ವಾಡಿ: ಮಾರಣಾಂತಿಕ ವೈರಸ್ ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸಂಪೂರ್ಣ ಸಂಚಾರ ಸ್ಥಗಿತಗೊಳಿಸಿದ್ದ ಈ ಭಾಗದ ಲೋಕಲ್ ಟ್ರೇನ್‌ಗಳು ಕೊನೆಗೂ ಹಳಿ ಹಿಡಿದಿವೆ.
ಪ್ರಯಾಣಿಕರಿಂದ ತುಂಬಿರುತ್ತಿದ್ದ ನಗರದ ರೈಲು ನಿಲ್ದಾಣ ಅಕ್ಷರಶಃ ಮೌನ ಆವರಿಸಿ ಬಿಕೋ ಎನ್ನುತ್ತಿತ್ತು. ಊರು ಕೇರಿಗೆ ಹೋಗುವವರಿಲ್ಲದೇ ಪ್ಲಾಟ್‌ಫಾರ್ಮ್ ಗಳು ಭಣಗುಡುತ್ತಿದ್ದವು. ಎಕ್ಸಪ್ರಸ್ ರೈಲುಗಳ ನಂತರ ಪ್ಯಾಸೆಂಜರ್ ರೈಲುಗಳು ನಿಧಾನವಾಗಿ ಸಂಚಾರ ಆರಂಭಿಸುವ ಮೂಲಕ ಸೇವೆಗೆ ಮರಳಿರುವುದು ಸಾಮಾನ್ಯ ಪ್ರಯಾಣಿಕರಲ್ಲಿ ಹರ್ಷ ಮೂಡಿಸಿದೆ. ನಗರದಿಂದ ಪ್ರತಿನಿತ್ಯ ಸೂರ್ಯ ಹುಟ್ಟುವ ಮೊದಲೇ ಕಲಬುರಗಿಗೆ ಪ್ರಯಾಣ ಬೆಳೆಸುವ ಸಾವಿರಾರು ಜನರು, ಕಾಲೇಜು ವಿದ್ಯಾರ್ಥಿಗಳಿಗೆ ಬೆಳಗಿನ ಲೋಕಲ್ (ಪಾರ್ಸೆಲ್) ಟ್ರೇನ್ ಬಹಳ ಅನುಕೂಲ ಒದಗಿಸಿದೆ.
ಆಸ್ಪತ್ರೆ, ಕಾಲೇಜು, ಮಾರುಕಟ್ಟೆ ಸೇರಿದಂತೆ ಇನ್ನಿತರ ವೈಯಕ್ತಿಕ ಕೆಲಸ ಕಾರ್ಯಗಳಿಗಾಗಿ ವಾಡಿ ಹಾಗೂ ಶಹಾಬಾದ ನಗರಗಳಿಂದ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರುವ ಶಿಕ್ಷಕರಿಗೆ, ಸರ್ಕಾರಿ ನೌಕರರಿಗೆ, ಕಂಪನಿ ಕಾರ್ಮಿಕರಿಗೆ, ಕೂಲಿಕಾರರಿಗೆ, ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ರೈಲುಗಳು ಸಹಕಾರಿಯಾಗಿದ್ದು, ಜನರ ಜೀವನ ಮತ್ತೊಮ್ಮೆ ಹಳಿಗೆ ಬಂದಂತಾಗಿದೆ. ವಾಡಿ ನಗರ ರೈಲು ನಿಲ್ದಾಣದಿಂದ ಕಲಬುರಗಿ ಮಾರ್ಗವಾಗಿ ಮಹಾರಾಷ್ಟ್ರದ ಗಡಿ ಜಿಲ್ಲೆಗೆ ತಲುಪುವ ರೈಲು ಕ್ರಸಂ-01382 ವಾಡಿ-ಸೊಲ್ಲಾಪುರ ಪ್ಯಾಸೆಂಜರ್ ಎರಡು ವರ್ಷದ ನಂತರ ಅಂದರೆ ನ.16ರಂದು ಅಧಿಕೃತವಾಗಿ ಶುಭಾರಂಭಗೊಂಡಿದೆ.
ಸಿಮೆಂಟ್ ನಗರಿಯಿಂದ ಇದು ಪ್ರತಿದಿನ ಬೆಳಗ್ಗೆ 6:45ಕ್ಕೆ ಹೊರಡುತ್ತಿದೆ. ರೈಲು ಕ್ರಸಂ-07764 ರಾಯಚೂರು-ಕಲಬುರಗಿ ಇಂಟರ್‌ಸಿಟಿ ರೈಲು ಬೆಳಗ್ಗೆ 9:40ಕ್ಕೆ ಆಗಮಿಸಿ 9:45ಕ್ಕೆ ಕಲಬುರಗಿಯತ್ತ ಹೊರಡುತ್ತದೆ. ಮಹಾರಾಷ್ಟ್ರದ ಸೊಲ್ಲಾಪುರ ನಿಲ್ದಾಣದಿಂದ ತಡರಾತ್ರಿ 12:10ಕ್ಕೆ ಹೊರಡುವ ಕ್ರಸಂ-01381 ಸೊಲ್ಲಾಪುರ-ವಾಡಿ ರೈಲು ಬೆಳಗ್ಗೆ 4:30ಕ್ಕೆ ವಾಡಿ ಜಂಕ್ಷನ್ ತಲುಪುತ್ತದೆ. ಬೆಳಗ್ಗೆ 5:45ಕ್ಕೆ ಆಂದ್ರದ ಸಿಕಿಂದ್ರಾಬಾದ ನಿಲ್ದಾಣದಿಂದ ಹೊರಡುವ ಕ್ರಸಂ-07752 ಫಲಕ್‌ನಾಮಾ ರೈಲು ಬೆಳಗ್ಗೆ 11:25ಕ್ಕೆ ವಾಡಿ ತಲುಪುತ್ತದೆ. ಮದ್ಯಾಹ್ನ 2:10 ಗಂಟೆಗೆ ವಾಡಿ ನಿಲ್ದಾಣದಿಂದ ಹೊರಡುವ ಕ್ರಸಂ.07751 ವಾಡಿ-ಫಲಕ್‌ನಾಮಾ ರಾತ್ರಿ 7:35ಕ್ಕೆ ಸಿಕಿಂದ್ರಾಬಾದ್ ತಲುಪುತ್ತದೆ. ಪ್ರತಿದಿನ ಸಂಜೆ 5:55ಕ್ಕೆ ಕಲಬುರಗಿ ನಿಲ್ದಾಣದಿಂದ ಹೊರಡುವ ಕಲಬುರಗಿ-ರಾಯಚೂರು ಪ್ಯಾಸೆಂಜರ್ 7:10ಕ್ಕೆ ವಾಡಿ ತಲುಪುತ್ತದೆ. ಹೀಗೆ ಒಟ್ಟು ಆರು ಲೋಕಲ್ ಟ್ರೇನ್‌ಗಳು ಸದ್ಯ ಕಲಬುರಗಿ, ವಾಡಿ, ನಾಲವಾರ, ಮರತೂರ, ನಂದೂರ, ಸೈದಾಪುರ, ಶಹಾಬಾದ, ಯಾದಗಿರಿ, ಚಿತ್ತಾಪುರ, ಮಳಖೇಡ, ಸೇಡಂ, ಸೊಲ್ಲಾಪುರ, ಗಾಣಗಾಪುರ, ದುದ್ಧನಿ, ತಾಂಡೂರು ಹಾಗೂ ಹೈದ್ರಾಬಾದ ನಿಲ್ದಾಣಗಳಿಗೆ ಪ್ರಯಾಣ ಬೆಳೆಸಬಹುದಾಗಿದೆ. ಲೋಕಲ್ ರೈಲುಗಳ ಓಡಾಟದಿಂದಾಗಿ ಹಳ್ಳಿ ಮತ್ತು ನಗರಗಳಿಗೆ ಸರಳವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಶೀಘ್ರವೇ ತಲುಪಬಹುದಾಗಿದೆ.
ಇದನ್ನೂ ಓದಿ:ಕ್ರೀಡೆಗೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ
ಕೊರೊನಾ ಲಾಕ್‌ಡೌನ್ ಸಂಕಷ್ಟದ ಸುದೀರ್ಘ ಎರಡು ವರ್ಷದ ಬಳಿಕ ರೈಲುಗಳು ಒಂದೊಂದಾಗಿ ಸಂಚಾರ ಆರಂಭಿಸುತ್ತಿವೆ. ಪ್ರಯಾಣಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ರೈಲುಗಳಿಗೆ ಹಸಿರು ನಿಶಾನೆ ತೋರಿಸುತ್ತಿದೆ. ಬಹುತೇಕ ಎಲ್ಲ ರೈಲುಗಳು ಓಡುತ್ತಿವೆ. ವಾಡಿ ಜಂಕ್ಷನ್ ಮೂಲಕ ಹಾಯ್ದು ಹೋಗುತ್ತಿದ್ದ ಶತಾಬ್ದಿ ಮತ್ತು ಚೆನ್ನೈ-ಮುಂಬೈ ಮೇಲ್ ಎಕ್ಸ್‌ಪ್ರೆಸ್ ರೈಲುಗಳು ಸೇರಿದಂತೆ ಫಲಕನಾಮಾ-ಸೊಲ್ಲಾಪುರ ರೈಲು ವಾಡಿ ನಿಲ್ದಾಣಕ್ಕೆ ಆಗಮಿಸಿ ಅಂತ್ಯಗೊಳ್ಳುತ್ತಿದೆ. ಡಿ.1ರಿಂದ ಎಲ್ಲ ರೈಲುಗಳು ಹಳಿಗೆ ಬರಲಿವೆ. ಸದ್ಯ ಲೋಕಲ್ ರೈಲುಗಳಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಆರೋಗ್ಯದ ದೃಷ್ಟಿಯಿಂದ ಕೋವಿಡ್ ನಿಯಮ ಪಾಲಿಸಿಕೊಂಡೇ ಜನರು ರೈಲು ಪ್ರಯಾಣ ಬೆಳೆಸಬೇಕು. ಜೆ.ಎನ್. ಪರೀಡಾ, ವಾಡಿ ರೈಲು ನಿಲ್ದಾಣ ಪ್ರಬಂಧಕ
-ಮಡಿವಾಳಪ್ಪ ಹೇರೂರ