Advertisement

ಇನ್ನೂ ಆರಂಭಗೊಳ್ಳದ ಹೊರಬಂದರು ನಿರ್ಮಾಣ ಕಾಮಗಾರಿ

08:35 PM Sep 22, 2019 | Sriram |

ಕುಂದಾಪುರ: ರಾಜ್ಯದ ಮೊದಲ “ಯಾ’ ಶೇಪ್‌ ಮಾದರಿಯ ಮರವಂತೆಯ ಹೊರ ಬಂದರು ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡು, ವರ್ಷ ಕಳೆದರೂ, ಇನ್ನೂ ಆರಂಭಗೊಂಡಿಲ್ಲ. ಅರೆಬರೆ ಕಾಮಗಾರಿಯಿಂದಾಗಿ ಸಾಂಪ್ರ ದಾಯಿಕ ಮೀನುಗಾರಿಕೆ ಬಂದರು ಎಂದೇ ಹೆಸರಾದ ಮರವಂತೆಯಲ್ಲಿ ಮೀನುಗಾರಿಕೆಗೆ ಸಮಸ್ಯೆಯಾಗುತ್ತಿದೆ.
ಬಂದರು ಮತ್ತು ಒಳ ನಾಡು ಜಲಸಾರಿಗೆ ಇಲಾಖೆಯ ವತಿ ಯಿಂದ 54 ಕೋ.ರೂ. ವೆಚ್ಚದಲ್ಲಿ ಮರವಂತೆಯಲ್ಲಿ ಕೇರಳ ಮಾದರಿಯ ಹೊರ ಬಂದರು ನಿರ್ಮಾಣ ಕಾಮಗಾರಿ 6 ವರ್ಷಗಳ ಹಿಂದೆ ಕೈಗೆತ್ತಿಕೊಳ್ಳಲಾಗಿತ್ತು. ಇಲ್ಲಿನ 850 ಮೀ. ಉದ್ದದ ತೀರ ಪ್ರದೇಶದ ಪೈಕಿ ಉತ್ತರ ಭಾಗದಲ್ಲಿ 260 ಮೀ. ಉದ್ದ ಹಾಗೂ ದಕ್ಷಿಣ ಭಾಗದಲ್ಲಿ 355 ಮೀ. ಉದ್ದದ ಬ್ರೇಕ್‌ವಾಟರ್‌ (ಟ್ರೆಟ್ರಾಫೈಡ್‌)ನ ತಡೆಗೋಡೆ ನಿರ್ಮಿಸಿ, ಪ್ರವೇಶದ್ವಾರ ಮಾಡಿ, ಮೀನುಗಾರಿಕೆ ಮುಗಿಸಿ ಬರುವ ದೋಣಿ ಸುಲಭವಾಗಿ ಒಳ ಪ್ರವೇಶಿಸು ವಂತೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ.

Advertisement

ಮರವಂತೆಯ ಹೊರ ಬಂದರಿನ ತಡೆಗೋಡೆ ನಿರ್ಮಾಣ ಕಾಮಗಾರಿ 2013ರಲ್ಲಿ ಆರಂಭಗೊಂಡಿದ್ದು, 2016 ರಲ್ಲಿ ಮುಗಿಯಬೇಕಿತ್ತು. ಆದರೆ 2019 ಆದರೂ, ಮುಗಿದೇ ಇಲ್ಲ. ತಮಿಳುನಾಡು ಮೂಲದ ಎನ್‌ಎಸ್‌ಕೆ ಬಿಲ್ಡರ್ಸ್‌ ಸಂಸ್ಥೆಗೆ ಈ ಕಾಮಗಾರಿ ವಹಿಸಲಾಗಿದೆ. 54 ಕೋ.ರೂ. ಪೈಕಿ 45 ಕೋ.ರೂ. ಅನುದಾನ ಮಂಜೂರಾಗಿದೆ. 9 ಕೋ.ರೂ. ವೆಚ್ಚದ ಕಾಮಗಾರಿ ಬಾಕಿಯಿದೆ. ಆದರೆ ವಿಳಂಬ ಕಾಮಗಾರಿಯಿಂದಾಗಿ ಈ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದರಿಂದ ಸ್ಥಗಿತಗೊಂಡಿದೆ ಎನ್ನಲಾಗಿದೆ.

ಮೀನುಗಾರಿಕೆಗೆ ಸಮಸ್ಯೆ
ಮರವಂತೆಯ ಹೊರ ಬಂದರಿನ ಎರಡೂ ಭಾಗಗಳಲ್ಲಿಯೂ ಬ್ರೇಕ್‌ ವಾಟರ್‌ ಕಾಮಗಾರಿ ಅಪೂರ್ಣವಾಗಿದೆ. ಈ ಅರೆಬರೆ ಕಾಮಗಾರಿಯಿಂದಾಗಿ ಮೀನುಗಾರಿಕೆಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಮೀನು ಗಾರಿಕೆ ಮುಗಿಸಿ ಬರುವ ಮೀನುಗಾರರು ಮರಳಿನ ಮೇಲೆಯೇ ಮೀನುಗಳನ್ನು ಇಳಿಸಬೇಕಾದ ಸ್ಥಿತಿಯಿದೆ. ಇನ್ನು ಮೀನು ಸಾಗಾಟ ವಾಹನಗಳು, ಮೀನುಗಾರರ ವಾಹನಗಳಿಗೆ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆಯಿಲ್ಲ. ಇಲ್ಲಿಗೆ ಸಂಪರ್ಕಿಸುವ ಮೀನುಗಾರಿಕಾ ರಸ್ತೆಯೂ ಸಂಪೂರ್ಣ ಹದಗೆಟ್ಟು ಹೋಗಿದೆ.

ಏನಿದು ಹೊರ ಬಂದರು?
ಇತರ ಮೀನುಗಾರಿಕಾ ಬಂದರು ಹಾಗೂ ಇಲ್ಲಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ, ಬೇರೆಲ್ಲ ಬಂದರುಗಳು ಸಹಜ ಬಂದರು ಆಗಿದ್ದರೆ, ಇದು ಕೃತಕವಾಗಿ ನಿರ್ಮಿಸಿದ ಬಂದರಾಗಿದೆ. ಅಂದರೆ ಇಲ್ಲಿನ ಮೀನುಗಾರರು ಬೇರೆ ಬಂದರನ್ನು ಅವಲಂಬಿಸುವ ಬದಲು ತಮ್ಮ ಅನುಕೂಲಕ್ಕಾಗಿ ಸ್ವತಃ ಕೃತಕವಾಗಿ ನಿರ್ಮಿಸಿಕೊಂಡ ಬಂದರಾಗಿದೆ. ನಾಡದೋಣಿ ಮೀನುಗಾರಿಕೆ ಇಲ್ಲಿನ ವೈಶಿಷ್ಟ್ಯ. 300ಕ್ಕೂ ಹೆಚ್ಚು ನಾಡದೋಣಿಗಳಿದ್ದು, ಸುಮಾರು 2 ಸಾವಿರಕ್ಕೂ ಹೆಚ್ಚಿನ ಮೀನುಗಾರರು ಇಲ್ಲಿದ್ದಾರೆ. ಇದಲ್ಲದೆ ಬೇರೆ ಕಡೆಗಳ ಮೀನುಗಾರಿಕೆ ದೋಣಿಗಳು ಇಲ್ಲಿಗೆ ಬರುತ್ತವೆ.

ಎರಡನೇ ಹಂತಕ್ಕೆ ಸರ್ವೆ
ಮರವಂತೆಯ ಹೊರ ಬಂದರು ಕಾಮಗಾರಿ ವರ್ಷದ ಹಿಂದೆ ಸ್ಥಗಿತ ಗೊಂಡಿದೆ. ಮೊದಲ ಹಂತದಲ್ಲಿ ಮಂಜೂರಾದ 54 ಕೋ.ರೂ. ಅನುದಾನದಲ್ಲಿ ಈಗಾಗಲೇ ಸುಮಾರು 45 ಕೋ.ರೂ. ವೆಚ್ಚದ ಕಾಮಗಾರಿ ಮುಗಿದಿದ್ದು, ಇನ್ನೂ ಸುಮಾರು 9 ಕೋ.ರೂ. ವೆಚ್ಚದ ಕಾಮಗಾರಿ ಬಾಕಿಯಿದೆ. ಅದನ್ನು ಈಗ ಹಿಂದೆ ವಹಿಸಿಕೊಂಡ ಸಂಸ್ಥೆಯಿಂದಲೇ ಮಾಡಿಸಬೇಕೇ ಅಥವಾ ಹೊಸ ಸಂಸ್ಥೆಯಿಂದ ಮಾಡಿಸಬೇಕೇ ಎನ್ನುವ ಕುರಿತು ಶೀಘ್ರವೇ ನಿರ್ಧಾರ ಕೈಗೊಂಡು, ಕಾಮಗಾರಿ ಪೂರ್ಣ ಗೊಳಿಸಲಾಗುವುದು. ಅದಲ್ಲದೆ ಅಂದಾಜು 350 ಮೀ. ಬ್ರೇಕ್‌ ವಾಟರ್‌ ನಿರ್ಮಾಣ ಸಂಬಂಧ ಎರಡನೇ ಹಂತದ ಯೋಜನೆಗೆ ಸರ್ವೆ ನಡೆಸಲಾಗಿದೆ. ಯೋಜನೆ ಸಿದ್ಧಪಡಿಸಿ, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
– ಕ್ಸೇವಿಯರ್‌ ಡಯಾಸ್‌,
ಸಹಾಯಕ ಇಂಜಿನಿಯರ್‌, ಬಂದರು ಮತ್ತು ಮೀನುಗಾರಿಕಾ ಇಲಾಖೆ

Advertisement

ಸಚಿವರ ಭರವಸೆ 
ಮರವಂತೆಯ ಹೊರ ಬಂದರು ನಿರ್ಮಾಣ ಕಾಮಗಾರಿ ಸ್ಥಗಿತಗೊಂಡ ಕುರಿತಂತೆ ಮೀನುಗಾರಿಕೆ ಹಾಗೂ ಬಂದರು ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಗಮನಕ್ಕೆ ತಂದು, ಶೀಘ್ರ ಸ್ಪಂದಿಸುವಂತೆ ಇಲ್ಲಿನ ಮೀನುಗಾರರ ನಿಯೋಗ ಭೇಟಿ ಮಾಡಿ ಮನವಿ ಮಾಡಿದ್ದೇವೆ. ಇಲ್ಲಿಗೆ ಶೀಘ್ರ ಭೇಟಿ ನೀಡಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎನ್ನುವ ಭರವಸೆ ನೀಡಿದ್ದಾರೆ.
– ಸಂಜೀವ ಖಾರ್ವಿ ಮರವಂತೆ, ಮೀನುಗಾರರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next