Advertisement

ಸಮನ್ವಯ ಸಮಿತಿ ಅಧ್ಯಕ್ಷರ ಸಭೆಗೂ ಬಾರದ ದಳಪತಿಗಳು

03:12 PM Mar 30, 2019 | Lakshmi GovindaRaju |

ಮೈಸೂರು: ಲೋಕಸಭೆ ಚುನಾವಣೆ ಸಂಬಂಧ ಕಾಂಗ್ರೆಸ್‌-ಜೆಡಿಎಸ್‌ ಪೂರ್ವಭಾವಿ ಸಭೆಗೆ ಸ್ವತಃ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಬಂದರೂ ಮೈಸೂರು ಜಿಲ್ಲೆಯಲ್ಲಿ ಸಮನ್ವಯ ಸಾಧಿಸಲಾಗಿಲ್ಲ.

Advertisement

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ರಾಜ್ಯ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಆದರೆ, ಈ ಸಭೆಯಿಂದ ದಳಪತಿಗಳು ದೂರ ಉಳಿಯುವ ಮೂಲಕ ದೋಸ್ತಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೂಮ್ಮೆ ಜಗಜ್ಜಾಹೀರು ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಮೈಸೂರಿನಿಂದ ಹೊರಗುಳಿಯುವ ಮೂಲಕ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದರೆ, ಮೈಸೂರಿನಲ್ಲೇ ಇದ್ದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅವರು ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ತಮ್ಮ ಸ್ವಕ್ಷೇತ್ರ ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ನಿಖೀಲ್‌ ಕುಮಾರಸ್ವಾಮಿ ಅವರೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

ಕಾಂಗ್ರೆಸ್‌ನಿಂದ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌, ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್‌ ಸೇರಿದಂತೆ ಪಕ್ಷದ ಹಲವು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರೂ ಜೆಡಿಎಸ್‌ ಕಡೆಯಿಂದ ಬಂದವರು ನಗರಪಾಲಿಕೆ ಮಾಜಿ ಸದಸ್ಯರಾದ ಆರ್‌.ಲಿಂಗಪ್ಪ, ಕೆ.ವಿ.ಮಲ್ಲೇಶ್‌ ಅವರು ಮಾತ್ರ.

ಕಾಂಗ್ರೆಸ್‌ -ಜೆಡಿಎಸ್‌ ಕಾರ್ಯಕರ್ತರ ಜಂಟಿ ಸಭೆಗೆ ಸಚಿವರಾದ ಜಿ.ಟಿ. ದೇವೇಗೌಡ ಮತ್ತು ಸಾ.ರಾ. ಮಹೇಶ್‌ ಗೈರಾದ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ , ಸಚಿವ ಜಿ.ಟಿ.ದೇವೇಗೌಡ ಅವರೊಂದಿಗೆ ಬೆಳಗ್ಗೆ ದೂರವಾಣಿ ಮೂಲಕ ನಾನು ಮಾತನಾಡಿದ್ದೇನೆ.

Advertisement

ಅವರ ಮೊಮ್ಮಗನಿಗೆ ಯಾವುದೋ ಹರಕೆ ಇರುವ ಹಿನ್ನೆಲೆಯಲ್ಲಿ ಬರಲು ಸಾಧ್ಯವಾಗಿಲ್ಲ . ಇನ್ನು ಸಚಿವ ಸಾ.ರಾ. ಮಹೇಶ್‌ ಅವರು ನಿಖೀಲ್‌ ಕುಮಾರಸ್ವಾಮಿ ಪರ ಪ್ರಚಾರಕ್ಕೆ ತೆರಳಿರುವ ಕಾರಣ ಸಭೆಗೆ ಬರಲು ಸಾಧ್ಯವಾಗಿಲ್ಲ . ಈ ಇಬ್ಬರು ನಾಯಕರು ಸಭೆಗೆ ಗೈರಾಗಿರುವ ಬಗ್ಗೆ ಬೇರೆ ರೀತಿಯ ಕಲ್ಪನೆಗಳು ಬೇಡ ಎಂದು ಹೇಳಿದರು.

2 ಲಕ್ಷ ಮತ ಅಂತರದ ಗೆಲುವು: ಕಾಂಗ್ರೆಸ್‌-ಜೆಡಿಎಸ್‌ ಒಟ್ಟಾದರೆ ಈ ಚುನಾವಣೆ ನಮಗೆ ಚುನಾವಣೆಯೇ ಅಲ್ಲ. 2 ಲಕ್ಷ ಮತಗಳ ಅಂತರದಿಂದ ನಾವು ಗೆಲುವು ಸಾಧಿಸುತ್ತೇವೆ. ಕಳೆದ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಚ್‌.ವಿಶ್ವನಾಥ್‌ 31 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಜೆಡಿಎಸ್‌ 1.2 ಲಕ್ಷ ಮತಗಳನ್ನು ಪಡೆದಿತ್ತು.

ಈ ಮತಗಳು ಕಾಂಗ್ರೆಸ್‌ಗೆ ವರ್ಗಾವಣೆಯಾದರೆ ನಮ್ಮ ಗೆಲುವು ನಿಶ್ಚಿತ. ಇವರು ಕಾಂಗ್ರೆಸ್‌- ಇವರು ಜೆಡಿಎಸ್‌ ಎಂದು ಬೇಧಭಾವ ಮಾಡದೆ, ನಿಮಗೆ ಗೌರವ ತರುವ ಕೆಲಸ ಮಾಡುತ್ತೇನೆ. ಕ್ಷೇತ್ರಕ್ಕೆ ಆಗಬೇಕಾದ ಕೆಲಸ ಮಾಡಲು ಸದಾ ಸಿದ್ಧನಿದ್ದೇನೆ ಎಂದು ಮೈತ್ರಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next