ಮೈಸೂರು: “ಶಾಸಕ ಎಚ್.ವಿಶ್ವನಾಥ್ ವಿರುದ್ಧ ವಿಧಾನಸಭೆಯಲ್ಲಿ ನಾನು ಮಾಡಿರುವ ಆರೋಪಗಳಿಗೆ ಬದ್ಧನಿದ್ದೇನೆ. ನನ್ನ ಆರೋಪದಲ್ಲಿ ತಪ್ಪಿದ್ದರೆ, ಸೋಮವಾರ ಅವರು ವಿಧಾನಸಭೆಗೆ ಬಂದು ನಾನು ಹೇಳಿದ್ದು ಸರಿಯಲ್ಲ ಎಂದು ಸಾಬೀತು ಪಡಿಸಲಿ. ರಾಜ್ಯದ ಜನರ ಕ್ಷಮೆ ಕೋರಿ, ನಾನು ರಾಜಕೀಯ ಜೀವನದಿಂದಲೇ ನಿವೃತ್ತಿಯಾಗುತ್ತೇನೆ’ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಸವಾಲು ಹಾಕಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ವಿಶ್ವನಾಥ್ ಹೇಳಿದ್ದಾರೆ. ಅವರಿಗೆ ನಿಜವಾಗಿಯೂ ಮಾನ ಇದ್ದರೆ, ಸದನದಲ್ಲೇ ಹಕ್ಕುಚ್ಯುತಿ ಮಂಡಿಸಿ, ನೋಡೋಣ. ತಾವು ಕಳಂಕ ರಹಿತರು ಎಂದು ಮುಂಬೈನಲ್ಲಿ ಕುಳಿತು ಹೇಳಿದರೆ ಸಾಲದು. ಆತ್ಮಸಾಕ್ಷಿ ಇದ್ದರೆ ಸೋಮವಾರ ವಿಧಾನಸಭೆಗೆ ಬಂದು ಕುಮಾರಸ್ವಾಮಿ ಕೋರುವ ವಿಶ್ವಾಸಮತದಲ್ಲಿ ಭಾಗಿಯಾಗಿ. ನಾನು ಮಾಡಿರುವ ಆರೋಪ ಸತ್ಯವೆಂದು ಯಾವುದೇ ದೇವಸ್ಥಾನಕ್ಕೆ ಕರೆದರೂ ಪ್ರಮಾಣ ಮಾಡುವೆ. ಅವರು ಇಲ್ಲವೆಂದು ಹೇಳುವುದಾದರೆ ಪ್ರಮಾಣ ಮಾಡಲಿ’ ಎಂದರು.
“ಮೋದಿಯವರು ಕಾರ್ಪೋರೇಟ್ ಹಣ ತಂದು ರಾಜ್ಯದಲ್ಲಿ “ಆಪರೇಷನ್ ಕಮಲ’ಕ್ಕೆ ಮುಂದಾಗಿದ್ದಾರೆ. ನನಗೂ ಅಂಥ ಆಫರ್ ಕೊಟ್ಟಿದ್ದರು. ನನಗೆ ಮಂತ್ರಿಗಿರಿನೂ ಬೇಡ, ಹಣನೂ ಬೇಡ. ಯಾವ ಆಸೆಗೆ ಹೋಗಲಿ ಅಂದಿದ್ದವರು, ಈಗ ಯಾವ ರಾಜಕೀಯ ಆಸೆ ಇಟ್ಟುಕೊಂಡು ಮುಂಬೈಗೆ ಹೋಗಿದ್ದಾರೆ?. ವೈಯಕ್ತಿಕವಾಗಿ ಯಾರಿಂದಲೂ ಹಣ ಪಡೆದಿಲ್ಲ ಎಂದು ನಾನು ಹೇಳುತ್ತೀನಿ. ಅವರಿಗೆ ಅದು ಸಾಧ್ಯನಾ’ ಎಂದು ಪ್ರಶ್ನಿಸಿದರು. “ಅವರಿಗೆ ದುಡ್ಡಿನ ಅವಶ್ಯಕತೆ ಇರಬಹುದು, ಇಲ್ಲದೆಯೂ ಇರಬಹುದು. ಆದರೆ, ತಮಗೆ ಸಾಲವಿದೆ ಎಂದು ನನ್ನ ಬಳಿ ಹೇಳಿಕೊಂಡಿದ್ದರು. ಹೀಗಾಗಿ, ಸಾಲ ತೀರಿಸಿಕೊಳ್ಳಲು ಮುಂಬೈಗೆ ಹೋಗಿರಬಹುದು’ ಎಂದು ಟೀಕಿಸಿದರು.
ಜಿ.ಟಿ.ದೇವೇಗೌಡ ಸೇರಿ ಅನೇಕರು ಎಚ್.ವಿಶ್ವನಾಥ್ ಪಕ್ಷಕ್ಕೆ ಬೇಡವೆಂದು ಹೇಳಿದ್ದರು. ಹುಣಸೂರು ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅಥವಾ ಹರೀಶ್ ಗೌಡರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಆದರೆ, ನಾನು ವಿಶ್ವನಾಥ್ ಪರ ವಹಿಸಿದ್ದೆ. ನಾನು ಅಂದೇ ಬೇಡ ಅಂದಿದ್ದರೆ, ಕುಮಾರಸ್ವಾಮಿಗೆ ಇಂದು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಡೆವಲಪ್ಪರ್. ನಾನು ಚುನಾವಣೆಯಲ್ಲಿ ಒಮ್ಮೆ ಸೋತು, ಸತತ ಮೂರು ಬಾರಿ ಗೆದ್ದಿದ್ದೇನೆ. ನನಗೆ ವ್ಯವಹಾರ ಇದೆ. ಅವರಿಗೆ ಏನಿದೆ ವ್ಯವಹಾರ?. 9 ಚುನಾವಣೆಗೆ ಹಣ ಎಲ್ಲಿಂದ ಬಂತು ಎಂದು ಹೇಳಲಿ ನೋಡೋಣ?. ರಾಜಕೀಯವಾಗಿ ಪುನರ್ಜನ್ಮ ಕೊಟ್ಟ ಜೆಡಿಎಸ್‌ನ್ನು ಎಂದಿಗೂ ಮರೆಯಲಾರೆ ಎಂದಿದ್ದ ವಿಶ್ವನಾಥ್ ಅವರ ಮತ್ತಷ್ಟು ವಿಚಾರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವೆ.
-ಸಾ.ರಾ.ಮಹೇಶ್, ಪ್ರವಾಸೋದ್ಯಮ ಸಚಿವ