Advertisement

ಮೇ 12ಕ್ಕೆ Comed K ಪ್ರವೇಶ ಪರೀಕ್ಷೆ: ಅರ್ಜಿ ಸಲ್ಲಿಕೆಗೆ ಎ. 5ರ ವರೆಗೆ ಅವಕಾಶ

11:07 PM Feb 06, 2024 | Team Udayavani |

ಬೆಂಗಳೂರು: ರಾಜ್ಯದ 150ಕ್ಕೂ ಹೆಚ್ಚು ಖಾಸಗಿ ಎಂಜಿನಿಯರಿಂಗ್‌ ಕಾಲೇಜು ಮತ್ತು ದೇಶಾದ್ಯಂತ 50ಕ್ಕೂ ಹೆಚ್ಚು ಖಾಸಗಿ ಮತ್ತು ಡೀಮ್ಡ್ ವಿವಿಗಳ ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾಮೆಡ್‌-ಕೆ ಪರೀಕ್ಷೆ ಮೇ 12ರಂದು ನಡೆಯಲಿದ್ದು, ಎಪ್ರಿಲ್‌ 5ರ ವರೆಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Advertisement

ಕಾಮೆಡ್‌-ಕೆ ಮತ್ತು ಯುನಿ-ಗೇಜ್‌ ಸಹಯೋಗದೊಂದಿಗೆ ಸುಮಾರು 22 ಸಾವಿರ ಸೀಟುಗಳ ಭರ್ತಿಗೆ ಈ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳಿಗೆ ಫೆ. 15ರಿಂದ ಮಾಕ್‌ ಟೆಸ್ಟ್‌ ಕೂಡ ಇರಲಿದೆ. ಎ. 5ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಎಂದುಕಾಮೆಡ್‌-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ| ಕುಮಾರ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ. 1ರಿಂದ ಅರ್ಜಿ ಸ್ವೀಕಾರ ಆರಂಭಗೊಂಡಿದೆ. ಫೆ. 15ಕ್ಕೆ ಆನ್‌ಲೈನ್‌ನಲ್ಲಿ ಮಾಕ್‌ ಟೆಸ್ಟ್‌ ಲಭ್ಯ, ಎ. 12ರಿಂದ 16ರ ಮಧ್ಯೆ ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಅವಕಾಶ, ಮೇ 6ರಿಂದ ಮೇ 12 ದಾಖಲಾತಿ ಪತ್ರ ಡೌನ್‌ಲೋಡ್‌ಗೆ ಅವಕಾಶ ನೀಡಲಾಗಿದೆ. ಮೇ 14 ತಾತ್ಕಾಲಿಕ ಉತ್ತರ ಪತ್ರಿಕೆ ಪ್ರಕಟಣೆ ಮತ್ತು ಆಕ್ಷೇಪಣೆಗಳಿಗೆ ಆಹ್ವಾನ, ಮೇ 16 ತಾತ್ಕಾಲಿಕ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಕೆಗೆ ಕೊನೆಯ ದಿನ, ಮೇ 21ಕ್ಕೆ ಅಂತಿಮ ಉತ್ತರ ಪತ್ರಿಕೆಯ ಪ್ರಕಟನೆ ಹಾಗೂ ಮೇ 24 ಫ‌ಲಿತಾಂಶ ಪ್ರಕಟಿಸಲಾಗುವುದು ಎಂದವರು ಹೇಳಿದರು.

ಮುಖ ಮುಚ್ಚಲು ಅವಕಾಶವಿಲ್ಲ
ಕಠಿಣ ವಸ್ತ್ರ ಸಂಹಿತೆಯನ್ನು ನಾವು ಜಾರಿಗೊಳಿಸುತ್ತಿಲ್ಲ. ಆದರೆ ಮುಖ ಮುಚ್ಚಿಕೊಂಡು ಬರುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದಿಲ್ಲ ಎಂದರು. ಹಿಜಾಬ್‌ ಧರಿಸಿದರೆ ಅವಕಾಶ ಇಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಜಾಬ್‌ ಅಂತೇನೂ ಇಲ್ಲ ಆದರೆ, ಮುಖ ಸ್ಪಷ್ಟವಾಗಿ ಕಾಣಬೇಕೆಂದು ತಿಳಿಸಿದರು. ಎರಾ ಫೌಂಡೇಷನ್‌ ಸಿಇಒ ಮುರಳೀಧರ ಇತರರು ಇದ್ದರು.

ಶುಲ್ಕ ಪರಿಷ್ಕರಣೆ?
ಪ್ರತೀವರ್ಷ ಶೇ. 10 ಶುಲ್ಕ ಹೆಚ್ಚಿಸಲು ನಿಯಮಗಳಲ್ಲಿ ಅವಕಾಶವಿದೆ. ಆದರೆ ಸರಕಾರ ಕೊನೆಯ ಹೊತ್ತಿನಲ್ಲಿ ಇನ್ನೇನೋ ತೀರ್ಮಾನ ಕೈಗೊಳ್ಳುತ್ತದೆ. ಇದರಿಂದಾಗಿ ಗೊಂದಲ ಸೃಷ್ಟಿಯಾಗುತ್ತಿದೆ. ವಾಸ್ತವದಲ್ಲಿ ಶುಲ್ಕದ ಬಗ್ಗೆ ತೀರ್ಮಾನಿಸುವುದು ಕಾಮೆಡ್‌ ಕೆ ವ್ಯಾಪ್ತಿಯಲ್ಲಿಲ್ಲ ಎಂದು ಡಾ| ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗಿರುವ ಮೀಸಲಾತಿ ಹೊರತುಪಡಿಸಿ ಬೇರೆ ಮೀಸಲಾತಿಗಳನ್ನು ಕಾಮೆಡ್‌ ಕೆ ತನ್ನ ಸೀಟುಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದರು.

Advertisement

ಏಕರೂಪದ ಸಿಇಟಿ ಇಲ್ಲ
ಖಾಸಗಿ ಎಂಜಿನಿಯರಿಂಗ್‌ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಒಗ್ಗೂಡಿ ಏಕರೂಪದ ಸಿಇಟಿ ಮಾಡುವುದು ಸಾಧ್ಯವಿಲ್ಲ. ಇದಕ್ಕೆ ಎಲ್ಲ ಕಾಲೇಜುಗಳ ಒಪ್ಪಿಗೆ ಇಲ್ಲವೆಂದು ಕಾಮೆಡ್‌-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ| ಕುಮಾರ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next