ಇಂಥದ್ದೊಂದು ಪದ “ಮೀಸೆ ಮತ್ತು ಜಡೆ’ ಚಿತ್ರದ ಪೋಸ್ಟರ್ ಮೇಲೆ ರಾರಾಜಿಸುತ್ತಿತ್ತು. ಅದಕ್ಕೆ ಕಾರಣ, ಆ ಚಿತ್ರದ ನಿರ್ದೇಶಕ ಜ್ಯೋತಿರಾವ್ ಮೋಹಿತ್ ಅವರು ಮಾಡಿದ್ದ ಒಂದು ಸಣ್ಣ ಟ್ರೇಲರ್. ಜನವರಿಯಲ್ಲಿ ಬಿಡುಗಡೆಯಾದ ಆ ಟ್ರೇಲರ್‌ಗೆ ಎಲ್ಲೆಡೆ ಮೆಚ್ಚುಗೆ ಸಿಕ್ಕಿತ್ತು. ಅಷ್ಟೇ ಅಲ್ಲ, ಎಷ್ಟೋ ಮಂದಿ ಫೇಸ್‌ಬುಕ್, ಯುಟ್ಯೂಬ್‌ಗಳಲ್ಲಿ ತಮ್ಮ ಹೆಸರು ಹಾಕಿಕೊಂಡು ಆ ಟ್ರೇಲರ್ ಅಪ್‌ಲೋಡ್ ಮಾಡಿದ್ದರು. ಹಾಗಾಗಿಯೇ ಅದಕ್ಕೆ “ಬ್ಯೂಟಿಫುಲ್ ಕಾಂಟ್ರವರ್ಸಿ’ ಎಂಬ ಹೆಸರೂ ಬಿದ್ದಿತ್ತು. ಈಗ ವಿಷಯವೇನಪ್ಪ ಅಂದರೆ, ಆ ಟ್ರೇಲರ್‌ಗೆ ಸಿಕ್ಕಾಪಟ್ಟೆ ಮೆಚ್ಚುಗೆ ಬಂದಿದ್ದೇ ತಡ, ಚಿತ್ರತಂಡ ಸ್ಕ್ರಿಪ್ಟ್ ಮುಗಿಸಿ, ಚಿತ್ರ ಮಾಡೋಕೆ ಅಣಿಯಾಗಿದೆ. ಟ್ರೇಲರ್ ನೋಡಿ ಹಣ ಹಾಕೋಕೆ ಮುಂದಾಗಿದ್ದು, ದುರ್ಗಿಟೆಕ್ ಸಿನಿಮಾಸ್‌ನ ಆದಿತ್ಯ ಗಣೇಶ್. ತಮ್ಮ “ಮೀಸೆ ಮತ್ತು ಜಡೆ’ ಕುರಿತು ಹೇಳುತ್ತಾ ಹೋದರು ನಿರ್ದೇಶಕ ಜ್ಯೋತಿರಾವ್ ಮೋಹಿತ್.
Advertisement
“ಇದು ನನ್ನ ಎರಡನೇ ಚಿತ್ರ. ಹಿಂದೆ “ಸೋಡಾಬುಡ್ಡಿ’ ಮಾಡಿದ್ದೆ. ಅದು ನಿರೀಕ್ಷೆ ಸುಳ್ಳು ಮಾಡಿತು. ಸೋತ ನಿರ್ದೇಶಕ ನಾನು, ನನ್ನಂತಹವನ ಕಥೆ ನಂಬಿ ಆದಿತ್ಯ ಗಣೇಶ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿರ್ಮಾಪಕರ ಮೊದಲ ಚಿತ್ರವಿದು. ಮೊದಲ ಚಿತ್ರ ಸೋತಾಗ ಏನು ಮಾಡಬೇಕು ಎಂಬುದು ಗೊತ್ತಾಗಲಿಲ್ಲ. “ಮೀಸೆ ಮತ್ತು ಜಡೆ’ ಶೀರ್ಷಿಕೆ ಮೇಲೊಂದು ಕಥೆ ಮಾಡಿದರೆ ಹೇಗೆ ಎಂದೆನಿಸಿ, ಸಣ್ಣದ್ದೊಂದು ಟ್ರೇಲರ್ ಮಾಡಿಕೊಂಡು ಹರಿಬಿಟ್ಟೆವು. ಅದು ವೈರಲ್ ಆಗೋಯ್ತು. ಈಗ ಸಿನಿಮಾ ಆಗೋಕೆ ಸಿದ್ಧವಾಗುತ್ತಿದೆ. ಇಲ್ಲಿ ಬಹುತೇಕ ಹೊಸಬರೇ ಇರಲಿದ್ದಾರೆ. ಎಲ್ಲರಿಗೂ ರಿಹರ್ಸಲ್ ನಡೆಯುತ್ತಿದೆ. ಎಲ್ಲರೂ ಇದನ್ನು ವೆಬ್‌ಸಿರೀಸ್ ಅಂದುಕೊಂಡಿದ್ದಾರೆ. ಇದು ಕಿರುಚಿತ್ರ ಅಲ್ಲ, ವೆಬ್‌ಸಿರೀಸ್ ಅಲ್ಲ, ಇದು ಸಿನಿಮಾ. ಇದಕ್ಕಾಗಿ ಒಂದು ವರ್ಷ ಕಷ್ಟಪಟ್ಟಿದ್ದೇನೆ. ಸದ್ಯಕ್ಕೆ ಟ್ರೇಲರ್ ಅನ್ನು ನೋಡಿ ಸಿನಿಮಾ ನಮಗೆ ಕೊಡಿ ಅಂತ ಪರಭಾಷೆಯಿಂದ ಆಫರ್ ಬರುತ್ತಿದೆ. ಈಗ ಐದು ಭಾಷೆಯಲ್ಲಿ ಟ್ರೇಲರ್ ಚಿತ್ರೀಕರಿಸುತ್ತೇನೆ. ಸಿನಿಮಾ ಮಾಡಿದ ಬಳಿಕ ಮುಂದಿನದ್ದನ್ನು ಯೋಚಿಸುತ್ತೇನೆ. ಶೀರ್ಷಿಕೆ ನೋಡಿದಾಗ ಮಜ ಸಿನಿಮಾ ಎನಿಸುತ್ತದೆ. ಅದ ಸಿನಿಮಾ ನೋಡಿದವರಿಗೆ ಹಾಗೆ ಅನಿಸುತ್ತದೆ. ಈಗಿನ ಜನರೇಷನ್ ಹುಡುಗರ ಕಥೆ ಇರುತ್ತೆ. ನ್ಯಾಚ್ಯುರಲ್ ಕಾಮಿಡಿ ಇಲ್ಲಿರಲಿದೆ. ಕಥೆ ಬಗ್ಗೆ ಹೇಳುವುದಾದರೆ ವಯಸ್ಸು ಮತ್ತು ಮನಸ್ಸು ನಡುವಿನ ಪ್ರೇಮ ಯುದ್ಧವಿದು. ಬದುಕಿನಲ್ಲಿ ಎಲ್ಲವನ್ನೂ ಸುಲಭವಾಗಿ ತೆಗೆದುಕೊಳ್ಳುವ ನಾಯಕನಿಗೆ ಬದುಕನ್ನು ಗಂಭೀರವಾಗಿ ಪರಿಗಣಿಸುವ ನಾಯಕಿಯ ಪರಿಚಯವಾಗಿ ಅದು ಸ್ನೇಹಕ್ಕೆ ತಿರುಗಿದಾಗ ಏನೆಲ್ಲಾ ಆಗುತ್ತೆ ಎಂಬುದು ಕಥೆ’ ಎಂದರು ನಿರ್ದೇಶಕರು.
Related Articles
Advertisement