ನವದೆಹಲಿ: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಶುಕ್ರವಾರ(ಏಪ್ರಿಲ್ 01)ದಿಂದ 250 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರ ಪರಿಣಾಮ ರಾಷ್ಟ್ರರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2,253 ರೂಪಾಯಿಗೆ ಏರಿಕೆಯಾದಂತಾಗಿದೆ ಎಂದು ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇದನ್ನೂ ಓದಿ:ಐಪಿಎಲ್ 2022: ಎಬಿ ಡಿವಿಲಿಯರ್ಸ್ ಸಿಕ್ಸರ್ ದಾಖಲೆ ಸರಿಗಟ್ಟಿದ ಮಹೇಂದ್ರ ಸಿಂಗ್ ಧೋನಿ
ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 14.2 ಕೆಜಿ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 949.50 ರೂಪಾಯಿಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ವಾಣಿಜ್ಯ ನಗರಿ ಮುಂಬಯಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಈಗ 2,205 ರೂಪಾಯಿಗೆ ಹೆಚ್ಚಳವಾಗಿದೆ. ಕೋಲ್ಕತಾದಲ್ಲಿ ವಾಣಿಜ್ಯ ಬಳಕೆಯ ಎಲ್ ಪಿಜಿ ದರ 2,351 ರೂಪಾಯಿಗೆ, ಚೆನ್ನೈನಲ್ಲಿ 19 ಕೆಜಿ ಸಿಲಿಂಡರ್ ಬೆಲೆ 2,406 ರೂಪಾಯಿಗೆ ಏರಿಕೆಯಾಗಿದೆ.
ಪಂಚರಾಜ್ಯ ಚುನಾವಣಾ ಫಲಿತಾಂಶದ ಬಳಿಕ ಎಲ್ ಪಿಜಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಮಾರ್ಚ್ 22ರಿಂದ 31ರವರೆಗೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 6.40 ರೂಪಾಯಿ ಹೆಚ್ಚಳವಾಗಿದೆ.
ಜೆಟ್ ಇಂಧನ ಬೆಲೆಯಲ್ಲಿಯೂ ಹೆಚ್ಚಳವಾಗಿದ್ದು, ಪ್ರತಿ ಕಿಲೋ ಲೀಟರ್ ಇಂಧನ ಬೆಲೆಯನ್ನು 2,258.54 ರೂಪಾಯಿಗೆ ಏರಿಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಪ್ರತಿ ತಿಂಗಳ 1ನೇ ತಾರೀಕು ಮತ್ತು 16ನೇ ತಾರೀಕಿನಂದು ತೈಲ ಬೆಲೆ ಪರಿಷ್ಕರಿಸಲಾಗುತ್ತದೆ ಎಂದು ವರದಿ ಹೇಳಿದೆ.