ಹಾವೇರಿ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ 480 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು ಮತಯಂತ್ರಗಳು ಭದ್ರತಾ ಕೊಠಡಿಯಲ್ಲಿ ಪೊಲೀಸ್ ಬಿಗಿಭದ್ರತೆಯಲ್ಲಿವೆ.
ಜಿಲ್ಲೆಯಾದ್ಯಂತ ಶುಕ್ರವಾರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಶೇ. 69.07ರಷ್ಟು ಮತದಾನ ನಡೆದಿದ್ದು 1,41,541 ಮತದಾರರು ಮತ ಚಲಾಯಿಸಿದ್ದಾರೆ. ಮತಯಂತ್ರಗಳನ್ನಿಟ್ಟಿರುವ ಪ್ರತಿಯೊಂದು ಭದ್ರತಾ ಕೊಠಡಿಗೂ ದಿನದ 24ಗಂಟೆಗಳ ಕಾಲ ಭದ್ರತೆಗೆ ಐವರು ಪೊಲೀಸ್ ಪೇದೆಗಳು, ಒಂದು ಜಿಲ್ಲಾ ಮೀಸಲು ಪಡೆ, ಒಬ್ಬ ಪಿಎಸ್‌ಐ ಹಾಗೂ ಎಎಸ್‌ಐ ಸಿಬ್ಬಂದಿಗಳು ಕಾವಲಿದ್ದಾರೆ.
ಸೆ. 3ರಂದು ಮತ ಎಣಿಕೆ ಕಾರ್ಯ ಬೆಳಗ್ಗೆ 8ರಿಂದ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾ ಚುನಾವಣಾ ಆಯೋಗ ಸಿದ್ಧತೆಯಲ್ಲಿ ತೊಡಗಿದೆ. ಹಾವೇರಿ ನಗರಸಭೆಯ 31 ಹಾಗೂ ರಾಣೆಬೆನ್ನೂರ ನಗರಸಭೆ 35 ವಾರ್ಡ್‌ಗಳ ಮತ ಎಣಿಕೆಗೆ ತಲಾ ಎಂಟು ಟೇಬಲ್ ಗಳನ್ನು ಪುರಸಭೆ, ಪಪಂಗಳಿಗೆ ತಲಾ ನಾಲ್ಕು ಟೇಬಲ್‌ಗಳಂತೆ ಒಟ್ಟು 36 ಟೇಬಲ್‌ಗಳನ್ನು ಮತ ಎಣಿಕೆ ಕಾರ್ಯಕ್ಕೆ ಬಳಸಲು ಆಯೋಗ ನಿರ್ಧರಿಸಿದೆ. ಒಬ್ಬರು ಮೇಲ್ವಿಚಾರಕರು, ಒಬ್ಬರು ಸಹಾಯಕರು ಹಾಗೂ ಡಿ ವರ್ಗದ ನೌಕರ ಪ್ರತಿಯೊಬ್ಬ ಚುನಾವಣಾಧಿಕಾರಿಗೆ ಒಬ್ಬ ಸಹಾಯಕರು ಮತ ಎಣಿಕೆ ಕಾರ್ಯ ನಿರ್ವಹಿಸುವರು.
ಈ ಬಾರಿ ಇವಿಎಂ ಬಳಸಿರುವುದರಿಂದ ಮತ ಎಣಿಕೆ ಆರಂಭಗೊಂಡ ಎರಡು ತಾಸಿನಲ್ಲಿ ಜಿಲ್ಲೆಯ ಎಲ್ಲ ಐದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ. ಹಾವೇರಿ ನಗರಸಭೆಯ ಮತ ಎಣಿಕೆ ಹಾವೇರಿ ನಗರದ ರಾಚೋಟೇಶ್ವರ ಪದವಿಪೂರ್ವ ಕಾಲೇಜಿನಲ್ಲಿ, ರಾಣಿಬೆನ್ನೂರ ನಗರಸಭೆಯದ್ದು ಸೇಂಟ್ ಲಾರೆನ್ಸ್ ಸ್ಕೂಲ್, ಹಾನಗಲ್ಲ ಹಾಗೂ ಹಿರೇಕೆರೂರು ಮತ ಎಣಿಕೆ ಆಯಾ ತಹಶೀಲ್ದಾರ್ ಕಚೇರಿ ಹಾಗೂ ಸವಣೂರ ಮತ ಎಣಿಕೆ ಸರ್ಕಾರಿ ಪ್ರಾಥಮಿಕ ಶಾಲೆ ನಂ. 2ರಲ್ಲಿ ನಡೆಯಲಿದೆ.