ಬೆಂಗಳೂರು: ಖಾಸಗಿ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಮೊದಲಾದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾಮೆಡ್-ಕೆ ಮೇ 10ರಂದು ಪರೀಕ್ಷೆ ನಡೆಸಲಿದ್ದು, 2020-21 ಶೈಕ್ಷಣಿಕ ವರ್ಷದಿಂದ ಶೇ.10 ಶುಲ್ಕ ಹೆಚ್ಚಳ ಮಾಡಲಾಗುವುದು ಎಂದು ಕಾಮೆಡ್-ಕೆ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಎಸ್.ಕುಮಾರ್ ಮಾಹಿತಿ ನೀಡಿದರು.
ಮಲ್ಲೇಶ್ವರದ ಕಾಮೆಡ್-ಕೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 24 ನಗರಗಳ 100 ಕೇಂದ್ರ ಸೇರಿದಂತೆ ದೇಶದ 158 ನಗರಗಳ 400 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ರಾಜ್ಯದಲ್ಲಿ ಸುಮಾರು 22 ಸಾವಿರ ಸೇರಿದಂತೆ ಒಟ್ಟಾರೆ ದೇಶದಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯ ಸೀಟು ದೊರೆಯಲಿವೆ ಎಂದು ಹೇಳಿದರು.
ಎರಾ ಫೌಂಡೇಷನ್ ಸಿಇಒ ಪಿ.ಮುರಳೀಧರ್, ಕಾಮೆಡ್-ಕೆ ಪರೀಕ್ಷೆಗಳು ಈ ಬಾರಿ ಯೂನಿಗೇಜ್ ಸಂಸ್ಥೆ ಸಹಯೋಗದಲ್ಲಿ ನಡೆಯಲಿವೆ. ವಿದ್ಯಾರ್ಥಿಗಳು ಏ.17ರವರೆಗೆ ಪರೀಕ್ಷೆಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ವೆಬ್‌ಸೈಟ್ www.comedk.org ಮತ್ತು www.unigauge.com ಮೂಲಕ ನೋಂದಣಿಗೆ ಅವಕಾಶ ಇದೆ ಎಂದರು.
ಶೇ.10ರಷ್ಟು ಶುಲ್ಕ ಹೆಚ್ಚಳ: ಕಳೆದ ವರ್ಷದ ಶುಲ್ಕ ನಿಗದಿ ವೇಳೆ 2020-21 ಸಾಲಿಗೂ ಶೇ.10 ಶುಲ್ಕ ಹೆಚ್ಚಳ ಮಾಡಲು ನಿರ್ಧರಿಸಲಾಗಿತ್ತು. ಖಾಸಗಿ ಎಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪಥಿ, ಕೃಷಿ ವಿಜ್ಞಾನ ಸೇರಿ ವಿವಿಧ ಕೋರ್ಸ್‌ಗಳಿಗೆ ಶೇ.10 ಶುಲ್ಕ ಹೆಚ್ಚಳ ಮಾಡಲಾಗುವುದು.
2019-20ರಲ್ಲಿ ಎಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ ಕೋರ್ಸ್‌ಗಳ ಸರ್ಕಾರಿ ಕೋಟಾ ಸೀಟುಗಳಿಗೆ 65,340 ರೂ., ಕಾಮೆಡ್-ಕೆ ಸೀಟಿಗೆ 1.43 ಲಕ್ಷ ರೂ. ಪಡೆಯಲಾಗಿತ್ತು. ಈ ಪ್ರಕಾರ ಶೇ.10 ಶುಲ್ಕ ಹೆಚ್ಚಳವಾದರೆ ಸರ್ಕಾರಿ ಕೋಟಾ ಸೀಟುಗಳಿಗೆ 71,834 ರೂ., ಕಾಮೆಡ್-ಕೆ ಸೀಟುಗಳಿಗೆ 1.58 ಲಕ್ಷ ರೂ. ಆಗಲಿದೆ ಎಂದು ಡಾ.ಕುಮಾರ್ ಮಾಹಿತಿ ನೀಡಿದರು.