ವೃದ್ಧರಿಗೆ ದಂಪತಿಗಳಿಗೆ, ಯುವಜನರಿಗೆ, ಹಾಗೂ ಮಕ್ಕಳಿಗೆ ಎಲ್ಲರೂ ಅನುಸರಿಸಿಕೊಂಡು ಬರಬೇಕಾದ ಮಾರ್ಗವನ್ನು ತೆರೆದಿಟ್ಟು ನಾವೆಲ್ಲರೂ ಮೊದಲು ಹೇಗಿದ್ದೆವು, ಈಗ ಹೇಗಿದ್ದೇವೆ, ಮುಂದೆ ಹೇಗಿರಬೇಕು ಎನ್ನುವುದನ್ನು ತಿಳಿ ಹೇಳುವ ಸಾಂಸಾರಿಕ ಬೋಧಪ್ರದ ನಗೆ ನಾಟಕವೇ ಗಂಗಮ್ಮಜ್ಜಿ ಗಂಟು.
ಇತ್ತೀಚೆಗೆ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರದರ್ಶನಗೊಂಡ ನಾಟಕ ಗಂಗಮ್ಮಜ್ಜಿ ಗಂಟು ನವಿರಾದ ಹಾಸ್ಯದೊಂದಿಗೆ ಗಂಭೀರ ಸಂದೇಶ ನೀಡಿತು. ವೃದ್ಧರಿಗೆ ದಂಪತಿಗಳಿಗೆ, ಯುವಜನರಿಗೆ, ಹಾಗೂ ಮಕ್ಕಳಿಗೆ ಎಲ್ಲರೂ ಅನುಸರಿಸಿಕೊಂಡು ಬರಬೇಕಾದ ಮಾರ್ಗವನ್ನು ತೆರೆದಿಟ್ಟು ನಾವೆಲ್ಲರೂ ಮೊದಲು ಹೇಗಿದ್ದೆವು, ಈಗ ಹೇಗಿದ್ದೇವೆ, ಮುಂದೆ ಹೇಗಿರಬೇಕು ಎನ್ನುವುದನ್ನು ತಿಳಿ ಹೇಳುವ ಸಾಂಸಾರಿಕ ಬೋಧಪ್ರದ ನಗೆ ನಾಟಕವೇ ಗಂಗಮ್ಮಜ್ಜಿ ಗಂಟು.
ಕಥಾವಸ್ತು: ಮಧ್ಯಮ ವರ್ಗದ ಕುಟುಂಬ. ಅದರಲ್ಲಿ ದೂರದ ಸಂಬಂಧಿ ಅಜ್ಜಿ, ಅಣ್ಣ-ತಮ್ಮ, ಅವರ ಹೆಂಡತಿಯರು, ನೆರೆಮನೆಯ ಸ್ನೇಹಿತ, ಕುಟುಂಬ ವೈದ್ಯ, ಹಮಾಲಿ, ವೇಷ ಮರೆಸಿದ ಪೋಲೀಸ್ ಆಫೀಸರ್ ಹಾಗೂ ಮಾಡರ್ನ್ ಪುರೋಹಿತ. ತನ್ನ ಗಂಡ ಅವನ ಕೊನೇ ಕಾಲದಲ್ಲಿ ನೀಡಿದ ಗಂಟಿನ ಸಮೇತ ದೂರದ ಸಂಬಂಧಿ ವೆಂಕಣ್ಣನ ಮನೆ ಸೇರಿಕೊಂಡ ಗಂಗಮ್ಮಜ್ಜಿಯ ಅನಾರೋಗ್ಯ ಸಮಯದಲ್ಲಿ ಗಂಟಿನ ಸುತ್ತ ಏನಿದೆ? ಏನೇನಿರಬಹುದು? ನನಗೇನು ಈ ಗಂಟಿಂದ ಸಿಗುತ್ತೆ? ಗಂಗಮ್ಮಜ್ಜಿ ಯಾವಾಗ ಗೊಟಕ್ ಎನ್ನುತ್ತಾಳೆ ಎಂಬಿತ್ಯಾದಿ ಕುತೂಹಲ ಅಂಶಗಳ ಸುತ್ತ ನಾಟಕ ತೆರೆದು ಕೊಳ್ಳುತ್ತದೆ. ಈ ಅಜ್ಜಿಯನ್ನು ಸಾಕಿದ ನನಗೇ ಗಂಟು ಸಿಗಬೇಕೆಂದು ಕುಟುಂಬ ಕಲಹ, ಪಾಲು ನಿರೀಕ್ಷಿಸುವ ಪಕ್ಕದ ಮನೆಯವ ಸ್ನೇಹಿತ, ಪೌರೋಹಿತ್ಯದಿಂದ ಜೀವನ ಸಾಗಿಸುವ ಉಪಾಯ ಹೆಣೆಯುವ ನಾಗೇಶ ಭಟ್ಟ, ಅವರಿವರಿಗೆ ಔಷಧಿ ನೀಡಿ ಜೀವನ ಸಾಗಿಸುವ ವೈದ್ಯ ಮಹಾಶಯ ಹಾಗೂ ದುಡಿಮೆಯಿಂದ ಜೀವನ ನಡೆಸುವ ಅಮಾಯಕ ಹಮಾಲಿಗಳೇ ಕಥಾ ಪಾತ್ರಗಳು.
ಮನೆ ಯಜಮಾನ ವೆಂಕಣ್ಣನಾಗಿ ಪ್ರೀತಮ್ ಎಂ.ಎಸ್ ತನ್ನ ಜವಾಬ್ದಾರಿ ಹಾಗೂ ಅಸಹಾಯಕತೆೆಯಿಂದ ಮಿಂಚಿದರೆ, ತಮ್ಮ ಶ್ರೀನಿವಾಸನ ಪಾತ್ರದಲ್ಲಿ ವಿಕಾಸ್ ಜಿ. ಬ್ಯಾಂಕಿನ ಅಧಿಕಾರಿಯಾಗಿದ್ದೂ ಹೆಂಡತಿಯ ಶೋಕೀ ಜೀವನಕ್ಕಾಗಿ ವಾಮಮಾರ್ಗ ಹಿಡಿದು ತಲೆ ತಗ್ಗಿಸುತ್ತಾನೆ. ವೈಯಾರದ ಹೆಂಡತಿಯ (ಪದ್ಮಾವತಿ/ಪದ್ದಿ) ಪಾತ್ರದಲ್ಲಿ ಮೋನೀಶ್ ಪಿ., ಹಾಗೂ ಬ್ಯಾಂಕ್ ಅಧಿಕಾರಿ ಪಾತ್ರದಲ್ಲಿ ವಿಕಾಸ್ ಜಿ.ಯವರ ನಿರ್ವಹಣೆ ಚೆನ್ನಾಗಿತ್ತು. ಗಂಟಿನಿಂದಲೇ ಎಲ್ಲರನ್ನೂ ಬೇಸ್ತು ಬೀಳಿಸಿದ ಗಂಗಮ್ಮಜ್ಜಿ (ರತನ್ ಅಕ್ಕಿ) ಚೆನ್ನಾಗಿ ಪಾತ್ರ ಪೋಷಣೆ ಮಾಡಿದ್ದಾರೆ. ಇನ್ನೂ ಸ್ವಲ್ಪ ಅಭಿನಯ ಚಾತುರ್ಯ ಹಾಗೂ ಮಾತಿನ ಸ್ಪಷ್ಟತೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅನ್ನಿಸಿತು. ನೆರೆಮನೆಯ ನಾರಾಯಣನ ಪಾತ್ರದಲ್ಲಿ ದರ್ಶನ ಎಸ್. ಜಗದೀಶ್ ಚುರುಕಿನ ಅಭಿನಯ ಹಾಗೂ ಸ್ಪಷ್ಟ ಮಾತುಗಳಿಂದ ಮನದಲ್ಲಿ ಪ್ರಬುದ್ಧವಾಗಿ ಉಳಿಯುತ್ತಾರೆ. ಪೋಲೀಸ್ ಅಧಿಕಾರಿಯ ಪಾತ್ರಧಾರಿಯಾಗಿ ಬಂದಾಗ ಅಭಿನಯ ಚೆನ್ನಾಗಿದ್ದರೂ ಮಾತಿನ ಬಿಗುವಿನಲ್ಲಿ ಸ್ವಲ್ಪ ಬದಲಾವಣೆ ಬೇಕಿತ್ತು. ಕಾವೇರಿ ಪಾತ್ರದಲ್ಲಿ ಅಕ್ಷಯ ಎಸ್. ಸಾಂಸಾರಿಕ ಜೀವನದ ಹೆಣ್ಣಿನ ಜಂಜಾಟಗಳನ್ನು ಉತ್ತಮವಾಗಿ ನಿರ್ವಹಿಸಿ ಅರಿವು ಮೂಡಿಸಿದ್ದಾರೆ. ಪುರೋಹಿತ ನಾಗೇಶ ಭಟ್ಟನ ಪಾತ್ರದಲ್ಲಿ ಪನ್ನಗ ಪಿ.ಎಸ್ ಉತ್ತಮವಾಗಿ ನಟಿಸಿದ್ದರೂ ಮಾತಿನ ವೇಗಕ್ಕೆ ಸ್ವಲ್ಪ ಕಡಿವಾಣ ಹಾಕಿದ್ದರೆ ಚೆನ್ನಾಗಿರುತ್ತಿತ್ತು. ಡಾಕ್ಟರ್ ಪಾತ್ರದ ಮೋಹಿತ್ ಡಿ. ಆರ್. ಸಹಜವಾಗಿ ಪಾತ್ರ ಪೋಷಣೆ ಮಾಡಿದ್ದಾರೆ. ಆದರೆ ಅಲ್ಲಲ್ಲಿ ಇನ್ನೂ ಸ್ವಲ್ಪ ಲವಲವಿಕೆಯ ಅಗತ್ಯವಿತ್ತು ಎನ್ನಿಸುತ್ತದೆ. ಹಮಾಲಿ ಪಾತ್ರದ ಲೋಕೇಶ್ ಎಂ. ಚಿಕ್ಕ ಪಾತ್ರವನ್ನು ಚೊಕ್ಕವಾಗಿ ಅಭಿನಯಿಸಿ ಹಮಾಲರ ಬವಣೆಯನ್ನು ಚೆನ್ನಾಗಿ ತೋಡಿಕೊಂಡಿದ್ದಾರೆ. ಪೂರಕ ಹಿನ್ನೆಲೆ ಗಾಯನದಲ್ಲಿ ಗೌತಮ ಶಾನುಭಾಗ, ಶರಣ, ಪ್ರತ್ಯುಶ್ ಎನ್.ಜೆ. ಗೌಡ, ತಬಲ ಮತ್ತು ಕ್ಯಾಸಿಯೋದಲ್ಲಿ ರೋಹಿತ್ ಎಸ್ ಪ್ರಭು ಹಾಗೂ ಭೀಮಣ್ಣ ಎನ್. ಎಚ್. ಹಾಗೂ ಲೋಕೇಶ್ ಎಂ. ನಾಟಕಕ್ಕೆ ಪೂರಕವಾಗಿ ಸಹಕರಿಸಿದ್ದಾರೆ.
ಸಾಗರದ ಬಸ್ತಿ ಸದಾನಂದ ಪೈ ರಚಿಸಿದ,ಹಿರಿಯ ರಂಗಕರ್ಮಿ ಸಿ.ಟಿ. ಬ್ರಹ್ಮಾಚಾರರ ಸಮರ್ಥ ನಿರ್ದೇಶನದಲ್ಲಿ, ಡಾ. ಟಿ. ಕೃಷ್ಣಮೂರ್ತಿಯವರ ನಿರ್ವಹಣೆಯಲ್ಲಿ ಉಜಿರೆಯಲ್ಲಿ ಮೂಡಿ ಬಂದ ಈ ನಾಟಕ ಅಭಿನಯಿಸಿದ ಪುಟಾಣಿಗಳಲ್ಲಿ ರಂಗಾಭಿರುಚಿಯ ಚಿಗುರನ್ನು ಮೂಡಿಸಿತು.
ಡಾ| ಟಿ. ಕೃಷ್ಣಮೂರ್ತಿ