Advertisement

ಪ್ರಸಾದ ತಪಾಸಣೆಗೆ ಕಟ್ಟಪ್ಪಣೆ

11:41 PM Apr 30, 2019 | Team Udayavani |

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ದೇವಾಲಯಗಳಲ್ಲಿ ನೈವೇದ್ಯ ಹಾಗೂ ಭಕ್ತರಿಗೆ ವಿತರಿಸಲು ತಯಾರಿಸುವ ಪ್ರಸಾದವನ್ನು ಕಡ್ಡಾಯವಾಗಿ ಆರೋಗ್ಯಾಧಿಕಾರಿಗಳಿಂದ ತಪಾಸಣೆಗೊಳಪಡಿಸಬೇಕೆಂದು ಮುಜರಾಯಿ ಇಲಾಖೆ, ದೇವಾಲಯಗಳ ಆಡಳಿತ ಮಂಡಳಿಗಳಿಗೆ ಕಟ್ಟಪ್ಪಣೆ ಮಾಡಿದೆ.

Advertisement

2018ರ ಡಿಸೆಂಬರ್‌ನಲ್ಲಿ ಚಾಮರಾಜನಗರದ ಸುಳ್ಯಾಡಿ ಗ್ರಾಮದಲ್ಲಿ ಮಾರಮ್ಮನ ದೇವಸ್ಥಾನದ ಪ್ರಸಾದದಲ್ಲಿ ವಿಷಾಹಾರ ಸೇವನೆಯಿಂದ ಅನೇಕ ಜನರು ಜೀವ ಕಳೆದುಕೊಂಡ ನಂತರ ಎಚ್ಚೆತ್ತುಕೊಂಡಿದ್ದ ಮುಜರಾಯಿ ಇಲಾಖೆ, ಆರೋಗ್ಯಾಧಿಕಾರಿಗಳಿಂದ ಕಡ್ಡಾಯವಾಗಿ ಆಹಾರ ತಪಾಸಣೆಗೆ ಆದೇಶ ಹೊರಡಿಸಿತ್ತು. ಆ ಸಂದರ್ಭದಲ್ಲಿ ಖಾಸಗಿ ದೇವಸ್ಥಾನಗಳು ಹಾಗೂ ಮಠಾಧೀಶರಿಂದ ಅಪಸ್ವರ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನ ಆದೇಶದ ಬಗ್ಗೆ ಮೌನ ವಹಿಸಿತ್ತು.

ಇತ್ತೀಚೆಗೆ ತುಮಕೂರಿನ ಶಿರಾ ತಾಲೂಕಿನ ಚೆನ್ನಮ್ಮನ ಹಳ್ಳಿ ಆಂಜನೇಯ ದೇವಸ್ಥಾನದಲ್ಲಿ ದೇವರ ಪ್ರಸಾದ ಸ್ವೀಕರಿಸಿ ನೂರಕ್ಕೂ ಹೆಚ್ಚು ಸಾರ್ವಜನಿಕರು ಅಸ್ವಸ್ಥರಾದ ನಂತರ ಮುಜರಾಯಿ ಇಲಾಖೆ ತನ್ನ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಇಲಾಖೆ ವ್ಯಾಪ್ತಿಗೊಳಪಡುವ ದೇವಸ್ಥಾನದ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದೆ. ಅಲ್ಲದೆ, ನೈವೇದ್ಯ ಹಾಗೂ ದಾಸೋಹಕ್ಕಾಗಿ ಅಡುಗೆ ತಯಾರಿಸುವ ಕೋಣೆಗೆ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು.

ಅಡುಗೆ ಕೋಣೆಗೆ ಯಾವುದೇ ಅನಧಿಕೃತ ವ್ಯಕ್ತಿ ಪ್ರವೇಶಿಸದಂತೆ ಕಟ್ಟು ನಿಟ್ಟಾಗಿ ನಿಗಾ ವಹಿಸುವುದು, ತಯಾರಿಸಿರುವ ಅಡುಗೆ ಸ್ವೀಕರಿಸಲು ಯೋಗ್ಯವಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವುದು ಹಾಗೂ ಸಂಬಂಧಪಟ್ಟ ಆರೋಗ್ಯಾಧಿಕಾರಿಗಳಿಂದ ಕಡ್ಡಾಯವಾಗಿ ಪರೀಕ್ಷೆ ನಡೆಸಬೇಕು ಎಂದು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next