Advertisement

ರಾಜ್ಯದ ಹಣಕಾಸು ಪರಿಸ್ಥಿತಿ ಚರ್ಚೆ ವೇದಿಕೆಗೆ ಬನ್ನಿ

05:05 PM Jan 25, 2018 | Team Udayavani |

ಮೈಸೂರು: ಸಿದ್ದರಾಮಯ್ಯ ಸರ್ಕಾರ ದಿವಾಳಿಯಾಗಿದೆ. ವಿಪರೀತ ಸಾಲ ಮಾಡಿದೆ ಎಂದು ಅಪಪ್ರಚಾರ ಮಾಡುತ್ತಿರುವ ವಿರೋಧ ಪಕ್ಷಗಳ ನಾಯಕರು ಒಂದೇ ವೇದಿಕೆಗೆ ಬರಲಿ, ರಾಜ್ಯದ ಹಣಕಾಸು ಪರಿಸ್ಥಿತಿ ಹೇಗಿದೆ
ಎಂಬುದನ್ನು ಹೇಳುತ್ತೇನೆ, ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಥಾಹ್ವಾನ ನೀಡಿದ್ದಾರೆ.

Advertisement

ಮೈಸೂರು ತಾಲೂಕಿನ ಲಿಂಗದೇವರು ಕೊಪ್ಪಲು ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಬೆನ್ನಹಿಂದೆ ಟೀಕೆ ಮಾಡುತ್ತಾರೆ. ಎದುರಿಗೆ ಚರ್ಚೆಗೆ ಬರಲ್ಲ. ನಾನು ಯಾರ ಬಗ್ಗೆಯೂ ಹಿಂದೆ ಮಾತನಾಡಲ್ಲ. ಮಾತನಾಡುವುದಾದರೆ ನೇರವಾಗಿ ಎದುರುಗಡೆಯೇ ಮಾತನಾಡುತ್ತೇನೆ. ಸದನದ ಒಳಗೆ ಹೇಳಿದ್ದನ್ನೆ ಹೊರಗೂ ಹೇಳುತ್ತೇನೆ ಎಂದರು.

ಚರ್ಚೆ ಮಾಡೋಣ ಬನ್ನಿ: ಡಿ.13ರಿಂದ ಒಂದು ತಿಂಗಳ ಕಾಲ ರಾಜ್ಯಪ್ರವಾಸ ಮಾಡಿ 30 ಜಿಲ್ಲೆಗಳಿಗೆ ಹೋಗಿ ಬಂದಿದ್ದೇನೆ. ಪ್ರತಿ ಜಿಲ್ಲೆಯ ಕನಿಷ್ಠ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮ ಮಾಡಿದ್ದೇವೆ. ಆದರೂ ಸುಮ್ಮನೆ ಶಂಕುಸ್ಥಾಪನೆ, ಉದ್ಘಾಟನೆ ಮಾಡುತ್ತಿದ್ದಾರೆ. ಈ ಸರ್ಕಾರದಲ್ಲಿ ಹಣವಿಲ್ಲ ದಿವಾಳಿಯಾಗಿದೆ. ವಿಪರೀತ ಸಾಲ ಮಾಡಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಒಂದೇ ವೇದಿಕೆಗೆ ಬನ್ನಿ ರಾಜ್ಯದ ಹಣಕಾಸು ಪರಿಸ್ಥಿತಿ ಚರ್ಚೆ ಮಾಡೋಣ ಎಂದರು.

ಹಣಕಾಸು ಪರಿಸ್ಥಿತಿ ಸುಸ್ಥಿತಿಯಲ್ಲಿದೆ: ಕರ್ನಾಟಕದ ಹಣಕಾಸು ಪರಿಸ್ಥಿತಿ ಸುಸ್ಥಿತಿಯಲ್ಲಿದೆ. ಹಣಕಾಸು ನಿರ್ವಹಣೆ ಕೂಡ ಉತ್ತಮವಾಗಿದೆ. 2013ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ರಾಜ್ಯದ ಬಜೆಟ್‌ ಗಾತ್ರ 98 ಸಾವಿರ ಕೋಟಿ ಇತ್ತು. 2017-18ನೇ ಸಾಲಿನ ಬಜೆಟ್‌ ಗಾತ್ರ 1.86 ಲಕ್ಷ ಕೋಟಿಗೆ ತಂದು ನಿಲ್ಲಿಸಿದ್ದೇವೆ. ಫೆ.13ರಂದು ಮಂಡಿಸಲಿರುವ 2018-19ನೇ ಸಾಲಿನ ಬಜೆಟ್‌ ಗಾತ್ರ 2.10 ಲಕ್ಷ ಕೋಟಿ ಇರಲಿದೆ. ಕಳೆದ ಐದು ವರ್ಷದಲ್ಲಿ ಬಜೆಟ್‌ ಗಾತ್ರ ಒಂದು ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ. ರಾಜ್ಯದ ಆಂತರಿಕ ಉತ್ಪನ್ನ(ಜಿಡಿಪಿ) ಚೆನ್ನಾಗಿದೆ. ಸರ್ಕಾರ ದಿವಾಳಿಯಾಗಿದ್ದರೆ ಇದನ್ನು
ಮಾಡಲಾಗುತ್ತಿತ್ತಾ ಎಂದು ಪ್ರಶ್ನಿಸಿದರು.

2002ರ ಭೌತಿಕ ಜವಾಬ್ದಾರಿ ಕಾಯ್ದೆಯ ಮಾನದಂಡದ ಆಧಾರದ ಮೇಲೆ ರಾಜ್ಯಸರ್ಕಾರ ಅಗತ್ಯವಾದ ಸಾಲವನ್ನು ಪಡೆದಿದೆ. ಬಿ.ಎಸ್‌ .ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಅನಂತಕುಮಾರ್‌ ಹೆಗಡೆ, ಅಮಿತ್‌ ಶಾ ಅವರಿಗೆ ಇದು ಅರ್ಥ ಆಗಬೇಕು. ಯಡಿಯೂರಪ್ಪಇದನ್ನು ತಿಳಿದುಕೊಂಡಾದ್ರು ಬಾಯಿ ಮುಚ್ಚಿಕೊಳ್ಳುವುದು ಒಳ್ಳೆಯದು ಎಂದರು.

Advertisement

ಅಧಿಕಾರ ಇಲ್ಲದಾಗ ಸ್ವರ್ಗ ತಂದು ಕೊಡುತ್ತೇನೆ, ಇಂದ್ರ ಲೋಕವನ್ನೇ ತಂದು ಕೊಡುತ್ತೇನೆ. ರಕ್ತದಲ್ಲಿ ಬರೆದು ಕೊಡುತ್ತೇನೆ ಎನ್ನುವ ಯಡಿಯೂರಪ್ಪಗೆ 3 ವರ್ಷ ಅಧಿಕಾರದಲ್ಲಿದ್ದಾಗ ಇಂದ್ರ ಸಿಗಲಿಲ್ಲವೇ ಎಂದು ಲೇವಡಿ ಮಾಡಿದರು. ಸಂಸದೀಯ ಭಾಷೆ ಗೊತ್ತಿಲ್ಲದ ಇವರು ಮಾನ ಮರ್ಯಾದೆ ಇಲ್ಲದೆ, ಲಜ್ಜೆಗೆಟ್ಟವರು. ಇಂಥವರು ಗ್ರಾಪಂ ಸದಸ್ಯರಾಗಲೂ ನಾಲಾಯಕ್ಕು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಗಳಿರಬೇಕು. ಆದರೆ, ಪ್ರಚಾರಕ್ಕಾಗಿ ಅಪಪ್ರಚಾರ ಮಾಡುವುದು ಒಳ್ಳೆಯದಲ್ಲ. ನಾನು ಹೇಳುವುದು ಸುಳ್ಳು ಎನ್ನುವುದಾದರೆ ಯಾವುದೇ ವೇದಿಕೆಗೆ ಚರ್ಚೆಗೆ ಬರಲು ಸಿದ್ಧ ಎಂದು ಸವಾಲು ಹಾಕಿದರು.

ಐದು ವರ್ಷಕ್ಕೆ ಒಮ್ಮೆ ಹಣಕಾಸು ಆಯೋಗ ಕೇಂದ್ರ ಸರ್ಕಾರಕ್ಕೆ ರಾಜ್ಯಗಳಿಗೆ ತೆರಿಗೆ ಪಾಲು ಹಂಚಿಕೆಗೆ ಶಿಫಾರಸು ಮಾಡುತ್ತೆ, ಅದರಂತೆ ನಮ್ಮ ತೆರಿಗೆ ಹಣದ ಪಾಲನ್ನು ನಮಗೆ ಕೊಡುತ್ತಾರೆಯೇ ವಿನಾ, ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರ ಮನೆಯಿಂದ ತಂದುಕೊಡಲ್ಲ. ಇಷ್ಟಕ್ಕೂ ನರೇಂದ್ರಮೋದಿ ಪ್ರಧಾನಿ ಆದ ನಂತರ ರಾಜ್ಯಗಳ ಪಾಲು ಕಡಿಮೆ ಆಗಿದೆ. ಆದರೂ ಜನರಿಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next