Advertisement

ಬಿಜೆಪಿ ಅಸಮಾಧಾನದ ಗುಂಪಿಗೆ ಸಮಾಧಾನದ ಉತ್ತರ?

08:20 AM Dec 09, 2020 | mahesh |

ಸುಳ್ಯ: ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಚುನಾವಣೆಯಲ್ಲಿನ ಅಡ್ಡ ಮತದಾನದ ಬಳಿಕ ಬಿಜೆಪಿಯೊಳಗೆ ಉಂಟಾಗಿರುವ ಆಂತರಿಕ ಅಸಮಾಧಾನ ಶಮನಗೊಳಿಸುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ ಪುತ್ತೂರಿನ ಪ್ರವಾಸಿ ಮಂದಿರದಲ್ಲಿ ನಡೆದ ಗುಪ್ತ ಸಭೆಯಲ್ಲಿ ಅಸಮಾಧಾನಿತ ಗುಂಪಿಗೆ ಸಮಾಧಾನದ ಉತ್ತರ ದೊರೆತಿದೆ ಎನ್ನಲಾಗಿದೆ.

Advertisement

ಅಸಮಾಧಾನಿತ ಗುಂಪಿನ ಪ್ರಮುಖರ ಅಹವಾಲು ಆಲಿಸಿದ ನಳಿನ್‌, ಎರಡು ದಿನಗಳಲ್ಲಿ ಸುಳ್ಯ ಮಂಡಲ ಸಮಿತಿ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದ ರೀತಿಯಲ್ಲಿ ಬಗೆಹರಿಸುವ ಭರವಸೆ ನೀಡಿದ್ದಾರೆ. ಎರಡೂ ತಂಡಗಳು ಭಿನ್ನಾಭಿಪ್ರಾಯ ಮರೆತು ಜತೆ ಸೇರಿ ಒಗ್ಗಟ್ಟು ಪ್ರದರ್ಶಿಸಲು ಗ್ರೀನ್‌ ಸಿಗ್ನಲ್‌ ದೊರೆತಿದೆ ಎನ್ನುವ ಮಾಹಿತಿ ಲಭಿಸಿದೆ. ಜತೆಗೆ ಅಸಮಾಧಾನಿತ ಗುಂಪಿನ ಪ್ರಮುಖರು ಪಕ್ಷದ ಈಗಿನ ಬೆಳವಣಿಗೆಗಳ ಬಗ್ಗೆಯೂ ರಾಜ್ಯಾ ಧ್ಯಕ್ಷರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಷರತ್ತಿಗೆ ವಿನಾಯಿತಿ
ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಈ ಹಿಂದೆ ಎರಡೂ ಬಣಗಳು ಕೆಲವು ಬೇಡಿಕೆ ಮುಂದಿಟ್ಟಿದ್ದವು. ಇದಕ್ಕೆ ಎರಡೂ ಬಣಗಳಲ್ಲಿಯೂ ಸಮ್ಮತಿ ಸಿಕ್ಕಿಲ್ಲ. ಹೀಗಾಗಿ ಮುಂದೆ ಯಾವುದೇ ಷರತ್ತುಗಳು ಇಲ್ಲದೆ ಎಲ್ಲರೂ ಒಟ್ಟಾಗಿ ಮೊದಲಿನಂತೆ ಸಕ್ರಿಯರಾಗಬೇಕು. ಪಕ್ಷ ಸಂಘಟನೆಗೆ ಮತ್ತು ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ನಳಿನ್‌ ಕುಮಾರ್‌ ಕಟೀಲು ನಾಯಕರಿಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಡಿ. 11ರಂದು ಪತ್ರಿಕಾಗೋಷ್ಠಿ?
ಎಲ್ಲರನ್ನೂ ಒಟ್ಟು ಸೇರಿಸಿ ಮಾತುಕತೆ ನಡೆಸಿ ಎಲ್ಲ ಭಿನ್ನತೆಯನ್ನೂ ನಿವಾರಿಸಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಒಗ್ಗಟ್ಟನ್ನು ಪ್ರದರ್ಶಿಸಲು ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ. ಜತೆಗೆ ಗ್ರಾಮ ಮಟ್ಟದಲ್ಲಿ ಉಂಟಾಗಿರುವ ಅಸಮಾಧಾನ ಹೋಗಲಾಡಿಸಲು ಜಿಲ್ಲಾ ನಾಯಕರನ್ನು ಖುದ್ದು ಕಳುಹಿಸಿಕೊಡುವ ಭರವಸೆ ನೀಡಿದ್ದಾರೆ. ಉಭಯ ಬಣಗಳು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಡಿ.11ರಂದು ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಸಮಾಧಾನಕ್ಕೆ ಏನು ಕಾರಣ
ವರ್ಷದ ಹಿಂದೆ ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಚುನಾವಣೆ ನಡೆದಿತ್ತು. ಈ ಸಂದರ್ಭ ಸಹಕಾರ ಭಾರತಿ ಅಭ್ಯರ್ಥಿಯಾಗಿ ವೆಂಕಟ ದಂಬೆಕೋಡಿ, ಡಾ| ರಾಜೇಂದ್ರ ಕುಮಾರ್‌ ಬೆಂಬಲಿತ ಅಭ್ಯರ್ಥಿಯಾಗಿ ಕೆ.ಎಸ್‌.ದೇವರಾಜ್‌ ಸ್ಪರ್ಧಿಸಿದ್ದರು. ಒಟ್ಟು 23 ಸಹಕಾರ ಬ್ಯಾಂಕ್‌ಗಳ ಪೈಕಿ 17 ರಲ್ಲಿ ಸಹಕಾರ ಭಾರತಿ ಬೆಂಬಲಿಗರು ಅಧಿಕಾರದಲ್ಲಿದ್ದ ಕಾರಣ ವೆಂಕಟ್‌ ಅವರಿಗೆ ಗೆಲುವು ನಿರೀಕ್ಷಿಸಲಾಗಿತ್ತು. ಆದರೆ ವೆಂಕಟ್‌ ಪರಾಭವಗೊಂಡಿದ್ದರು. ಇದು ಪಕ್ಷದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.

Advertisement

ಮಾಹಿತಿಗೆ ನಕಾರ
ಪ್ರವಾಸಿ ಮಂದಿರದಲ್ಲಿ ಆಹ್ವಾನಿತ ಸದಸ್ಯರಿಗಷ್ಟೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಪಕ್ಷದ ಆಂತರಿಕ ವಿಚಾರವಾಗಿರುವ ಹಿನ್ನೆಲೆಯಲ್ಲಿ ಎರಡು ತಾಸುಗಳ ಕಾಲ ಗುಪ್ತ ಸಭೆ ನಡೆಯಿತು. ಸಭೆಯಲ್ಲಿ ಚರ್ಚೆಯಾದ ವಿಚಾರಗಳ ಬಗ್ಗೆ ರಾಜ್ಯಾಧ್ಯಕ್ಷರನ್ನು ಪತ್ರಕರ್ತರು ಪ್ರಶ್ನಿಸಿದ ಸಂದರ್ಭದಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿದ್ದರು. ಅಸಮಾಧಾನಿತ ಗುಂಪಿನ ಸದಸ್ಯರು ರಾಜ್ಯಾಧ್ಯಕ್ಷರ ಸೂಚನೆಯಂತೆ ಸಭೆಯ ಚರ್ಚಾ ವಿಷಯಗಳನ್ನು ಬಹಿರಂಗವಾಗಿ ಪ್ರಕಟಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next