ನವದೆಹಲಿ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಕಂಪನಿಗಳ ನಡುವೆ ಪೈಪೋಟಿ ಹುಟ್ಟುಹಾಕಿರುವಂತೆಯೇ ಈಗ ಓಲಾ ಕಂಪನಿಯು “ಮೇಡ್ ಫಾರ್ ಇಂಡಿಯಾ’ ಚಾಟ್‌ಜಿಪಿಟಿಯನ್ನು ಪರಿಚಯಿಸಲು ಮುಂದಾಗಿದೆ.
ಭಾರತಕ್ಕಾಗಿಯೇ ವಿಶೇಷವಾಗಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಭಾರತದ 10 ಭಾಷೆಗಳಲ್ಲಿ ಇದು ಲಭ್ಯವಿರಲಿದೆ ಎಂದು ಓಲಾ ಸ್ಥಾಪಕ ಭವಿಶ್ ಅಗರ್ವಾಲ್ ಹೇಳಿದ್ದಾರೆ.
ಅಗರ್ವಾಲ್ ಅವರ ಎಐ ಕಂಪನಿಗೆ “ಕೃತ್ರಿಮ್” (ಸಂಸ್ಕೃತ ಭಾಷೆಯಲ್ಲಿ ಕೃತಕ ಎಂದರ್ಥ) ಎಂದು ಹೆಸರಿಡಲಾಗಿದೆ. ಕಳೆದ ಏಪ್ರಿಲ್‌ನಿಂದಲೇ ಕೃತ್ರಿಮ್ ಎಸ್‌ಐ ಡಿಸೈನ್ಸ್ ಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು, ಬೆಂಗಳೂರು ಮತ್ತು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಕಚೇರಿಗಳನ್ನು ಹೊಂದಿದೆ. ಜನವರಿಯಲ್ಲೇ ಚಾಟ್ ಜಿಪಿಟಿಯ ಬೇಟಾ ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದೂ ಅಗರ್ವಾಲ್ ತಿಳಿಸಿದ್ದಾರೆ.
ಓಲಾ ಚಾಟ್ ಜಿಪಿಟಿಯು ಬೇರೆ ಬೇರೆ ಭಾಷೆಗಳಲ್ಲಿ ಲಭ್ಯವಿರಲಿದೆ. ಬಂಗಾಳಿ ಭಾಷೆಯ ಕವಿತೆಗಳಿಂದ ಹಿಡಿದು ಬಾಲಿವುಡ್ ಸಿನಿಮಾಗಳು, ಮಸಾಲಾ ದೋಸೆ ತಯಾರಿಸುವುದು ಹೇಗೆ ಎನ್ನುವಲ್ಲಿಯವರೆಗೆ ಇದು ಭರಪೂರ ಮಾಹಿತಿ ನೀಡಲಿದೆ. ಎಐ ಮಾಡೆಲ್‌ಗಳ ಜತೆ ನೀವು ಮಾತುಕತೆಯನ್ನೂ ನಡೆಸಬಹುದಾಗಿದೆ ಎಂದಿದ್ದಾರೆ ಅಗರ್ವಾಲ್.
ಈಗಾಗಲೇ ಭಾರತದಲ್ಲಿ ಸರ್ಕಾರದ ಭಾಷಿಣಿ ಯೋಜನೆಯನ್ನು ಆಧರಿಸಿ ಹಲವು ಸಂಸ್ಥೆಗಳು ಭಾರತೀಯ ಭಾಷಾ ಡೇಟಾಬೇಸ್ ರೂಪಿಸುವ ಮತ್ತು ಅದನ್ನು ಬಳಸಿಕೊಂಡು ಎಐ ಮಾಡೆಲ್‌ಗಳಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿವೆ.