Advertisement

ತಿಪ್ಪಯ್ಯ ಶೆಟ್ಟಿ ಹೋಟೆಲ್‌ಗೆ ಬನ್ನಿ

09:29 PM Aug 04, 2019 | mahesh |

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕು, ಮಲೆಮಹದೇಶ್ವರ, ಸಿದ್ದಪ್ಪಾಜಿ ದೇವಾಲಯಗಳಿಂದ ಹೆಸರುವಾಸಿಯಾಗಿರುವ ಪ್ರವಾಸಿ ತಾಣ. ಅಷ್ಟೇ ಅಲ್ಲ, ಆ ಜಿಲ್ಲೆಯಲ್ಲಿ ಮುಂದುವರಿದ ತಾಲೂಕು ಕೇಂದ್ರ ಕೂಡ. ಇಲ್ಲಿ ವಿಶೇಷ ತಿಂಡಿಗಳಿಗೆ ಹೆಸರಾದ ಹೋಟೆಲ್‌ಗ‌ಳಿವೆ. ಅದರಲ್ಲಿ ತಿಪ್ಪಯ್ಯ ಶೆಟ್ಟಿ ಹೋಟೆಲ್‌ ಸಹ ಒಂದು. ಇಲ್ಲಿ ಮಸಾಲೆ ಇಡ್ಲಿ, ಮೋಟ್ರಾ ದೋಸೆ, ಚೋಟಾ ಸೆಟ್‌ ದೋಸೆಯನ್ನು ವಿಶೇಷವಾಗಿ ಮಾಡಲಾಗುತ್ತದೆ. ಹನೂರಿನಲ್ಲಿ ವಡೆ, ಬೋಂಡ ಮಾಡಿಕೊಂಡಿದ್ದ ತಿಪ್ಪಯ್ಯ ಶೆಟ್ಟಿ ಅವರು ಪತ್ನಿ ರಂಗಮ್ಮ ಜೊತೆ, 75 ವರ್ಷಗಳ ಹಿಂದೆ ಕೊಳ್ಳೇಗಾಲಕ್ಕೆ ವಲಸೆ ಬಂದು, ಚೌಡೇಶ್ವರಿ ಬೀದಿಯಲ್ಲಿ ಪುಟ್ಟ ಹೋಟೆಲ್‌ ಪ್ರಾರಂಭಿಸಿದ್ದರು. ನಂತರ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇಡ್ಲಿ, ದೋಸೆ ಮಾಡಲು ಆರಂಭಿಸಿದ್ರು. ತಿಪ್ಪಯ್ಯರ ನಂತರ ಅವರ ಪುತ್ರ ಟಿ.ಶ್ರೀನಿವಾಸಯ್ಯ, ಹೋಟೆಲ್‌ಅನ್ನು ಮತ್ತಷ್ಟು ಬೆಳೆಸಿದ್ರು. ಸದ್ಯ ರವಿಕುಮಾರ್‌ ಮತ್ತು ನಾಗಜಯಾ ಹಳೇ ಹೆಂಚಿನ ಮನೆಯನ್ನು ಕೆಡವಿ ಅದೇ ಸ್ಥಳದಲ್ಲಿ ಹೊಸ ಕಟ್ಟಡ ಕಟ್ಟಿ, ಗ್ರಾಹಕರ ಆಕರ್ಷಣೆಗೆ ತಕ್ಕಂತೆ ತಮ್ಮ ತಂದೆ ಹಾಗೂ ತಾತ ಉಳಿಸಿಕೊಂಡು ಬಂದಿದ್ದ ರುಚಿ, ತಿಂಡಿಯನ್ನು ಮುಂದುವರಿಸಿದ್ದಾರೆ. ಅಡುಗೆಯಲ್ಲಿ ಯಾವುದೇ ಕೊರತೆಯಾಗದಂತೆ ಮಗನಿಗೆ ಲಕ್ಷ್ಮೀದೇವಮ್ಮ ನೆರವು ನೀಡುತ್ತಾರೆ.

Advertisement

ಹೋಟೆಲ್‌ಗೆ ಮೊದಲು ಯಾವುದೇ ನಾಮಫ‌ಲಕವಿಲ್ಲದಿದ್ದರೂ ಇಲ್ಲಿ ತಯಾರಾಗುತ್ತಿದ್ದ ವಿಶೇಷ ತಿಂಡಿಗಳ ರುಚಿಗೆ ಮನಸೋತಿದ್ದ ಗ್ರಾಹಕರು, ತಿಪ್ಪಯ್ಯ ಶೆಟ್ರಾ ಹೋಟೆಲನ್ನೇ ಹುಡುಕಿಕೊಂಡು ಬರುತ್ತಿದ್ದರು. ಕೊಳ್ಳೇಗಾಲದ ಐಬಿಗೆ ರಾಜಕಾರಣಿಗಳು, ಅಧಿಕಾರಿಗಳು ಬಂದರೆ, ತಿಪ್ಪಯ್ಯರ ಹೋಟೆಲ್‌ನ ತಿಂಡಿ ತರಿಸಿಕೊಳ್ಳುತ್ತಾರೆ. ಮೈಸೂರು, ಬೆಂಗಳೂರಿನಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗುವ ಪ್ರವಾಸಿಗರು ಕಾಯಂ ಆಗಿ ತಿಪ್ಪಯ್ಯ ಶೆಟ್ರಾ ಹೋಟೆಲ್‌ಗೆ ಈಗಲೂ ಬರುತ್ತಾರೆ. ಮಸಾಲೆ ಇಡ್ಲಿ, ಮೋಟ್ರಾ ದೋಸೆ ಈ ಹೋಟೆಲ್‌ ವಿಶೇಷ.

ವಿಶೇಷ ತಿಂಡಿ:
ಈ ಹೋಟೆಲ್‌ನ ವಿಶೇಷ ಅಂದ್ರೆ ಮೋಟ್ರಾ ದೋಸೆ ಹಾಗೂ ಚೋಟಾ ಸೆಟ್‌ ದೋಸೆ ಇದರ ಜೊತೆಗೆ ಚಟ್ನಿ ಹಾಗೂ ಪಲ್ಯ ಕೊಡಲಾಗುತ್ತೆ. ಮೋಟ್ರಾ ದೋಸೆಯನ್ನು ಪಲ್ಯ, ಚಟ್ನಿಯನ್ನು ಮಿಕ್ಸ್‌ ಮಾಡಿ ವಿಶೇಷ ಮಾಡಲಾಗುತ್ತದೆ. ಇದಕ್ಕೆ ದರ 35 ರೂ., ಇನ್ನು ಮಕ್ಕಳಿಗಾಗಿ ಚೋಟಾ ಸೆಟ್‌ ದೋಸೆಗೆ 45 ರೂ. ದರ ಇದೆ.

ಲಭ್ಯವಿರುವ ತಿಂಡಿ:
ಇಡ್ಲಿ (ದರ 10 ರೂ.), ಮಸಾಲೆ ವಡೆ(ದರ 5 ರೂ.), ಉಪ್ಪಿಟ್ಟು, ಕೇಸರಿಬಾತು, ಟೊಮೆಟೋ ಬಾತು(ಸೋಮವಾರ, ಬುಧವಾರ, ಶುಕ್ರವಾರ), ತರಕಾರಿ ಪಲಾವ್‌ (ಮಂಗಳವಾರ, ಗುರುವಾರ), ಬಿಸಿಬೇಳೆ ಬಾತ್‌ (ಶನಿವಾರ), ಶ್ಯಾವಿಗೆ ಬಾತ್‌(ಭಾನುವಾರ) ಇವೆಲ್ಲದರ ದರ 35 ರೂ.. ಸಂಜೆ ವೇಳೆ ಖಾಲಿ, ಸೆಟ್‌, ಮಸಾಲೆ ಹೀಗೆ ನಾಲ್ಕೈದು ತರಹದ ದೋಸೆ, ಮಸಾಲೆ ಇಡ್ಲಿ, ತರಕಾರಿ ಉಪ್ಪಿಟ್ಟು ಸಿಗುತ್ತೆ. ಟೀ, ಕಾಫಿ. 10 ರೂ. ಎರಡು ಟೈಮ್‌ ಇರುತ್ತೆ.

ಸದ್ಯದಲ್ಲೇ ಊಟ ಆರಂಭ:
ಗ್ರಾಹಕರು ಮಧ್ಯಾಹ್ನದ ವೇಳೆ ತಿಂಡಿ ತಿಂದರೆ ಹೊಟ್ಟೆ ತುಂಬಿದಂತೆ ಆಗಲ್ಲ. ಹೀಗಾಗಿ, ಊಟ ಆರಂಭಿಸಲು ಹೇಳುತ್ತಿದ್ದಾರೆ. ಹೀಗಾಗಿ, ಮುಂದಿನ ಎರಡು ಮೂರು ವಾರದೊಳಗೆ ಮಧ್ಯಾಹ್ನ 12 ರಿಂದ 2.30ರವರೆಗೆ ಊಟ ವಿತರಣೆ ಮಾಡಲೂ ಸಿದ್ಧತೆ ನಡೆಸಲಾಗಿದೆ.

Advertisement

ಹೋಟೆಲ್‌ ವಿಳಾಸ:
ಚೌಡೇಶ್ವರಿ ಗುಡಿ ಬೀದಿ, ದೇವಾಂಗ ಪೇಟೆ, ಕೊಳ್ಳೇಗಾಲ ನಗರ.

ಹೋಟೆಲ್‌ ಸಮಯ:
ಬೆಳಗ್ಗೆ 7 ರಿಂದ  ಮಧ್ಯಾಹ್ನ 12, ಸಂಜೆ 4ರಿಂದ ರಾತ್ರಿ 7.30ರವರೆಗೆ, ಭಾನುವಾರ ಮಧ್ಯಾಹ್ನದ ವರೆಗೆ ಮಾತ್ರ ತೆರೆದಿರುತ್ತೆ. ಹಬ್ಬದ ದಿನಗಳಲ್ಲಿ ಮಾತ್ರ ರಜೆ.

– ಭೋಗೇಶ ಆರ್‌.ಮೇಲುಕುಂಟೆ
– ಫೋಟೋ ಕೃಪೆ ಡಿ.ನಟರಾಜ್‌

Advertisement

Udayavani is now on Telegram. Click here to join our channel and stay updated with the latest news.

Next