“ರಾಜು ಕನ್ನಡ ಮೀಡಿಯಂ’ ಎಂಬ ಚಿತ್ರವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಅಕ್ಟೋಬರ್ 27 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಆದರೂ ಚಿತ್ರತಂಡ ಮಾಧ್ಯಮ ಮುಂದೆ ಬಂದು ಸಿಡಿ ಕೈಯಲ್ಲಿಟ್ಟು ಫೋಟೋಗೆ ಫೋಸ್ ಕೊಡುವ ಮೂಲಕ ಆಡಿಯೋ ಬಿಡುಗಡೆ ಶಾಸ್ತ್ರವನ್ನು ಪೂರೈಸಿತು.
“ಫಸ್ಟ್ ರ್‍ಯಾಂಕ್ ರಾಜು’ ಚಿತ್ರದ ಮೂಲಕ ಗುರುತಿಸಿಕೊಂಡ ಗುರುನಂದನ್ “ರಾಜು ಕನ್ನಡ ಮೀಡಿಯಂ’ ಚಿತ್ರದ ನಾಯಕ. “ಫಸ್ಟ್ ರ್‍ಯಾಂಕ್ ರಾಜು’ ಚಿತ್ರ ನಿರ್ದೇಶಿಸಿದ ನರೇಶ್ ಈ ಚಿತ್ರದ ನಿರ್ದೇಶಕರು. “ರಂಗಿತರಂಗ’ದ ಅವಂತಿಕಾ ಶೆಟ್ಟಿ ನಾಯಕಿ. “ಶಿವಲಿಂಗ’ ಚಿತ್ರದ ನಿರ್ಮಿಸಿದ ಕೆ.ಎ. ಸುರೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇಲ್ಲಿ ನೀವು ಒಂದಂಶವನ್ನು ಗಮನಿಸಬಹುದು. ಮೂರು ಯಶಸ್ವಿ ಸಿನಿಮಾ ತಂಡಗಳು “ರಾಜು ಕನ್ನಡ ಮೀಡಿಯಂ’ ಮೂಲಕ ಒಟ್ಟಾಗಿವೆ. ಅದೇ ಮಾತನ್ನು ನಿರ್ಮಾಪಕ ಸುರೇಶ್ ಕೂಡಾ ಹೇಳುತ್ತಾರೆ. “”ಫಸ್ಟ್ ರ್‍ಯಾಂಕ್ ರಾಜು’ ಹಿಟ್ ಆದ ನಂತರ ಅದೇ ತಂಡದೊಂದಿಗೆ ಸಿನಿಮಾ ಮಾಡಲು ನಿರ್ಧರಿಸಿದೆ. ಅದರ ಪರಿಣಾಮವಾಗಿ “ರಾಜು ಕನ್ನಡ ಮೀಡಿಯಂ ಮೂಡಿಬಂದಿದೆ. ಕಾಮಿಡಿ ಹಿನ್ನೆಲೆಯಲ್ಲಿ ಹೋಗುವ ಒಂದು ಹೊಸ ಬಗೆಯ ಕಥೆ. ಕನ್ನಡ ಮೀಡಿಯಂನಲ್ಲಿ ಓದಿರುವ ಹುಡುಗನೊಬ್ಬ ಜೀವನಕಥೆ ಇದು. ಇಡೀ ಸಿನಿಮಾ ಫನ್ನಿಯಾಗಿ ಸಾಗುತ್ತದೆ. ಚಿತ್ರದಲ್ಲಿ ಸುದೀಪ್ ಅವರು ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ’ ಎನ್ನುತ್ತಾ ಸುದೀಪ್ ಅವರಿಗೊಂದು ಥ್ಯಾಂಕ್ಸ್ ಹೇಳಿದರು ಸುರೇಶ್. ಇನ್ನು, ಚಿತ್ರಕ್ಕೆ ವಿದೇಶಗಳಿಂದಲೂ ಬೇಡಿಕೆ ಬರುತ್ತಿದ್ದು, ಬೇರೆ ಬೇರೆ ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆಯಂತೆ.
ನಿರ್ದೇಶಕ ನರೇಶ್‌ಗೆ ಈ ಚಿತ್ರ ಕೂಡಾ ತಮ್ಮ “ಫಸ್ಟ್ ರ್‍ಯಾಂಕ್ ರಾಜು’ ಚಿತ್ರದಂತೆ “ರಾಜು ಕನ್ನಡ ಮೀಡಿಯಂ’ ಕೂಡಾ ದೊಡ್ಡ ಹಿಟ್ ಆಗುವ ವಿಶ್ವಾಸವಿದೆಯಂತೆ. “ಇದು ಕೂಡಾ ಜನರಿಗೆ ಬೇಗನೇ ಕನೆಕ್ಟ್ ಆಗುವ ಕಥೆ. ಒಬ್ಬ ಕನ್ನಡ ಮೀಡಿಯಂ ಹುಡುಗನ ಜೀವನದ ಕಥೆ. ಚಿತ್ರವನ್ನು ತುಂಬಾ ಸಹಜವಾಗಿ ಸಾಗುವ ಕಥೆ ಇದು. ಹಳ್ಳಿ ಹಿನ್ನೆಲೆಯಿಂದ ಬಂದು ಕನ್ನಡ ಮೀಡಿಯಂನಲ್ಲಿ ಓದಿರುವ ಹುಡುಗ ದೊಡ್ಡ ಬಿಝಿನೆಸ್‌ಮ್ಯಾನ್ ಆಗುವ ಅಂಶದೊಂದಿಗೆ ಸಾಗುತ್ತದೆ’ ಎಂದು ಚಿತ್ರದ ವಿವರ ನೀಡಿದರು ನರೇಶ್.
ನಾಯಕ ಗುರುನಂದನ್ ಇಲ್ಲಿ ಕನ್ನಡ ಮೀಡಿಯಂ ಹುಡುಗ. ಕನ್ನಡ ಮೀಡಿಯಂ ಹುಡುಗ ಸಿಟಿಗೆ ಬಂದು ಕಷ್ಟಪಡುವ ಮತ್ತು ಇಂಗ್ಲೀಷ್‌ನಲ್ಲಿ ಪರದಾಡುವ ಅಂಶದೊಂದಿಗೆ ಅವರ ಪಾತ್ರ ಸಾಗುತ್ತದೆಯಂತೆ. ಗುರುನಂದನ್ ಓದಿರುವ ಊರು, ಶಾಲೆಯಲ್ಲಿ ಶೂಟಿಂಗ್ ಮಾಡಿದ್ದು ಗುರುನಂದನ್‌ಗೆ ಬಾಲ್ಯದ ನೆನಪುಗಳಲ್ಲೇ ಮರುಕಳಿಸಿತಂತೆ. ಚಿತ್ರದಲ್ಲಿ ಬೇರೆ ಬೇರೆ ಗೆಟಪ್‌ಗ್ಳಲ್ಲಿ ಕಾಣಿಸಿಕೊಂಡಿದ್ದರಿಂದ ಆ ತಯಾರಿಗೆ ಸ್ವಲ್ಪ ಸಮಯ ತೆಗೆದುಕೊಂಡಿತಂತೆ. ಚಿತ್ರದಲ್ಲಿ ಆಶಿಕಾ ಕೂಡಾ ನಾಯಕಿಯರಲ್ಲೊಬ್ಬರು. ನಾಯಕನ ಸ್ಕೂಲ್ ಡೇಸ್‌ಲವ್‌ನಲ್ಲಿ ಅವರು ಬಂದು ಹೋಗುತ್ತಾರೆ. ಇಂಗ್ಲೀಷ್ ಮೀಡಿಯಂದಲ್ಲಿ ಓದಿದ ಆಶಿಕಾಗೆ ಕನ್ನಡ ಶಾಲೆಯಲ್ಲಿ ಚಿತ್ರೀಕರಿಸುವಾಗ ತುಂಬಾ ಆಸಕ್ತಿ ಇತ್ತಂತೆ. ಏಕೆಂದರೆ ಅಲ್ಲಿನ ಮಕ್ಕಳು, ಪಾಠ ಮಾಡುವ ರೀತಿಯನ್ನು ಕುತೂಹಲದಿಂದ ನೋಡಿದ್ದಾಗಿ ಹೇಳಿಕೊಂಡರು.
ಚಿತ್ರಕ್ಕೆ ರವೀಂದ್ರನಾಥ್ ಸಂಗೀತ ನೀಡಿದ್ದಾರೆ. ಹತ್ತು ವರ್ಷಗಳ ಹಿಂದೆ ಕಂಫೋಸ್ ಮಾಡಿಟ್ಟುಕೊಂಡಿದ್ದ ಒಂದು ಟ್ಯೂನ್ ಅನ್ನು ಇಲ್ಲಿ ಬಳಸಿಕೊಂಡಿದ್ದಾರಂತೆ. ಸಾಕಷ್ಟು ನಿರ್ದೇಶಕರಿಗೆ ಆ ಟ್ಯೂನ್ ಕೇಳಿಸಿದ್ದರಂತೆ. ಆದರೆ, ನರೇಶ್ ಮಾತ್ರ ಈ ಟ್ಯೂನ್ ಅನ್ನು
“ನನಗೆ ಎತ್ತಿಡಿ’ ಎಂದು
ಮೂರು ವರ್ಷಗಳ ಹಿಂದೆಯೇ ಹೇಳಿದ್ದರಂತೆ. ಅದನ್ನು ಈಗ ಬಳಸಿಕೊಂಡಿದ್ದಾಗಿ ಹೇಳಿದರು. ಚಿತ್ರದ ಚಿತ್ರೀಕರಣ ಮೂಡಿಗೆರೆ, ಚಿಕ್ಕಮಗಳೂರು ಹಾಗೂ ವಿದೇಶದಲ್ಲಿ ನಡೆದಿದೆ.