Advertisement
ಕೊರೊನಾ ಬಗ್ಗೆ ಎಲ್ಲೆಡೆಯೂ ಜಿಲ್ಲಾಡಳಿತವು ವಿವಿಧ ಕ್ಯಾಂಪ್‌ಗ್ಳನ್ನು ಆಯೋಜನೆ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಲಿದೆ. ಆದರೂ ಕೆಲವೊಮ್ಮೆ ಜಿಲ್ಲೆಯ ನಿವಾಸಿಗಳು ವಿದೇಶದಲ್ಲಿ ನೆಲೆಸಿದ್ದು, ಕೊರೊನಾ ಭೀತಿಯಿಂದಾಗಿ ಸ್ವದೇಶಕ್ಕೆ ಆಗಮಿಸಿ ಜಿಲ್ಲೆಯಲ್ಲಿ ನೆಲೆಸುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತಕ್ಕೆ ಸಕಾಲಕ್ಕೆ ಮಾಹಿತಿ ದೊರೆಯುತ್ತಿಲ್ಲ. ಜಿಲ್ಲೆಯ ಜನತೆ ವಿದೇಶದಿಂದ ಆಗಮಿಸುವ ಜನರ ಬಗ್ಗೆ ಕೂಡಲೇ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಇಲ್ಲವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಪ್ರತಿ ದಿನವೂ ಹೇಳುತ್ತಿದೆ. ಕೊರೊನಾ ಬಗ್ಗೆ ಯಾವುದೇ ಸೋಂಕು ಕಾಣಿಸಿಕೊಳ್ಳದಂತೆ ಎಚ್ಚರಿಕೆ ವಹಿಸಿದೆ.
Related Articles
Advertisement
ಕೆಲವೊಂದು ಪಡಿತರ ಕೇಂದ್ರದಲ್ಲಿ ಮಾಸ್ಕ್ ಗಳನ್ನು ದುಬಾರಿ ಧರದಲ್ಲಿ ಮಾರಾಟ ಮಾಡುವ ವಿಚಾರ ಬೆಳಕಿಗೆ ಬರುತ್ತಿವೆ. ಅಂತವರ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಅಲ್ಲದೇ, ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ 30 ಸಾವಿರ ಮಾಸ್ಕ್ ಗಳನ್ನು ವಿತರಣೆ ಮಾಡಲಾಗಿದೆ.
ಒಡನಾಟದಲ್ಲಿದ್ದವರ ಮೇಲೂ ನಿಗಾ : ಕೊರೊನಾ ವೈರಸ್ ಭೀತಿ ದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಜಿಲ್ಲೆಯಲ್ಲೂ ವಿದೇಶದಿಂದ ಆಗಮಿಸುವ ದೇಶದ ನಿವಾಸಿಗಳ ಮೇಲೆಯೂ ನಿಗಾ ವಹಿಸುತ್ತಿದ್ದಾರೆ. ಅಲ್ಲದೇ, ಅವರ ಅಕ್ಕಪಕ್ಕದವರ ಹಾಗೂ ಅವರ ಜೊತೆ ಒಡನಾಟದಲ್ಲಿರುವವರ ಮೇಲೆಯೂ ನಿಗಾ ವಹಿಸಿದ್ದಾರೆ. ಜಿಲ್ಲೆಯಲ್ಲಿ ಮಂಗಳವಾರದ ವರೆಗೂ 22 ಜನರ ಮೇಲೆ ನಿಗಾ ವಹಿಸಲಾಗಿದೆ. 14 ದಿನಗಳ ವರೆಗೂ 22 ಜನರ ಮೇಲೂ ನಿಗಾವಹಿಸಿ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಮಾಡಲಾಗಿದೆ. 14 ದಿನದಲ್ಲಿ 05 ಜನರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಆದರೆ ಅವರಲ್ಲಿ ಯಾವುದೇ ಸೋಂಕು ಕಾಣಿಸಿಕೊಂಡಿಲ್ಲ. ಅವರು ಆರೋಗ್ಯವಾಗಿಯೇ ಇದ್ದಾರೆ. ಇನ್ನೂ ಮಂಗಳವಾರದ ಅಂತ್ಯಕ್ಕೆ 17 ಜನರ ಮೇಲೆ ಜಿಲ್ಲಾಡಳಿತ ನಿರಂತರ ಕಣ್ಣಿಟ್ಟಿದೆ. ಅವರಲ್ಲಿ ಯಾವುದೇ ಸೋಂಕು ಇಲ್ಲವಾದರೂ ಆರೋಗ್ಯದ ಹಿತದೃಷ್ಟಿಯಿಂದ ನಿಗಾ ವಹಿಸಲಾಗಿದೆ.
ವಿಜ್ಞಾನ ಭವನದಲ್ಲಿ 50 ಬೆಡ್ ವ್ಯವಸ್ಥೆ : ಜಿಲ್ಲೆಯಲ್ಲಿ ಈ ವರೆಗೂ ಯಾವುದೇ ಸೋಂಕಿತರು ಕಂಡುಬಂದಿಲ್ಲವಾದರೂ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿ ಅಂತಹ ಸೋಂಕಿತರು ಪತ್ತೆಯಾದರಲ್ಲಿ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ 12 ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿ ಎಲ್ಲ ವ್ಯವಸ್ಥೆಯನ್ನೂ ಮಾಡಲಾಗಿದೆ. ಇನ್ನೂ ಸೋಂಕಿತರು ಪತ್ತೆಯಾದಲ್ಲಿ ಅವರಿಗೆ ವಿಶೇಷ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಕೊಪ್ಪಳದ ತಹಸೀಲ್ದಾರ ಕಚೇರಿ ಆವರಣದಲ್ಲಿರುವ ವಿಜ್ಞಾನ ಭವನದಲ್ಲಿ 50 ಬೆಡ್ ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ತಕ್ಕಂತೆ ವೈದ್ಯರನ್ನು ನಿಯೋಜನೆ ಮಾಡಲಾಗುತ್ತಿದೆ.
ಬೋಟ್‌ಗಳ ಸಂಚಾರ ಸಂಪೂರ್ಣ ನಿಷಿದ್ಧ : ಬಳ್ಳಾರಿ ಭಾಗಕ್ಕೆ ಬರುವ ವಿದೇಶಿಗರು ಹಂಪಿ ಭಾಗದಿಂದ ನೀರಿನ ಹರಿವಿನ ತಾಣದಲ್ಲಿ ಬೋಟ್‌ಗಳ ಮೂಲಕ ಆನೆಗೊಂದಿ ಭಾಗಕ್ಕೆ ಆಗಮಿಸುತ್ತಿದ್ದು, ಅವರು ಜಿಲ್ಲೆಗೆ ಅಗಮಿಸುವುದನ್ನು ತಪ್ಪಿಸಲು ಬೋಟ್ ಸಂಚಾರ ಸಂಪೂರ್ಣ ನಿಷೇಧ ಮಾಡಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಜಿಲ್ಲೆಗೆ ಆಗಮಿಸಿರುವ ವಿದೇಶಿಗರ ಸರ್ವೇಕಾರ್ಯವೂ ನಡೆದಿದೆ. ಅಲ್ಲದೇ, ಇತ್ತೀಚೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಳ್ಳುತ್ತಿದ್ದು, ಅದರ ಮೇಲೆಯೂ ನಿಗಾ ವಹಿಸಲಾಗಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಫಾರಂಗಳಿದ್ದು ಅವುಗಳ ಮೇಲೆಯೂ ನಿಗಾ ವಹಿಸಲು ಪಶುಪಾಲನಾ ಇಲಾಖೆಗೆ ಸೂಚನೆ ನೀಡಲಾಗಿದೆ.-ಸುನೀಲ್ ಕುಮಾರ, ಜಿಲ್ಲಾಧಿಕಾರಿ. ಕೊಪ್ಪಳ
-ದತ್ತು ಕಮ್ಮಾರ