Advertisement

ಜನತೆಗೆ ಬರ; ಅಧಿಕಾರಿಗಳಿಗೆ ಮಜಾ

08:00 AM Jan 19, 2019 | |

ಔರಾದ: ಬರ ಪೀಡಿತ ತಾಲೂಕಿನ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿ ಇರಬೇಕು ಎನ್ನುವ ಸರ್ಕಾರದ ನಿಯಮ ಕೇವಲ ಸಭೆ ಸಮಾರಂಭಕ್ಕೆ ಹಾಗೂ ಕಚೇರಿ ಕಡತಗಳಿಗೆ ಸೀಮಿತವಾಗಿದೆ.

Advertisement

ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತಾಲೂಕಿನ ರೈತರು ಹಾಗೂ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದಾರೆ. ಇಂತಹ ಸಮಯದಲ್ಲಿ ಅಗತ್ಯ ಸೌಕರ್ಯ ಕಲ್ಪಿಸಿಕೊಡಲು ಮುಂದಾಗಬೇಕಾದ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನ ಬಿಟ್ಟು ಜಿಲ್ಲಾ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ.

ಪಟ್ಟಣ ಸೇರಿದಂತೆ ತಾಲೂಕಿನ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯ ಒಂದೊಂದು ಹಳ್ಳಿಯಲ್ಲಿ ನೀರಿನ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಜಾನುವಾರುಗಳಿಗೆ ಮೇವು ಇಲ್ಲದೆ ರೈತರು ಕಡಿಮೆ ದರದಲ್ಲಿ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳ ಹಾಗೂ ಗ್ರಾಪಂ ಇಲಾಖೆ ವರದಿ ಪ್ರಕಾರ ತಾಲೂಕಿನ 158 ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗಿದೆ ಎಂದು ತಾಪಂ ಇಒ ಮಾಹಿತಿ ನೀಡಿದ್ದಾರೆ. ಸಮಸ್ಯೆ ಆಲಿಸಿ ಬಗೆಹರಿಸಲು ಮುಂದಾಗಬೇಕಾದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರದ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಆತಂಕ ಶುರುವಾಗಿದೆ.

ತಾಲೂಕಿನಲ್ಲಿ 39ಗ್ರಾಪಂಗಳ ಪೈಕಿ ಬಾದಲಗಾಂವ, ಸುಂದಾಳ, ಚಿಂತಾಕಿ, ಠಾಣಾಕುಶನೂರ, ನಾಗಮಾರಪಳ್ಳಿ, ಬೆಳಕುಣಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ತಲಾ ಎರಡು ಪಂಚಾಯಿತಿ ನೋಡಿಕೊಳ್ಳುತ್ತಿದ್ದಾರೆ. ಯಾವೊಬ್ಬ ಪಿಡಿಒ ಸಹ ತಮ್ಮ ಕೇಂದ್ರ ಸ್ಥಾನದಲ್ಲಿ ವಾಸವಾಗಿರುವುದಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ಶೇ. 98ರಷ್ಟು ನೌಕರರು ಬೀದರ ಜಿಲ್ಲಾ ಕೇಂದ್ರದಲ್ಲಿ ವಾಸವಾಗುತ್ತಾರೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಶು ಇಲಾಖೆ ಅಧಿಕಾರಿಗಳು ಕೂಡ ಜಿಲ್ಲಾ ಕೇಂದ್ರದಲ್ಲಿ ವಾಸ ಇರುತ್ತಾರೆ. ಹಾಗಾಗಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ ಜನರಿಗೆ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತಿಲ್ಲ.

Advertisement

ಬರ ಪೀಡಿತ ಪ್ರದೇಶಗಳಲ್ಲಿ ಪ್ರತಿಯೊಂದು ಇಲಾಖೆ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನಗಳಲ್ಲಿ ಉಳಿದು ಜನರ ಸೇವೆ ಮಾಡುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಸಮಾರಂಭಗಳಲ್ಲಿ ಸೂಚಿಸಿದ್ದಾರೆ. ಅದರಂತೆ ಕೆಲ ದಿನಗಳ ಹಿಂದೆಯೇ ಪಟ್ಟಣದ ಅಮರೇಶ್ವರ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಪ್ರತಿಯೊಂದು ಇಲಾಖೆ ಅಧಿಕಾರಿಗಳಿಗೆ ಖಡಕ್‌ ಸಂದೇಶ ನೀಡಿದ್ದರೂ ಪ್ರಯೋಜನವಾಗಿಲ್ಲ.

ಬೇಸಿಗೆ ಮುನ್ನವೇ ತಾಲೂಕಿನಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಸಿಗದೆ ಸೋಮವಾರ ಹಾಗೂ ಮಂಗಳವಾರ ಪಟ್ಟಣದಲ್ಲಿ ನಡೆದ ಜಾನುವಾರುಗಳ ಸಂತೆಯಲ್ಲಿ 3 ಸಾವಿರ ಜಾನುವಾರು ಮಾರಾಟ ಮಾಡಲಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ತಾಲೂಕಿನ ಪ್ರತಿಯೊಂದು ಇಲಾಖೆ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನಗಳಲ್ಲಿ ಉಳಿದು ಜನರಿಗೆ ಉತ್ತಮ ಆಡಳಿತ ನೀಡಲು ಮುಂದಾಗಬೇಕು ಎನ್ನುವುದೇ ತಾಲೂಕಿನ ಜನರ ಬಯಕೆಯಾಗಿದೆ. ಸರ್ಕಾರ ಬರಗಾಲ ಘೋಷಣೆ ಮಾಡಿದೆ. ಆದರೆ ಬರ ತಾಲೂಕಿನಲ್ಲಿ ನಡೆಸಬೇಕಾದ ಒಂದು ಕೆಲಸ ಇಂದಿಗೂ ಆರಂಭವಾಗಿಲ್ಲ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೆ ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next