ಮೈಸೂರು: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಫೆ.8ರಂದು ನಗರದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸುರೇಶ್ ಕೆ. ಒಂಟಿಗೋಡಿ ತಿಳಿಸಿದರು.
ಪ್ರಕರಣಗಳ ತ್ವರಿತ ಇತ್ಯರ್ಥ, ಅರ್ಜಿದಾರರು ಮತ್ತು ಆರೋಪಿಗಳ ನಡುವೆ ಸಾಮರಸ್ಯ ಹಾಗೂ ಸಮನ್ವಯತೆ ಮೂಡಿಸುವ ಉದ್ದೇಶದಿಂದ ಲೋಕ ಅದಾಲತ್ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷ 5 ಲೋಕ ಅದಾಲತ್ ಆಯೋಜಿಸಲಾಗುತ್ತಿದ್ದು, ಫೆ.8, ಏ.11, ಜು.14, ಸೆ.17 ಹಾಗೂ ಡಿ.12 ರಂದು ನಡೆಸಲಾಗುತ್ತದೆ. ಕಳೆದ ವರ್ಷ ನಾಲ್ಕು ಲೋಕ ಅದಾಲತ್ ನಡೆಸಲಾಗಿತ್ತು ಎಂದು ನ್ಯಾಯಾಲಯ ಆವರಣದಲ್ಲಿನ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಾಕಿ ಪ್ರಕರಣಗಳು: 2019ರ ಕೊನೆಯ ಲೋಕ ಅದಾಲತ್‌ನಲ್ಲಿ 12 ಸಾವಿರ ಪ್ರಕರಣಗಳು ಬಂದಿದ್ದು, ಅವುಗಳಲ್ಲಿ 4,709 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು. ಈ ಪೈಕಿ 307 ವ್ಯಾಜ್ಯ ಪೂರ್ವ ಪ್ರಕರಣಗಳಿದ್ದವು. ಸದ್ಯಕ್ಕೆ ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 1 ಲಕ್ಷದ 700 ಪ್ರಕರಣಗಳು ಇದ್ದು, ಅವುಗಳಲ್ಲಿ 60 ಸಾವಿರದಷ್ಟು ಕೇಸುಗಳು ಮೈಸೂರು ನಗರದ್ದೇ ಆಗಿವೆ. ಜೊತೆಗೆ ಮೈಸೂರು ಜಿಲ್ಲೆಯಲ್ಲಿ ಚೆಕ್‌ಬೌನ್ಸ್ ಪ್ರಕರಣವೇ ಹೆಚ್ಚಿನದ್ದಾಗಿದ್ದು ಒಟ್ಟು 20 ಸಾವಿರ ಚೆಕ್‌ಬೌನ್ಸ್ ಪ್ರಕರಣಗಳಿವೆ.
ಇದರಲ್ಲಿ 15 ಸಾವಿರ ಪ್ರಕರಣಗಳು ಮೈಸೂರು ನಗರದ್ದಾಗಿದೆ ಎಂದು ವಿವರಿಸಿದರು. ಪ್ರಸ್ತುತ ಲೋಕ ಅದಾಲತ್‌ನಲ್ಲಿ ರಾಜಿಯಾಗಬಲ್ಲ ಕ್ರಿಮಿನಲ್, ಸಿವಿಲ್, ಮೋಟಾರು ವಾಹನ ಅಪಘಾತ, ಕೌಟುಂಬಿಕ, ದೌರ್ಜನ್ಯ ತಡೆ ಕಾಯ್ದೆ, ಜೀವನಾಂಶ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುತ್ತದೆ. ಲೋಕ ಅದಾಲತ್ ಮೂಲಕ ಸಾರ್ವಜನಿಕರ ಯಾವುದೇ ಪ್ರಕರಣವನ್ನು ಜನತಾ ನ್ಯಾಯಾಲಯದಲ್ಲಿ ವಕೀಲಯ ಮೂಲಕ ನೇರವಾಗಿ ಭಾಗವಹಿಸಿ ಮೂಲಕ ಶೀಘ್ರದಲ್ಲೇ ಇತ್ಯರ್ಥಪಡಿಸಬಹುದು.
ಇಲ್ಲಿ ಉಭಯ ಪಕ್ಷಕಾರರು ರಾಜಿ ಮಾಡಿಕೊಳ್ಳಲೂ ಮಾರ್ಗದರ್ಶನ ನೀಡಲಾಗುವುದು. ಇಬ್ಬರಿಗೂ ಒಪ್ಪಿಗೆಯಾಗುವಂತೆ ಹಾಗೂ ಪ್ರಕರಣ ಇತ್ಯರ್ಥವಾದ ನಂತರವೂ ಬಾಂಧವ್ಯ ಉಳಿಯುವಂತೆ ಪ್ರಕರಣ ತೀರ್ಮಾನವಾಗುತ್ತದೆ. ಇದೇ ಸಂದರ್ಭದಲ್ಲಿ ದಾಖಲಾಗದೇ ಇರುವ ಪ್ರಕರಣಗಳನ್ನೂ ರಾಜಿ-ಸಂಧಾನದ ಮೂಲಕ ಬಗೆಹರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶುಲ್ಕ: ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಪ್ರಕರಣಗಳಿಗೆ ನೀಡಲಾದ ನ್ಯಾಯಾಲಯ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು. ಆದರೆ, ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ. ಸಂಧಾನಕಾರರು ಸೂಚಿಸುವ ಪರಿಹಾರ ನಿಮಗೆ ಒಪ್ಪಿಗೆಯಾದಲ್ಲಿ ಮಾತ್ರವೇ ರಾಜಿ ಮಾಡಿಕೊಂಡು, ಕಡಿಮೆ ಖರ್ಚಿನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ವಿವರಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ, ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದಕುಮಾರ್, ಕಾರ್ಯದರ್ಶಿ ಶಿವಣ್ಣ ಉಪಸ್ಥಿತರಿದ್ದರು.