್ತಿದೆ. ಯಾವ ಮಂತ್ರಿ ಗುತ್ತಿಗೆದಾರನಿಗೆ ಕರೆದು ಏನು ಹೇಳಿದ್ದಾರೆ ಎಂಬುದು ಗೊತ್ತು. ಅಧಿ ಕಾರ ಇಲ್ಲದೆ ಹಸಿದು ಕುಳಿತಿದ್ದ ದೆಹಲಿಯವರಿಗೆ ಈಗ ಕರ್ನಾಟಕ ಎಟಿಎಂ ಆಗಿದೆ. ಅಧಿ ಕಾರ ಹಿಡಿದು ಒಂದೇ ತಿಂಗಳಲ್ಲಿ ಎಲ್ಲ ಕಡೆಗಳಿಂದಲೂ ಪರ್ಸಂಟೇಜ್‌ ಫಿಕ್ಸ್‌ ಆಗುತ್ತಿದೆ ಎಂದರು.

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿಯಿಂದ ಕರ್ನಾಟಕದಲ್ಲಿ ಅರಾಜಕತೆ ಶುರುವಾಗಿದೆ. ಸರ್ಕಾರ ಬಂದಾಗಿನಿಂದ ಪಾಕಿಸ್ತಾನದ ಧ್ವಜ ಹಾರಾಡುತ್ತಿವೆ. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಆಗುತ್ತಿವೆ. ನಾವು ಎಲ್ಲದಕ್ಕೂ ತಯಾರಾಗಬೇಕು. ಇಲ್ಲದಿದ್ದರೆ ಮನೆಗೆ ಬಂದು ಹೊಡೆಯುತ್ತಾರೆ ಎಂದರು.

ಡೀಸೆಲ್‌ ಇಲ್ಲದೇ ಬಸ್‌ಗಳು ನಿಲ್ಲುತ್ತವೆ: ಬೊಮ್ಮಾಯಿ
ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆಯಿಂದ ಕೆಎಸ್‌ಆರ್‌ಟಿಸಿ ಮುಚ್ಚುವ ಸ್ಥಿತಿ ನಿರ್ಮಾಣ ಆಗಲಿದೆ. ಡೀಸೆಲ್‌ ಇಲ್ಲದೇ ಬಸ್‌ಗಳು ನಿಲ್ಲುವ ಸ್ಥಿತಿ ನಿರ್ಮಾಣ ಆಗಲಿದೆ. ವಿದ್ಯುತ್‌ ಖರೀದಿಸಲು ಹಾಗೂ ಉತ್ಪಾದಿಸಲು ಹಣ ಇಲ್ಲ. ಕರ್ನಾಟಕ ಕತ್ತಲಲ್ಲಿ ಮುಳುಗಲಿದೆ. ಗೃಹಲಕ್ಷ್ಮೀ ಸೇರಿ ಎಲ್ಲ ಗ್ಯಾರಂಟಿಗಳಿಗೆ ಕುಂಟು ನೆಪ ಹೇಳಿ ಷರತ್ತು ಹಾಕಿದ್ದು ಏಕೆ? ಒಂದೇ ತಿಂಗಳಲ್ಲಿ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದ್ದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಮಳೆ ಇಲ್ಲ, ಜಲಾಶಯಗಳಲ್ಲಿ ನೀರು ಇಲ್ಲದಿರುವ ಬಗ್ಗೆ ಸರ್ಕಾರಕ್ಕೆ ಚಿಂತನೆ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

Advertisement

ಸಿದ್ದು-ಡಿಕೆಶಿ ಹೊಡೆದಾಡಿಕೊಳ್ತಾರೆ: ಯತ್ನಾಳ
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರ ಐದು ವರ್ಷ ನಡೆಯಲ್ಲ. ಐದು ವರ್ಷ ಪೂರ್ತಿ ಮಾಡುವ ಸರ್ಕಾರ ಇದಲ್ಲ. ಲೋಕಸಭೆ ಚುನಾವಣೆ ಮುನ್ನ ಇಲ್ಲವೇ ಅದರ ನಂತರ ಆ್ಯಕ್ಸಿಡೆಂಟ್‌ ಆಗುತ್ತದೆ. ಅಷ್ಟರೊಳಗೆ ಇಬ್ಬರೂ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಿರಾಣಿ ವಿರುದ್ಧ ಯತ್ನಾಳ ಪರೋಕ್ಷ ವಾಗ್ಧಾಳಿ
ವಿಜಯಪುರದಲ್ಲಿ ನನ್ನ ಚುನಾವಣೆ ಅಷ್ಟೊಂದು ಸುಲಭ ಇರಲಿಲ್ಲ. ಬೆಳಗಾವಿ, ಬೆಂಗಳೂರು ಮತ್ತೆ ಬೇರೆ ಕಡೆಗಳಿಂದ ಹಣ ಕಳುಹಿಸಿ ಸೋಲಿಸಲು ಯತ್ನಿಸಿದರು. ನನ್ನನ್ನು ಸೋಲಿಸಲು ಬಂದವರು ತಾವೇ ಸೋತರು ಎಂದು ಒಂದೇ ವೇದಿಕೆಯಲ್ಲಿದ್ದ ಮುರುಗೇಶ ನಿರಾಣಿ ವಿರುದ್ಧ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ ವಾಗ್ಧಾಳಿ ನಡೆಸಿದರು. ವಿಧಾನಸಭೆ ಚುನಾವಣೆಯಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಯಾರು ಯಾರನ್ನು ಸೋಲಿಸಲು ಯತ್ನಿಸಿದ್ದಾರೆ ಅಂತ ಬಿಜೆಪಿ ಕಾರ್ಯಕರ್ತರಿಗೆ ಗೊತ್ತಿದೆ. ಕಾರ್ಯಕರ್ತರ ಭಾವನೆಯನ್ನು ಕೇಳದಿದ್ದರೆ ಇದೇ ಗತಿ ಆಗುವುದು. ಹಿಂದೂ ಧ್ವನಿಯನ್ನು ಕುಗ್ಗಿಸುವ ಹುನ್ನಾರ ರಾಜ್ಯದಲ್ಲಿ ನಡೆಯುತ್ತಿದೆ. ಸಿ.ಟಿ.ರವಿ ಅವರನ್ನು ಸೋಲಿಸಿದರು. ಸಂತೋಷ ಬಗ್ಗೆಯೂ ಅಪಪ್ರಚಾರ ಮಾಡಿದರು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ತಾಸು ಕುಳಿತು ಸಭೆ ಮಾಡಿ ಕಾರ್ಯಕರ್ತರ ಭಾವನೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next