ಬೆಳಗಾವಿ: ಜಲಪ್ರಳಯಕ್ಕೆ ನಲುಗಿ ನಿರಾಶ್ರಿತಗೊಂಡವರಿಗೆ ಅನೇಕ ಸಂಘ-ಸಂಸ್ಥೆಗಳು ಸೇರಿದಂತೆ ಎಲ್ಲ ವಲಯದಿಂದಲೂ ಮಾನವೀಯ ಹೃದಯಗಳು ಸಹಾಯಕ್ಕೆ ನಿಂತಿವೆ. ಆದರೆ ಸರ್ಕಾರಿ ಇಲಾಖೆಯೊಂದರ ಅಧಿಕಾರಿಗಳೇ ಸ್ವತಃ ಫಿಲ್ಡ್ಗಿಳಿದು ಸುಮಾರು ಒಂದೂವರೆ ಕೋಟಿ. ರೂ. ಮೌಲ್ಯದ ವಸ್ತುಗಳನ್ನು ನೀಡಿ ನೆರವಾಗಿ ಕಷ್ಟಕ್ಕೆ ಸ್ಪಂದಿಸಿ ಸಂತ್ರಸ್ತರ ಕಣ್ಣೀರು ಒರೆಸಿದ್ದಾರೆ.
ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಸೇವಾ ಸಂಘದ ಸದಸ್ಯರು ಸರ್ಕಾರದ ಸಹಾಯಕ್ಕಾಗಿ ಕಾಯದೇ ತಾವೇ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಸಂತ್ರಸ್ತರಿಗೆ ಹಂಚಿದ್ದಾರೆ. ಬೆಂಗಳೂರಿನಿಂದ ಸುಮಾರು 9 ಲೋಡ್‌ಗಳಷ್ಟು ಬಟ್ಟೆ, ಆಹಾರ ಸಾಮಗ್ರಿ ಹಾಗೂ ದಿನಬಳಕೆ ವಸ್ತುಗಳನ್ನು ಸಂತ್ರಸ್ತರಿಗೆ ವಿತರಿಸಿದ್ದಾರೆ.
ಕಾಗವಾಡ ತಾಲೂಕಿನ ಜುಗುಳ, ಮಂಗಾವತಿ, ಶಹಾಪುರ ಗ್ರಾಮಗಳಿಗೆ ಹೋಗಲು ಸಾಧ್ಯವೇ ಇರಲಿಲ್ಲ. ಅಲ್ಲಿ ಸರ್ಕಾರದ ಯಾವುದೇ ಪುನರ್ವಸತಿ ಕೇಂದ್ರಗಳೂ ಇರಲಿಲ್ಲ. ಯಾವ ವಾಹನಗಳೂ ಈ ಊರಿಗೆ ತಲುಪಲು ಸಾಧ್ಯವಿರಲಿಲ್ಲ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವೈಯಕ್ತಿಕವಾಗಿ ಹೊಣೆ ಹೊತ್ತುಕೊಂಡು 20 ಸಾವಿರ ಸಂತ್ರಸ್ತರಿಗೆ ನೆರವು ನೀಡಿದ್ದಾರೆ.
ಜತೆಗೆ ಬಾಗಲಕೋಟೆ ಜಿಲ್ಲೆಯ ಐದಾರು ಹಳ್ಳಿಗಳಿಗೆ ಹೋಗಿ 48,500 ಬಾಟಲಿ ನೀರು, 20 ಸಾವಿರ ರೊಟ್ಟಿ, 5 ಸಾವಿರ ಸೀರೆ, 5 ಸಾವಿರ ಲುಂಗಿ, 5 ಸಾವಿರ ಬೆಡ್‌ಶೀಟ್, ಸಾವಿರ ಬಿಸ್ಕಿಟ್, 5 ಸಾವಿರ ಹಣ್ಣಿನ ರಸದ ಬಾಕ್ಸ್‌ಗಳು, 5 ಸಾವಿರ ಟಾವೆಲ್, 2 ಸಾವಿರ ಮ್ಯಾಟ್, 5 ಕೆಜಿ. ಪಾಕೆಟ್‌ನ 2500 ಕೆಜಿ. ಗೋದಿ ಹಿಟ್ಟು, ಬ್ರಿಟಾನಿಯಾ ಬನ್ ಸೇರಿದಂತೆ ಸುಮಾರು ಒಂದೂವರೆ ಕೋಟಿ ರೂ. ಮೌಲ್ಯದ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. ಈ ಎಲ್ಲ ವಸ್ತುಗಳನ್ನು ವಿತರಿಸಲು ಹೋದಾಗ ಕೆಲವರು ತೆಗೆದುಕೊಳ್ಳಲು ಮುಂದೆ ಬರುತ್ತಿರಲಿಲ್ಲ. ಅಷ್ಟೊಂದು ಸ್ವಾಭಿಮಾನದಿಂದ ಬದುಕುವ ಆ ಜನರಲ್ಲಿ ವಿಶ್ವಾಸ ತುಂಬಿ, ಸಹಾಯ ನೀಡಲು ಬಂದಿರುವುದಾಗಿ ತಿಳಿ ಹೇಳಿ ನೆರವಾಗಿದ್ದೇವೆ. ಈ ಕಾರ್ಯ ಮಾಡಿರುವುದು ಸಾರ್ಥಕವಾಗಿದೆ ಎನ್ನುತ್ತಾರೆ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಶಿವಪ್ರಕಾಶ.
ರಾಜ್ಯ ವಾಣಿಜ್ಯ ತೆರಿಗೆ ಅಧಿಕಾರಿಗಳ ಸೇವಾ ಸಂಘಕ್ಕೆ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಅವರ ಸಹಾಯ ಮೆಚ್ಚುವಂಥದ್ದು. ಹಳ್ಳಿ ಹಳ್ಳಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಪೊಲೀಸರು ಸಹಕಾರ ನೀಡಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ಬೆಳಗಾವಿ ಉತ್ತರ ವಲಯ ಜಂಟಿ ಆಯುಕ್ತರಾದ ಕೆ. ರಾಮನ್, ಮೇಘನ್ನವರ ಸೇರಿದಂತೆ ಹಿರಿಯ ಅಧಿಕಾರಿಗಳು ತಂಡದಲ್ಲಿದ್ದರು. ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಹಂಚಲು 20 ಅಧಿಕಾರಿಗಳು ಹಾಗೂ 30 ಜನ ಸಿಬ್ಬಂದಿ ತಂಡ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದೆ. ಈಗಾಗಲೇ ನಮ್ಮ ಇಲಾಖೆಯ 800 ಅಧಿಕಾರಿಗಳು ಹಾಗೂ 4 ಸಾವಿರ ಸಿಬ್ಬಂದಿ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಶಿವಪ್ರಕಾಶ ತಿಳಿಸಿದ್ದಾರೆ.
•ಭೈರೋಬಾ ಕಾಂಬಳೆ