Advertisement

ಹಾಸ್ಯಬರಹ: ಆಪ್ತ ಸಮಾಲೋಚನೆ‌ಪ್ರಶ್ನೆ : ಮೇಡಂ,

06:00 PM Oct 19, 2019 | mahesh |

ಪ್ರಶ್ನೆ : ಪ್ರತಿದಿನ ಬೆಳಗ್ಗೆ ನನ್ನ ತಲೆಗೂದಲು ಬಾಚುವಾಗ ಉದುರುತ್ತದೆ. ಏನು ಮಾಡಲಿ ಡಾಕ್ಟರ್‌? -ಪ್ರೀತಿಕಾ ಪಡುಕೋಣೆ, ಅಲಮೇಲುಪುರ
ಡಾಕ್ಟರ್‌ ನಿಮ್ಮಿ : ಅದಕ್ಕೆ ವರಿ ಮಾಡಬೇಡಿ. ಉದುರಿದ ತಲೆಗೂದಲನ್ನು ಸಂಗ್ರಹಿಸಿ ಇಟ್ಟುಕೊಳ್ಳಿ. ವಿದೇಶಕ್ಕೆ ರಫ್ತು ಮಾಡಿ. ಚೆನ್ನಾಗಿ ದುಡ್ಡು ಮಾಡಬಹುದು.

Advertisement

ಪ್ರಶ್ನೆ : ಡಾಕ್ಟರೇ, ನನ್ನ ಮುಖದ ತುಂಬ ಮೊಡವೆಗಳು ಮೂಡುತ್ತಿವೆ. ಮುಖ ಒಂಥರಾ ಕಾಣುತ್ತಿದೆ. ಇದನ್ನು ಹೇಗೆ ನಿವಾರಿಸಲಿ? -ತ್ರಿಜಟಾ ಎನ್‌. ಮೂರ್ತಿ, ದೊಡ್ಡಗುಂಡಿ
ಡಾಕ್ಟರ್‌ ನಿಮ್ಮಿ : ತ್ರಿಜಟಾ ಅವರೇ, ಇದು ತುಂಬ ಮಾಮೂಲಿ ಸಮಸ್ಯೆ. ಕನ್ನಡಿಯ ಮುಂದೆ ನಿಂತುಕೊಳ್ಳಿ. ಬಲಗೈಯಲ್ಲಿ ಒಂದು ಚಿಮಟಾ ಹಿಡಿದುಕೊಳ್ಳಿ. ಎಡಗೈಯ ಎರಡು ಬೆರಳುಗಳಲ್ಲಿ ಮೊಡವೆಯನ್ನು ಒತ್ತಿ ಹಿಡಿಯಿರಿ. ಕಣ್ಣುಮುಚ್ಚಿ. ಚಿಮಟಾದಲ್ಲಿ ಅಮುಕಿ ಒಂದೆ ಏಟಿಗೆ ತೆಗೆದುಬಿಡಿ. ಹೀಗೆ, ಪ್ರತಿಯೊಂದು ಮೊಡವೆಯನ್ನು ತೆಗೆಯುತ್ತ ಬನ್ನಿ.

ಪ್ರಶ್ನೆ : ನಮ್ಮ ಪಕ್ಕದ ಮನೆಯ ಸ್ಮಿತಾ ಎಂಬವಳು ಒಂದು ಸಮಸ್ಯೆಯನ್ನು ನಿಮ್ಮಲ್ಲಿ ಹೇಳಿ ಪರಿಹಾರ ಸೂಚಿಸಲು ವಿನಂತಿಸಿದ್ದಾಳೆ. ಅವಳಿಗೆ ದಿನಾ ಬೆಳಗ್ಗೆ -ಸಂಜೆ ಮುಖ ಊದಿಕೊಳ್ಳುತ್ತದಂತೆ. ದಯವಿಟ್ಟು ಇದಕ್ಕೆ ಪರಿಹಾರ ಸೂಚಿಸಿ. -ಗುಂಡೂ ರಾವ್‌, ಮುದ್ದೇಹಳ್ಳಿ

ಡಾಕ್ಟರ್‌ ನಿಮ್ಮಿ : ನಿಮ್ಮ ಮನೆ ಸಮಸ್ಯೆಯನ್ನು ನೀವು ನೋಡಿಕೊಳ್ಳಿ. ಪಕ್ಕದ ಮನೆಯವಳ‌ ಉಸಾಬರಿಗೆ ಹೋಗಬೇಡಿ. ಆಮೇಲೆ ನಿಮ್ಮ ಕೆನ್ನೆ ಊದಿಸಿಕೊಳ್ಳಬೇಕಾಗುತ್ತದೆ.

ಪ್ರಶ್ನೆ : ರಾತ್ರಿಯಾಗುತ್ತಲೇ ನನ್ನ ಕಣ್ಣುಗಳು ನೋಯಲಾರಂಭಿಸುತ್ತವೆ. ರಾತ್ರಿ ಮಲಗಿದರೂ ಬೇಗನೆ ನಿದ್ದೆ ಸುಳಿಯುವುದಿಲ್ಲ. ಏನು ಮಾಡಲಿ ಮೇಡಂ?-ನಿಂಗರಾಜು ಮಾವಿನಕಾಯಿ, ಹುಳ್ಳಗೆ
ಡಾಕ್ಟರ್‌ ನಿಮ್ಮಿ : ಈ ಸಮಸ್ಯೆಯನ್ನು ಎಲ್ಲೆಲ್ಲೂ ಕಾಣಬಹುದು. ಸಿಂಪಲ್‌. ನೀವು ಬಲಗೈಯಲ್ಲಿ ಒಂದು ಭಾರದ ಸುತ್ತಿಗೆ ತಗೊಂಡು ನಿಮ್ಮ ಎಡಗೈಯಲ್ಲಿರುವ ಮೊಬೈಲನ್ನು ಕಲ್ಲಿನ ಮೇಲಿಟ್ಟು ದೇಹದ ಬಲವನ್ನೆಲ್ಲ ಪ್ರಯೋಗಿಸಿ ಬಡಿದುಬಿಡಿ. ನಿಮ್ಮ ಕಣ್ಣಿನ ಸಮಸ್ಯೆ ಪರಿಹಾರ.

Advertisement

ಪ್ರಶ್ನೆ : ಡಾಕ್ಟರೇ, ಇತ್ತೀಚೆಗೆ ಮಧ್ಯಾಹ್ನ ನನಗೆ ಹಠಾತ್ತನೆ ಹೊಟ್ಟೆನೋವು ಆರಂಭವಾಯಿತು. ಇದು ಯಾಕಾಯಿತು ಎಂದೇ ನನಗೆ ತಿಳಿಯುತ್ತಿಲ್ಲ. ನಾನು ತುಂಬ ಆರೋಗ್ಯವಂತಳಾಗಿದ್ದೆ. ಇಂಥ ಸಮಸ್ಯೆ ಯಾಕೆ ಕಾಣಿಸಿಕೊಳ್ಳುತ್ತದೆ? -ಜಗದೀಶ್ವರಿ ಕೆ., ತರಲೆಪಟ್ಟಣ
ಡಾಕ್ಟರ್‌ ನಿಮ್ಮಿ : ಈ ಬಗ್ಗೆ ಅನೇಕ ಸಂಶೋಧನೆಗಳಾಗಿವೆ. ಪಿಟ್ಯುಟರಿ ಗ್ರಂಥಿಯ ಅಧಿಕ ಸ್ರಾವದಿಂದ ಇದು ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಲಂಡನ್‌ನಲ್ಲಿ ನಡೆಸಿದ ಸಂಶೋಧನೆಗಳಿಂದಲೂ ಇದು ತಿಳಿಯಲ್ಪಡಲಿಲ್ಲ. ಕೊನೆಗೆ, ಕೆಲವು ವಿಜ್ಞಾನಿಗಳು ಮಂಡ್ಯದ ಬಳಿಯ ಮನೆಯೊಂದರ ಮಹಿಳೆಗೆ ಚಿನ್ನದ ನೆಕ್ಲೇಸ್‌ ಹಾಕಿ ಹೊರಗೆ ಹೋಗಲು ಹೇಳಿದಾಗ, ಪಕ್ಕದ ಮನೆಯ ಮಹಿಳೆಯರಿಗೆ ಹೊಟ್ಟೆನೋವು ಆಗುತ್ತಿರುವುದನ್ನು ಕಂಡುಹಿಡಿದರು. ಆದಷ್ಟು ಮಧ್ಯಾಹ್ನದ ಹೊತ್ತು ಹೊರಗೆ ಹೋಗುವುದನ್ನು ಕಡಿಮೆ ಮಾಡಿ. ವಜ್ರದ ನೆಕ್ಲೇಸ್‌ ಧರಿಸಿದ ಮಹಿಳೆಯನ್ನು ದಿಟ್ಟಿಸುವುದನ್ನು ಕಡಿಮೆ ಮಾಡಿ. ಅದರ ಸೂಕ್ಷ್ಮ ಕಿರಣಗಳು ನಿಮ್ಮ ಹೊಟ್ಟೆಯಲ್ಲಿ ಒಂದು ಬಗೆಯ ಬೆಂಕಿಯಂಥ ಅನುಭವ ನೀಡಬಹುದು.

ವಸುಧಾ

Advertisement

Udayavani is now on Telegram. Click here to join our channel and stay updated with the latest news.

Next