ನವದೆಹಲಿ: ನೀವು ಔಷಧ ಖರೀದಿ ಮಾಡಲು ಹೋದಾಗ ಅದನ್ನು ಅಸಲಿಯೋ, ನಕಲಿಯೋ ಎಂದು ಪರೀಕ್ಷಿಸಲು ಸಾಧ್ಯವಿದೆ. ಇಂಥ ಒಂದು ಪರೀಕ್ಷಾ ಕ್ರಮದ ಮೂಲಕ ನಕಲಿ ಔಷಧಗಳಿಗೆ ಕಡಿವಾಣ ಹಾಕಲು ಪಾಕೆಟ್ ಮೇಲೆ ಬಾರ್‌ಕೋಡ್ ಅಥವಾ ಕ್ಯೂಆರ್ ಕೋಡ್ ಮುದ್ರಿಸಲು ಕೇಂದ್ರ ಸರ್ಕಾರ ಸೂಚನೆ ನೀಡಲಿದೆ.
ಮೊದಲ ಹಂತದಲ್ಲಿ ಅಲ್ಲೆಗ್ರಾ, ಡೊಲೊ, ಆಗ್ಮೆಂಟಿನ್, ಸ್ಯಾರಿಡಾನ್, ಕ್ಯಾಲ್ಪೋಲ್, ಥೈರೋನಾರ್ಮ್ ಸೇರಿದಂತೆ 300ಕ್ಕೂ ಅಧಿಕ ಜನಪ್ರಿಯ ಔಷಧಗಳನ್ನು ಈ ನಿಯಮದ ವ್ಯಾಪ್ತಿಯಲ್ಲಿ ತರಲಾಗುತ್ತದೆ. ನಂತರ ಎಲ್ಲಾ ಬ್ರಾಂಡ್ ಔಷಧಗಳಿಗೆ ಕಡ್ಡಾಯಗೊಳಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಜಗತ್ತಿನಲ್ಲಿ ಮಾರಾಟವಾಗುತ್ತಿರುವ ಶೇ.35ರಷ್ಟು ನಕಲಿ ಔಷಧಗಳು ಭಾರತದಿಂದ ಬರುತ್ತಿದೆ ಎಂದು ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂéಎಚ್‌ಒ) ಅಂದಾಜಿಸಿತ್ತು. ಅದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.
“ಔಷಧಗಳ ಪಾಕೆಟ್ ಮೇಲೆ ಬಾರ್‌ಕೋಡ್ ಅಥವಾ ಕ್ಯೂಆರ್ ಕೋಡ್ ಪ್ರಿಂಟ್ ಮಾಡುವುದು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳು ನಡೆದಿದೆ. ಇದು ಮುಂದಿನ ಕೆಲವು ವಾರಗಳಲ್ಲಿ ಅನುಷ್ಠಾನಕ್ಕೆ ಬರಲಿದೆ,’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
“ಸರ್ಕಾರವು ಸೆಂಟ್ರಲ್ ಡೇಟಾಬೇಸ್ ಏಜೆನ್ಸಿಯನ್ನು ಸ್ಥಾಪಿಸುತ್ತಿದೆ. ಇದರಿಂದ ಇಡೀ ಉದ್ಯಮಕ್ಕೆ ಒಂದೇ ಬಾರ್‌ಕೋಡ್ ಪ್ರೊವೈಡರ್ ಅನ್ನು ಭಾರತ ಹೊಂದಬಹುದು,’ ಎಂದು ಅಧಿಕಾರಿ ತಿಳಿಸಿದರು.
ಬಾರ್‌ಕೋಡ್ ಅಥವಾ ಕ್ಯೂಆರ್ ಕೋಡ್ ನಲ್ಲಿರುವ ಡೇಟಾದಿಂದ ಸಾಫ್ಟ್ವೇರ್ ಅಪ್ಲಿಕೇಶನ್‌ಗಳಿಗೆ ಸುಲಭವಾಗಿ ದೃಢೀಕರಣ ಸಾಧ್ಯವಾಗಲಿದೆ. ಡೇಟಾದಲ್ಲಿ ಔಷಧಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯು ಇರಲಿದೆ.
ನಕಲಿ ಔಷಧಗಳ ಬಗ್ಗೆ ಭಾರತಕ್ಕೆ 2019ರಲ್ಲಿ ಅಮೆರಿಕ ಎಚ್ಚರಿಸಿತ್ತು. ನಕಲಿ ಔಷಧಗಳ ತಡೆಗೆ ಈ ನಿಯಮ ಅಗತ್ಯವಾಗಿ ಬೇಕಾಗಿದೆ.