ಹೊಸದಿಲ್ಲಿ: ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ(59) ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಬುಧವಾರ (ಆ. 10 )ರಂದು ದಾಖಲಿಸಲಾಗಿದೆ.
ಜಿಮ್ನಲ್ಲಿ ಅವರು ವರ್ಕ್ ಔಟ್ ಮಾಡುತ್ತಿದ್ದಾಗ ಎದೆಯಲ್ಲಿ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಯಾವುದೇ ಆತಂಕ ಬೇಡ ಎಂದು ವೈದ್ಯರು ತಿಳಿಸಿದ್ದಾರೆ.
ಹಾಸ್ಯನಟನ ಈ ದುಃಖದ ಸುದ್ದಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ರಾಜು ಶ್ರೀವಾಸ್ತವ್ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ರಾಜು ಅವರು ದೂರದರ್ಶನದಲ್ಲಿ ದಿ ಕಪಿಲ್ ಶರ್ಮಾ ಶೋ ಮತ್ತು ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಸೇರಿದಂತೆ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅವರು ಕೊನೆಯದಾಗಿ ಎರಡು ವಾರಗಳ ಹಿಂದೆ ಭಾರತದ ಲಾಫ್ಟರ್ ಚಾಂಪಿಯನ್‌ನಲ್ಲಿ ಕಾಣಿಸಿಕೊಂಡಿದ್ದರು.
“ಮೈನೆ ಪ್ಯಾರ್ ಕಿಯಾ”, “ಬಾಜಿಗರ್”, “ಬಾಂಬೆ ಟು ಗೋವಾ” ಮತ್ತು “ಆಮ್ದಾನಿ ಅಥಾನಿ ಖರ್ಚಾ ರುಪೈಯಾ” ಮುಂತಾದ ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು “ಬಿಗ್ ಬಾಸ್” ಸೀಸನ್ ಮೂರರ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.
ಶ್ರೀವಾಸ್ತವ ಅವರು ಉತ್ತರ ಪ್ರದೇಶದ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.