Advertisement

ಭ್ರಷ್ಟಾಚಾರದ ಬಗ್ಗೆ ದಾಖಲೆ ಸಮೇತ ಬನ್ನಿ: ಸಿಎಂ ಬೊಮ್ಮಾಯಿ

09:03 PM Feb 20, 2023 | Team Udayavani |

ವಿಧಾನಸಭೆ: ರಾಜ್ಯ ಸರ್ಕಾರದ ವಿರುದ್ಧ ನಿರಂತರ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಕಾಂಗ್ರೆಸ್‌ಗೆ ಸದನದಲ್ಲಿ ತಿರುಗೇಟು ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ದಾಖಲೆಗಳಿದ್ದರೆ ಲೋಕಾಯುಕ್ತಗೆ ಕೊಡಿ’ ಎಂದು ಸವಾಲು ಹಾಕಿದರು.

Advertisement

ಅಲ್ಲದೆ, ವಿಧಾನಸಭೆ ಚುನಾವಣೆಗೆ ಜನರ ಮುಂದೆ ರಿಪೋರ್ಟ್‌ ಕಾರ್ಡ್‌ ಇಟ್ಟುಕೊಂಡು ಹೋಗುತ್ತೇವೆ. ಮತ್ತೂಮ್ಮೆ ಸಕಾರಾತ್ಮಕ ಮತದೊಂದಿಗೆ ಮರಳಿ ಬರುತ್ತೇವೆ ನೋಡುತ್ತಿರಿ ಎಂದೂ ಹೇಳಿದರು.

ಸೋಮವಾರ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡುವ ಸಂದರ್ಭದಲ್ಲಿ ಕಾಂಗ್ರೆಸ್‌ ಆರೋಪದ ಬಗ್ಗೆ ಪ್ರಸ್ತಾಪಿಸಿ ಜೋರು ಧ್ವನಿಯಲ್ಲಿ ಮಾತನಾಡಿದ ಅವರು, “ಹಾದಿ ಬೀದಿಯಲ್ಲಿ ಮಾತನಾಡುವ ಬದಲು ದಾಖಲೆ ಇದ್ದರೆ ಕೊಡಿ. ನಮ್ಮದಲ್ಲ 40 ಪರ್ಸೆಂಟ್‌ ಸರ್ಕಾರ, ನಿಮ್ಮದು. ಕಾಂಗ್ರೆಸ್‌ ಭ್ರಷ್ಟಾಚಾರದ ಗಂಗೋತ್ರಿ’ ಎಂದು ವಾಗ್ಧಾಳಿ ನಡೆಸಿದರು.

ಕಾಂಗ್ರೆಸ್‌ ಅಧ್ಯಕ್ಷರು ನಮ್ಮನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ನಾನು ಅವರಿಗೆ ಸವಾಲು ಹಾಕುತ್ತೇನೆ, ನೀವು ದೂರು ಕೊಡಿ, ನಾವೂ ದೂರು ಕೊಡುತ್ತೇವೆ. ಎಲ್ಲ ದೂರಿನ ಕುರಿತು ತನಿಖೆಗೆ ಲೋಕಾಯುಕ್ತಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್‌ ಅವಧಿಯಲ್ಲಿ ಎಸಿಬಿಯಲ್ಲಿ ದಾಖಲಾದ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್‌ ಅವಧಿಯಲ್ಲಿ ಏನೆಲ್ಲಾ ನಡೆದಿದೆ ನನಗೆ ಗೊತ್ತಿದೆ. ಎಷ್ಟರ ಮಟ್ಟಿಗೆ ನೀವು ಪ್ರಾಮಾಣಿಕರಾಗಿದ್ದಿರಿ ಎಂಬುದೂ ಗೊತ್ತಿದೆ. ಸಿದ್ದರಾಮಯ್ಯ ಅವರದು ದೇಶದಲ್ಲೇ ಅತಿ ದೊಡ್ಡ ಭ್ರಷ್ಟ ಸರ್ಕಾರವಾಗಿತ್ತು ಎಂದು ದೂರಿದರು.

Advertisement

ವರದಿಯನ್ನೊಮ್ಮೆ ನೋಡಿ:
ಭ್ರಷ್ಟಾಚಾರದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ. ಕಾಂಗ್ರೆಸ್‌ ಅವಧಿಯಲ್ಲಿ ದೊಡ್ಡ ದೊಡ್ಡ ಯೋಜನೆಗಳಲ್ಲಿ ಏನಾಯಿತು, ಆ ಬಗ್ಗೆ ಮೂರು ವರದಿಗಳು ಬಂದಿವೆ, ಅದರಲ್ಲಿ ಏನಿದೆ ಮೊದಲು ತಿಳಿದುಕೊಳ್ಳಿ ಎಂದು ಛೇಡಿಸಿದರು. ಕಮಿಷನ್‌ ಆರೋಪದ ಬಗ್ಗೆ ನ್ಯಾಯಾಲಯಕ್ಕೂ ದಾಖಲೆ ಕೊಟ್ಟಿಲ್ಲ, ಲೋಕಾಯುಕ್ತರಿಗೂ ದೂರು ನೀಡಿಲ್ಲ. ಕೇವಲ ಆರೋಪ ಮಾಡಿದರೆ ಹೇಗೆ, ನಿಮ್ಮ ಬಳಿ ಯಾವುದಾದರೂ ದಾಖಲೆ ಇದ್ದರೆ ಕೊಡಿ ಎಂದರು.

ಮೊನ್ನೆ ಕಾಂಗ್ರೆಸ್‌ನವರು ಕಿವಿ ಮೇಲೆ ಹೂವು ಇಟ್ಟುಕೊಂಡು ಬಂದಿದ್ದರು. ಅವರು ತಿರುಗಾಡಿ ಬಂದ ಮೇಲೆ ರಾಜ್ಯದ ಜನರೇ ಇವರಿಗೆ ಕಿವಿ ಮೇಲೆ ಹೂಡು ಇಡುತ್ತಾರೆ ಎಂದು ಗೊತ್ತಾಗಿದೆ ಎಂದು ಲೇವಡಿ ಮಾಡಿದರು. ನಾವು ಬದ್ಧತೆಯಿಂದ ಕೆಲಸ ಮಾಡಿದ್ದೇವೆ, ನಮಗೆ ಜನಬೆಂಬಲ ಸಿಗುವ ವಿಶ್ವಾಸವಿದೆ. ಹಿಂದೆಯೂ ನಮಗೆ ಬೆಂಬಲ ಸಿಕ್ಕಿದೆ, ಮುಂದೆಯೂ ಸಿಗಲಿದೆ ಎಂದು ಹೇಳಿದರು.

ಬನ್ನಿ, ಜನರ ಮುಂದೆ ಹೋಗೋಣ
ಚುನಾವಣೆಯಲ್ಲಿ ಜನರ ಮುಂದೆ ಹೋಗೋಣ ಬನ್ನಿ, ನಿಮ್ಮದು ನೀವು ಹೇಳಿ. ನಮ್ಮ ಸರ್ಕಾರದ ಬಗ್ಗೆ ನಾವೂ ಹೇಳುತ್ತೇವೆ. ಜನರೇ ತೀರ್ಮಾನ ಮಾಡಲಿ. ಅದು ಬಿಟ್ಟು ಬೇಕಾಬಿಟ್ಟಿ ಮಾತನಾಡುವುದು ಸರಿಯಲ್ಲ. ರಾಜ್ಯದ ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next