ನವದೆಹಲಿ:ರಾಷ್ಟ್ರರಾಜಕಾರಣದ ಹಣೆಬರಹಕ್ಕೆ ದಿಕ್ಸೂಚಿಯಾಗಲಿರುವ ಚುನಾವಣೆ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಬುಧವಾರ ಅಧಿಕೃತವಾಗಿ ಘೋಷಿಸಿದೆ. ಭಾರೀ ಜಿದ್ದಾಜಿದ್ದಿನ ಹಾಗೂ ಹೈವೋಲ್ಟೇಜ್ ಚುನಾವಣೆ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ಕ್ರಮ ಕೈಗೊಂಡ ಬಳಿಕ ನಡೆಯುತ್ತಿರುವ ಮಹತ್ವದ ಚುನಾವಣೆ ಇದಾಗಿದೆ.
ಫೆಬ್ರುವರಿ 4ರಿಂದ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಹಾಗೂ ಗೋವಾ ವಿಧಾನಸಭೆ ಚುನಾವಣೆ ಆರಂಭವಾಗಲಿದೆ. ಮಾರ್ಚ್ 11ರಂದು ಫಲಿತಾಂಶ ಹೊರಬೀಳಲಿದೆ.
ನವೆಂಬರ್ 8ರಂದು ರಾತ್ರಿ 500, 1000 ರೂ. ಮುಖಬೆಲೆಯ ನೋಟು ನಿಷೇಧಿಸುವ ಮೂಲಕ ಪ್ರಧಾನಿ ಮೋದಿ ಅವರು ವಿಪಕ್ಷಗಳಿಂದ ಭಾರೀ ಟೀಕೆಗೊಳಗಾಗಿದ್ದರೆ, ದೇಶದ ಜನತೆ ನಿಷೇಧ ಕ್ರಮವನ್ನು ಸ್ವಾಗತಿಸಿದ್ದರು.
ಆ ನೆಲೆಯಲ್ಲಿ ಪಂಚ ರಾಜ್ಯಗಳ ಚುನಾವಣೆ ಪ್ರಧಾನಿ ಮೋದಿ ಅವರಿಗೆ ರಾಜಕೀಯದ ಅಗ್ನಿಪರೀಕ್ಷೆಯಾಗಿದೆ. ಭ್ರಷ್ಟಾಚಾರ ಹಾಗೂ ಕಪ್ಪುಹಣ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡ ನೋಟು ನಿಷೇಧದ ಕ್ರಮ ವ್ಯಾಪಕ ಚರ್ಚೆಗೊಳಗಾಗಿದೆ. ನೋಟು ನಿಷೇಧದಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂಬುದು ಕಾಂಗ್ರೆಸ್ ಸೇರಿದಂತೆ ವಿವಿಧ ವಿಪಕ್ಷಗಳ ಆರೋಪ. ಆದರೆ ನೋಟು ನಿಷೇಧದಿಂದ ತೊಂದರೆಯಾಗಿರುವುದು ಭ್ರಷ್ಟರಿಗೆ ಹಾಗೂ ಕಪ್ಪು ಕುಳಗಳಿಗೆ ಎಂಬ ವಾದ ಬಿಜೆಪಿಯದ್ದು. ಹಾಗಾಗಿ ರಾಜಕೀಯ ನೆಲೆಗಟ್ಟಿನಲ್ಲಿ ಮೋದಿ ಅವರು ಕೈಗೊಂಡ ಕ್ರಮಕ್ಕೆ ಜನ ಬೆಂಬಲ ಇದೆಯೋ ಅಥವಾ ಇಲ್ಲವೋ ಎಂಬುದು ಪಂಚರಾಜ್ಯಗಳ ಚುನಾವಣಾ ಫಲಿತಾಂಶದಿಂದ ಬಯಲಾಗಲಿದೆ ಎಂದು ವಿದೇಶಿ ಮಾಧ್ಯಮಗಳು ವಿಶ್ಲೇಷಿಸಿವೆ.
2017ರಲ್ಲಿ ನಡೆಯಲಿರುವ ಪಂಚರಾಜ್ಯಗಳ ಚುನಾವಣೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ಜನಪ್ರಿಯತೆಯನ್ನು ಸಾಬೀತುಪಡಿಸುವ ಪ್ರಮುಖ ಅಗ್ನಿಪರೀಕ್ಷೆಯಾಗಿದೆ ಎಂದು ಪ್ರಮುಖ ಆರ್ಥಿಕ ತಜ್ಞ ರಾಜೀವ್ ಬಿಸ್ವಾಸ್ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ. ಒಂದು ವೇಳೆ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವಲ್ಲಿ ವಿಫಲವಾದರೆ ಅದು ಭಾರತೀಯ ಜನತಾ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ವಿಶ್ಲೇಷಿಸಿದ್ದಾರೆ.