Advertisement

ಶ್ರೀಧರ ಸ್ವಾಮಿಗಳ ಚಾತುರ್ಮಾಸ್ಯ ವೃತದ ಸ್ಮರಣೆ

11:34 AM Jul 14, 2019 | Suhan S |

ಹೊನ್ನಾವರ: ಸಮಾಧಿಸ್ಥರಾಗಿ ನಾಲ್ಕು ದಶಕ ಕಳೆದ ಮೇಲೂ ಭಕ್ತರು ವೃದ್ಧಿಸುತ್ತಿರುವ ಅವಧೂತ ಶ್ರೀಧರ ಸ್ವಾಮಿಗಳ ಚಾತುರ್ಮಾಸ್ಯ ವೃತದ ಕುರಿತು ಮೂರು ದಶಕಗಳಿಗೂ ಹೆಚ್ಚುಕಾಲ ಅವರ ಸೇವೆ ಮಾಡಿಕೊಂಡಿದ್ದ ಜನಾರ್ಧನ ರಾಮದಾಸಿ ಮತ್ತು ಜಾನಕಕ್ಕ ಸ್ಮರಿಸಿಕೊಂಡ ವಿವರ ಇಂತಿದೆ.

Advertisement

ಉತ್ತರದ ಅಯೋಧ್ಯೆ, ಬದರಿ ಕ್ಷೇತ್ರಗಳಲ್ಲಿಯೂ ಚಾತುರ್ಮಾಸ್ಯ ನಡೆಸಿದ ಶ್ರೀಗಳು ಸಾಗರದ ವರದಹಳ್ಳಿಯಲ್ಲಿ ಈಗ ಸಮಾಧಿ ಇರುವ ಸ್ಥಳದಲ್ಲಿ ಹೆಚ್ಚುಕಾಲ ವೃತ ನಡೆಸಿದ್ದರು. ಮಂಗಳೂರಿನ ಕದ್ರಿಯ ಪದವು ಹೈಸ್ಕೂಲ್ ಬಳಿ ಶ್ರೀಧರ ಶೆಣೈ ಅವರ ವಿಶಾಲವಾದ ಕಾನನದಂತಿದ್ದ ಅವರ ತೋಟದಲ್ಲಿರುವ ಮನೆಯಲ್ಲಿ 6ಬಾರಿ ಚಾತುರ್ಮಾಸ್ಯ ನಡೆಸಿದರು. ರಾಯಚೂರು ಕುರುಗುಡ್ಡೆ ಎಂಬ ಸ್ಥಳದಲ್ಲಿ 2ತಿಂಗಳು ಚಾತುರ್ಮಾಸ್ಯ ನಡೆಸಿದಾಗ ಒಂದು ತಿಂಗಳು ಬರಿ ಬೇವಿನ ರಸ, ನಂತರ ಆರಾರೂಟ್ ಸೇವಿಸಿ ವೃತ ನಡೆಸಿದ್ದರು. ಮೈಸೂರಿನಲ್ಲಿಯೂ ವೃತಾಚರಣೆ ನಡೆಯಿತು. ಹೆಚ್ಚಿನ ಊರುಗಳಲ್ಲಿ ನಾಲ್ಕು ತಿಂಗಳು ಕಟ್ಟುನಿಟ್ಟಿನ ವೃತ ನಡೆಸುವಾಗ ಭಕ್ತರಿಗೆ ದರ್ಶನ, ಆಶೀರ್ವಚನ ಯಾವುದೂ ಇರಲಿಲ್ಲ. ಕಟ್ಟುನಿಟ್ಟಾಗಿ ಏಕಾಂತ ಮತ್ತು ಮೌನ. ಹೊರಗಿನ ಕೋಣೆಯಲ್ಲಿ ಆಹಾರ ಇಟ್ಟು ಬಂದರೆ ಯಾವ ಸಮಯದಲ್ಲಿ ಸ್ವೀಕರಿಸುತ್ತಿದ್ದರೋ ಗೊತ್ತಿಲ್ಲ. ಬೊಗಸೆಯಲ್ಲಿ ಅನ್ನ, ಹಣ್ಣು ಪಡೆದು ಎರಡು ಹೆಬ್ಬೆರಳಿನಿಂದ ಎತ್ತಿಹಾಕಿ, ಅದು ಪಕ್ಷಿಗಳಿಗೆ, ಮೂರು ತುತ್ತು ಸೇವಿಸಿದ ಮೇಲೆ ಉಳಿದದ್ದು ಪ್ರಾಣಿಗಳಿಗೆ ಎಂದು ಬಿಟ್ಟುಬಿಡುತ್ತಿದ್ದರು. ಒಂದೆರಡು ತಿಂಗಳು ಸರಿದಂತೆ ಸಮಯ, ದಿನಾಂಕದ ಪರಿವೇ ಇರುತ್ತಿರಲಿಲ್ಲ. ಧ್ಯಾನಸ್ಥರಾಗಿಯೇ ಇರುತ್ತಿದ್ದ ಅವರ ಬಳಿ ಯಾರೂ ಹೋಗುತ್ತಿರಲಿಲ್ಲ. ಹೀಗೆ ವೃತ ಮಾಡದಿದ್ದರೆ ಪರಮ ಸತ್ಯದೊಂದಿಗೆ ಅನುಸಂಧಾನ ಸಾಧ್ಯವಿಲ್ಲ, ಭಕ್ತರನ್ನು ಅನುಗ್ರಹಿಸುವುದು ಸಾಧ್ಯವಿಲ್ಲ ಎಂದು ತಪಸ್ಸು ಮಾಡುತ್ತಿದ್ದರು.

ಬದರಿಗೆ ಹೋದಾಗ ಅಲ್ಲಿ ಚಳಿಯಿಂದ ಜನ ನಡುಗುವುದನ್ನು ಕಂಡು ಉಣ್ಣೆ ಬಟ್ಟೆಯಿರುವ ಅಂಗಡಿಗೆ ಹೋಗಿ ಚಾತುರ್ಮಾಸ್ಯಕ್ಕಾಗಿ ಕೊಂಡು ಹೋಗಿದ್ದ ಹಣ ಪೂರ್ತಿ ಖರ್ಚು ಮಾಡಿ ಬೆಚ್ಚಗಿನ ಬಟ್ಟೆ ಖರೀದಿಸಿ ಹಂಚಿದ್ದರು. ವೈತಕ್ಕೆ ಮುಂಬೈ ಭಕ್ತರು ಮತ್ತೆ ಹಣ ಕಳಿಸಿಕೊಟ್ಟರು. ಕೊನೆಯ 6ವರ್ಷ ವರದಹಳ್ಳಿಯಲ್ಲಿ ಏಕಾಂತದಲ್ಲಿದ್ದಾಗ ದರ್ಶನ ಇರಲಿಲ್ಲ. ಗಣೇಶ ಚತುರ್ಥಿ, ನವರಾತ್ರಿ, ಮೊದಲಾದ ಹಬ್ಬಗಳು ಬಂದಾಗ ನಾವು ವಿನಂತಿಸಿ, ಸಂದೇಶ ಪಡೆಯುತ್ತಿದ್ದೆವು. ಅದನ್ನೇ ಈಗ ಯಥಾಸ್ಥಿತಿಯಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದೇವೆ. ಶ್ರೀಧರರ ಮೂಲ ಉಪನ್ಯಾಸಗಳು ಈ ಕೃತಿಯಲ್ಲಿವೆ ಎಂದರು.

ಎಲ್ಲ ಹೆಣ್ಣು ಮಕ್ಕಳನ್ನು ತಾಯಂದಿರಂತೆ ನೋಡುತ್ತೇನೆ, ಎಂದೂ ಹಣವನ್ನು ಕೈಯಾರೆ ಮುಟ್ಟುವುದಿಲ್ಲ ಎಂದು ಸನ್ಯಾಸಕ್ಕೂ ಮೊದಲು ಮಾಡಿದ ಪ್ರತಿಜ್ಞೆಯನ್ನು ಕೊನೆಯ ತನಕ ನಡೆಸಿಕೊಟ್ಟರು. ನೂರಾರು ದೇವಾಲಯಗಳ ಅಭಿವೃದ್ಧಿಗೆ ತಮಗೆ ಕಾಣಿಕೆ ಬಂದ ಹಣವನ್ನು ಬಳಸಿದ್ದು ಮಾತ್ರವಲ್ಲ ಸ್ವಯಂ ಸೇವಕರಾಗಿ ದುಡಿದರು. ತಮ್ಮ ಜೀವಿತವೇ ಸಂದೇಶ ಎಂದು ಬಾಳಿದರು.

ಆಷಾಢ ಏಕಾದಶಿಯಂದು ಎಲ್ಲ ಮಠಾಧೀಶರು, ಸನ್ಯಾಸಿಗಳು ಚಾತುರ್ಮಾಸ್ಯ ವೃತಾಚರಣೆಗಾಗಿ ತಮ್ಮ ನಿಗದಿತ ಸ್ಥಳಕ್ಕೆ ಹೋಗಿ ತಲುಪಿದ್ದಾರೆ. ಹುಣ್ಣಿಮೆಯಂದು ವ್ಯಾಸ ಪೂಜೆಯೊಂದಿಗೆ ಇವರು ಚಾತುರ್ಮಾಸ್ಯ ವೃತ ಆರಂಭಿಸುತ್ತಿದ್ದರು. ಭಗವಂತ ವಿಶ್ರಾಂತಿಯಲ್ಲಿರುವ ನಾಲ್ಕು ತಿಂಗಳ ಕಾಲ ಲೋಕದ ಯಾವ ಪ್ರಾಣಿಗೂ ನೋವಾಗದಂತೆ ಪ್ರಾರ್ಥಿಸಿ ಧ್ಯಾನಾಸಕ್ತರಾಗಲಿರುವ ಗುರುಗಳು ಧರ್ಮಜಾಗೃತಿಗಾಗಿ, ಭಕ್ತರ ಸಂತೋಷಕ್ಕಾಗಿ ಅವರ ಅಪೇಕ್ಷೆಯಂತೆ ವಿವಿಧ ಬಗೆಯಲ್ಲಿ ಚಾತುರ್ಮಾಸ್ಯ ನಡೆಸುತ್ತಾರೆ. ಶ್ರೀಧರ ಸ್ವಾಮಿಗಳ ಸಮಾಧಿ ವರದಹಳ್ಳಿಯಲ್ಲಿದ್ದು ಬಹುಕಾಲ ಅವರ ಸೇವೆ ಮಾಡಿದ ಜಾನಕಕ್ಕ ಮತ್ತು ಜನಾರ್ಧನ ರಾಮದಾಸಿ ಶ್ರೀಧರರ ಮುದ್ರಿತ ಧ್ವನಿಯ ಅಮೂಲ್ಯ ಸಂಗ್ರಹವನ್ನು ಕೃತಿರೂಪದಲ್ಲಿ ಪ್ರಕಟಿಸುತ್ತ ರಾಮತೀರ್ಥದಲ್ಲಿ ಪಾದುಕಾಶ್ರಮ ಮಾಡಿಕೊಂಡಿದ್ದಾರೆ.

Advertisement

ಶ್ರೀಗಳು ರಾಮತೀರ್ಥದಲ್ಲಿ ಕುಟೀರ ಮಾಡಿಕೊಂಡಿದ್ದರು. ತೀರ್ಥದ ಎದುರು ಇರುವ ಗುಹೆಯಲ್ಲಿ ಧ್ಯಾನ ಮಾಡುತ್ತಿದ್ದರು. ದತ್ತಾತ್ರೇಯ ಮೂರ್ತಿ ಸ್ಥಾಪಿಸಿ, ಔದುಂಬರ ವೃಕ್ಷ ನೆಟ್ಟಿದ್ದರು. ಆ ನೆನಪಿಗಾಗಿ ಶ್ರೀಧರಾಶ್ರಮದಲ್ಲಿ ಗುರುಪೂರ್ಣಿಮೆಯಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

 

•ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next