Advertisement

ದಸರೆಗೆ ಬನ್ನಿ, ಆಯ್ತಾ..?

06:00 AM Oct 10, 2018 | |

ಸದಾ ತಣ್ಣಗಿರುವ ಮೈಸೂರಿನಲ್ಲಿ ಮನೆ ಮಾಡುವುದು ಎಲ್ಲರ ಕನಸು. ಮನೆ ಎಷ್ಟೇ ದೊಡ್ಡ ಕಟ್ಟಿದರೂ, ಅದು ಚಿಕ್ಕದಾಗುವುದು ದಸರಾ ಹೊತ್ತಿನಲ್ಲಿ. ಅಲ್ಲಿನ ಗೃಹಿಣಿಯರಿಗೆ ದಸರಾ ಒಂದು ಸತ್ವಪರೀಕ್ಷೆ. ಅತಿಥಿಗಳ ಸತ್ಕಾರಕ್ಕೆ ಹತ್ತಾರು ಕೈಗಳು ಬೇಕು, ಆ ದೇವಿಗೆ ಇದ್ದಂತೆ!  

Advertisement

ಮೈಸೂರೆಂಬ ಈ ಸುಂದರ ಊರಿನಲ್ಲಿ ಇರುವ ಎಲ್ಲರಿಗೂ ನವರಾತ್ರಿ ಬರುತ್ತಿದ್ದಂತೆ ಎಲ್ಲಾ ನೆಂಟರ ನೆನಪಾಗುತ್ತದೆ. ನಾವು ಜನಗಳನ್ನು ಮನೆಗೆ ಆಹ್ವಾನಿಸುವುದೇ ಹಾಗೆ. “ಅಕ್ಟೋಬರಿಗೆ ಬನ್ನಿ. ದಸರಾ ನೋಡ್ಕೊಂಡ್‌ ಹೋಗ್ಬಹುದು!’. ಆದರೆ, ನಾವೇ ಸ್ವತಃ ದಸರಾ ನೋಡಲೂ ಊರಿನ ಒಳಗೆ ಕಾಲಿಡುವುದಿಲ್ಲ. ಜನಜಂಗುಳಿ ಲಕ್ಷೊಪಲಕ್ಷ ಜನಗಳು ತುಂಬಿ ತುಳುಕುತ್ತಿರುವ ಮೈಸೂರು ಇಲ್ಲಿನ ನಿವಾಸಿಗಳಾದ ನಮಗೆ ಗುರುತು ಸಿಗುವುದೂ ಇಲ್ಲ. ಅಯ್ಯೋ ಇದು ನಮ್ಮೂರಲ್ಲ ಅನ್ನಿಸಿಬಿಡುತ್ತೆ!

  ದಸರಾ ಸಮಯದ ಗೆಸ್ಟುಗಳಿಗೂ ಉಳಿದ ಸಮಯದಲ್ಲಿ ಬರುವವರಿಗೂ ಇರುವ ವ್ಯತ್ಯಾಸವೆಂದರೆ, ಬೇರೆ ಟೈಮಿನಲ್ಲಿ ಬಂದವರು ತಮ್ಮ ಲಿಸ್ಟ್‌ ತಾವೇ ಮಾಡಿಕೊಂಡಿರುತ್ತಾರೆ. ನಮ್ಮ ಅವಶ್ಯ ಬೀಳುವುದೇ ಇಲ್ಲ. ಆದರೆ, ದಸರೆಯಲ್ಲಿ ಮಾತ್ರ ನೆಂಟರಿಷ್ಟರು ಹಲವು ವಿಧದಲ್ಲಿ ನಮ್ಮಂಥ ಗೃಹಿಣಿಯರನ್ನು ಪರೀಕ್ಷಿಸುತ್ತಾರೆ. ಆ ದೇವಿಯಂತೆ ನಮಗೂ ಆಗ ಹತ್ತಾರು ಕೈಗಳು ಬೇಕೆನ್ನುವ ಪ್ರಾರ್ಥನೆಯ ಕೂಗು ಚಾಮುಂಡಿ ಬೆಟ್ಟವನ್ನು ಮುಟ್ಟುತ್ತೆ.

  ಆ ಹೊತ್ತಿನಲ್ಲಿ ಮನೆಯ ಧಾವಂತವನ್ನು ಕೇಳುವಿರೇನು? 
  ಸ್ನೇಹಿತೆಯ ಒತ್ತಾಸೆ… “ಟ್ಯಾಕ್ಸಿ ಫಿಕ್ಸ್‌ ಮಾಡಿಕೊಡೇ…’, “ಸಿಗಲಿಲ್ವಾ? ಆಟೋನಾದ್ರೂ ಪರ್ವಾಗಿಲ್ಲ…’, “ಝೂ ಟಿಕೆಟ್‌ ಸಿಗುತ್ತಾ? ಸ್ವಲ್ಪ ಚೆಕ್‌ ಮಾಡು…’, “ಅರಮನೆ ಟೈಮಿಂಗ್ಸ್‌? ಲೈಟಿಂಗು ಎಷ್ಟೊತ್ತಿಗೆ..?’, “ಹೋಟೆಲ್‌ಗೆ ಬಂದಿದೀವಿ, ಅಮ್ಮನಿಗೆ ಹುಷಾರಿಲ್ಲ. ಊಟ ಹೋಟೆಲ್ಲಿನದ್ದು ಬೇಡ ಅಂದ್ರು… ಮನೆಗೆ ಬರೀ¤ವಿ’- ಹೀಗೆಲ್ಲಾ ಹತ್ತು ಹಲವಾರು ಮಾಹಿತಿ ಕೊಟ್ಟು, ಸಾಧ್ಯವಿದ್ದ ವ್ಯವಸ್ಥೆಗಳನ್ನು ಮಾಡಿ, ಉಸ್ಸಪ್ಪಾ ಅಂತ ಕೂತರೆ ಮತ್ತೂಬ್ಬರು ಫೋನು. “ಹೇ ಬಾಂಬೆಯಿಂದ ಒಬ್ಬರು ಬೇಕಾದವರು ಬರಿ¤ದ್ದಾರೆ. ಯಾವುದಾರೂ ಗೆಸ್ಟ್‌ ಹೌಸ್‌ ನೋಡಕ್ಕಾಗುತ್ತಾ? ವಯಸ್ಸಾಗಿದೆ. ಆ ಗೆಸ್ಟ್‌ಹೌಸ್‌ನಲ್ಲಿ ಆಯುರ್ವೇದ ಸ್ಪಾ ಇದ್ರೆ ಸ್ವಲ್ಪ ರಿಲ್ಯಾಕ್ಸ್‌ ಆಗ್ತಿದ್ರೇನೋ…’!

  ಸ್ನೇಹಿತೆಯ ಅಮ್ಮನಿಗೆ ಊಟ ತಲುಪಿಸಿ, ಮತ್ತೆ ರಾತ್ರಿಗೆ ಏನು ಬೇಕು ಅಂತ ಕೇಳಿಕೊಂಡು ಸ್ಪಾ ಮಾಹಿತಿಯನ್ನು ಬಾಂಬೆಯ ಗೆಸ್ಟ್‌ಗೆ ಕೊಟ್ಟು ಮನೆಗೆ ಬರುವಷ್ಟೊತ್ತಿಗೆ ಮಧ್ಯಾಹ್ನ ಮತ್ತೆ ಅಪ್ಪ ಬಾಯೆ¤ರೆದರು… “ಅಂಕಲ್‌ ಬರ್ತಿದ್ದಾರಂತಮ ಅವರಿಗೆ ಸ್ವಲ್ಪ ಹೋಟೆಲ್‌ ವ್ಯವಸ್ಥೆ ಆಗುತ್ತಾ?’.

Advertisement

   “ಅಪ್ಪಾ, ಪ್ಲೀಸ್‌… ಈ ಟೈಮಿನಲ್ಲಿ ಯಾರು ಬಂದರೂ ಅಕಾಮಡೇಟ್‌ ಆಗೋದು ಕಷ್ಟವಪ್ಪಾ… ಎಲ್ಲಾ ಹೋಟೆಲುಗಳೂ ಭರ್ತಿ ಆಗಿವೆ. ನೀವು ಸ್ವಲ್ಪ ಮುಂಚೆ ಹೇಳಾºರದಿತ್ತಾ?’.

   “ಸರಿ ನಿಮ್ಮನೇಲೇ ಉಳಿಯಕ್ಕೆ ಹೇಳ್ಳಾ?’
   ತಕ್ಷಣ ರೂಮುಗಳ ಅಸ್ತವ್ಯಸ್ತ ಚಿತ್ರಣ ಕಣ್ಣ ಮುಂದೆ ಬಂದು, ಮತ್ತಷ್ಟು ಕೋಪ ನೆತ್ತಿಗೇರಿ, ಹೊಟ್ಟೆ ಹಸಿವು ಇನ್ನೂ ಚುರುಗುಟ್ಟಿ ಕಣ್ಣು ಕತ್ತಲೆ ಬಂದು, ಚಾಮುಂಡೇಶ್ವರಿಯ ಅಪರಾವತಾರವಾಗಿ ಯಾರು ಕಂಡರೂ ಬಲಿ ತೆಗೆದುಕೊಳ್ಳಬೇಕು ಅನ್ನಿಸಿದಾಗಲೇ ಜನ್ಮದಾತನ ಮೇಲೆ ಕೂಗಾಟ ಶುರುವಾಗುತ್ತೆ. 

  “ಅಪ್ಪಾ… ಸ್ನೇಹಿತರು ಬರ್ತೀವಿ ಅಂತ ಹೇಳಿದ್ದಾರೆ. ಹೆಚ್ಚು ಜನರನ್ನು ಹೇಗೆ ತೂಗಿಸಲಿ?’
   ಸ್ನೇಹಿತರು ಆಗಲೇ ಬುಕ್‌ ಮಾಡ್ಕೊಂಡಿದಾರೆ. ಅವರ ಪಟ್ಟಿ ಹೀಗಿತ್ತು… “ಹೆಚ್ಚೇನೂ ಬೇಡ… ಬರೀ ಸ್ನಾನ ಮಾಡಿ, ಡ್ರೆಸ್‌ ಚೇಂಜ್‌ ಮಾಡಿ ಅಲ್ಲಿಂದ ಹೊರಡ್ತೀನಿ. ಊಟಕ್ಕೂ ಜಾಸ್ತಿಯೇನೂ ಬೇಡ… ಬರೀ ಅನ್ನ ಸಾರು, ಹಾnಂ ಪಾಪುಗೆ ಸ್ವಲ್ಪ ಹಾಲು, ರಾತ್ರಿಗೆ ಚಪಾತಿ ಇದ್ರೆ ಸಾಕು. ನಾವೇ ಬಂದು ಮಾಡಿಕೊಳ್ತೀವಿ’ ಅಂತೆಲ್ಲಾ ನಾಲ್ಕು ಜನರ ಬ್ಯಾಚು ಹೇಳಿದೆ. ಇದೊಂಥರಾ ಇಬ್ಬಂದಿ. ನಿಜವಾಗಿಯೂ ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಕೇಸೇ! 

  ಅವರಿಗೆ ಎಲ್ಲಾ ಮಾಡಿಟ್ಟುಕೊಂಡು ಕಾದರೆ, “ಅಲ್ಲೇ ಎಕ್ಸಿಬಿಷನ್‌ ಗ್ರೌಂಡ್ಸ್ ಹತ್ರ ಸಾಕಷ್ಟು ಗಾಡಿ ಇದು, ಸ್ವಲ್ಪ ಸ್ನಾಕ್ಸ್ ತಿಂದು ಬಂದ್ವಿ… ಹೊಟ್ಟೆ ಭಾರ ಆಗಿದೆ, ಏನೂ ಬೇಡ’ ಅಂತ ಹೇಳಿದ ಸ್ನೇಹಿತನನ್ನು ಚಪಾತಿಯ ಲಟ್ಟಣಿಗೆಯಲ್ಲೇ ಬಡಿಯಬೇಕಿತ್ತಲ್ಲ ಅನ್ನಿಸುವಾಗ ಅಪ್ಪನ ಮಾತು ಮತ್ತೆ…

  “ಅಯ್ನಾ, ನಮ್‌ ಕಾಲದಾಗೆ ಮನೆ ತುಂಬಾ ಜನ ಇರ್ತಿದ್ವಮ್ಮ. ಯಾರೂ ಕಿರಿಕಿರಿ ಮಾಡಿಕೊಳ್ತಿರಲಿಲ್ಲ. ಅಡುಗೆ ಮಾಡೋಕೂ ಅಳ್ತೀಯಲ್ಲ?’.
  “ಅಡುಗೆ ಮಾಡೋಕಲ್ಲ… ಅವರು ನಾಲ್ಕು ಜನ, ನಿಮ್ಮ ಸ್ನೇಹಿತರಲ್ಲಿ ಇಬ್ಬರಿಗೆ ವಯಸ್ಸಾಗಿದೆ. ಕನಿಷ್ಠ ಹಾಸಿಗೆ- ಮಂಚ, ಹೊದ್ಕೊಳಕ್ಕೆ ಇಷ್ಟೆಲ್ಲಾ ಬೇಡ್ವಾ? ಯಾರ ಮನೇಲೂ ಮದುವೆ ಛತ್ರದ ಥರ ಎಕ್ಸ್‌ಟ್ರಾ ಹಾಸಿಗೆ ಈಗ ಪೇರಿಸಿ ಇಡಲ್ಲ ಅಪ್ಪಾ’.

  “ಹೋಗ್ಲಿ ಬಿಡು ನೆಕ್ಸ್ಟ್ ಟೈಮು ಅಂತ ಹೇಳ್ತೀನಿ. ಮತ್ತೆ ಮುಂದಿನ ಸಾರಿನೂ ಇದೇ ಹೇಳ್ಬೇಡ. ವಯಸ್ಸಿರೋರು ಯಾವಾಗ ಬೇಕಾದರೂ ನೋಡಬಹುದು, ನಮ್ಮ ವಯಸ್ಸಿನೋರು ನೋಡಕ್ಕಾಗುತ್ತೇನಮ್ಮಾ…’

  ಮಾಡಿಯೂ ಮಾಡಲಿಲ್ಲ ಅನ್ನಿಸಿಕೊಳ್ಳುವ ಒಂದೇ ಸಮಯ ಅಂದರೆ ಇದು. ಪ್ರವಾಸೋದ್ಯಮದ ಪ್ರಮುಖ ಅಕರ್ಷಣೆ ಎನ್ನಿಸಿಕೊಳ್ಳುವ ಊರಿನಲ್ಲಿ ಬದುಕಿದರೆ ಒಂಥರಾ ಟೂರಿಸ್ಟ್‌ ಗೈಡುಗಳಾಗಿ, ಹೋಟೆಲ್‌ ಬಾಣಸಿಗರಾಗಿ, ಗೆಸ್ಟ್‌ ಹೌಸಿನ ಹೌಸ್‌ ಕೀಪರುಗಳಾಗಿ ಆಗಾಗ ವ್ಯಕ್ತಿತ್ವ ಆವಾಹಿಸಿಕೊಳ್ಳಬೇಕಾಗುತ್ತೆ. ಸಿಟ್ಟು ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಒಂದು ಪಕ್ಷ ಕೂಗಾಡಬೇಕೆಂದರೆ ಮನೆಯವರ ಮೇಲೆ ತೀರಿಸಿಕೊಳ್ಳಬಹುದೇ ವಿನಃ ಬಂದವರ ಮೇಲೆ ಸಾಧ್ಯವೂ ಇಲ್ಲ. 

  ಮತ್ತೆ ಯಾರದೋ ಫೋನು ಬಂತು. “ರೋಡು ಗೊತ್ತಾಗ್ತಾ ಇಲ್ಲ. ಚಿಕ್ಕ ಊರಲ್ವಾ ಪ್ಲೀಸ್‌ ಬಂದು ಪಿಕಪ್‌ ಮಾಡು…’, “ಹಾnಂ, ಉಪ್ಪಿಟ್ಟೊಂದು ಬಿಟ್ಟು ಬೇರೆ ಏನಾದ್ರೂ ತಿಂಡಿ ಮಾಡು. ನಮ್ಮ ಪಾಪು ಅದನ್ನ ಮುಟ್ಟೋದೇ ಇಲ್ಲ… ಇಡ್ಲಿ ಚಟ್ನಿ ಸಾಕು… ಸಾಂಬರ್‌ ಆದ್ರೆ ಮಾಡು… ಇಲ್ಲಂದ್ರೂ ಓಕೆ’ ಇದನ್ನು ಕೇಳಿಸಿಕೊಳ್ಳುತ್ತಲೇ ಕೆಲಸದ ಸಹಾಯಕಿ, “ಅಕ್ಕಾ… ನಾಳೆ ನಮ್ಮನೇಗೆ ನೆಂಟ್ರಾ ಬತ್ತರ… ಕ್ಯಲ್ಸಕ್‌ ಬರೀಕಿಲ ನಾನು…’ ಅಂದೇಬಿಟ್ಟಳು. ಈ ಶಕ್ತಿದೇವತೆಯ ಧಮಕಿಗೆ ಬಗ್ಗದವರುಂಟೇ? 

  “ಹಂಗೆಲ್ಲಾ ಮಾಡ್ಬೇಡ ಕಣೇ… ಪ್ಲೀಸ್‌ ಬಾ… ಜಾಸ್ತಿ ಕೊಡ್ತೀನಿ’
  “ಅಲುವಾ ಮತ… ಜನ ಜಾಸ್ತಿ ಅವುರೆ… ಕ್ಯಲ್ಸ ಎಕ್ಸ್‌ಟ್ರಾ ಆಯ್ತದೆ…’ 
  “ಆಯ್ತು ಬಾ ತಾಯೀ…’
  ಅವಳಿಗೆ ನಾನು ಗೋಗರೆದು ಕಾಲು ಹಿಡಿದು ಒಪ್ಪಿಸುವಾಗ ಸ್ನೇಹಿತೆ ಬರುತ್ತಾಳೆ… ಅವಳಿಗೆ ಇದ್ಯಾವುದೂ ಸಂಬಂಧ ಇಲ್ಲ!
  “ಇಲ್ಲಿ ಮೈಸೂರ್‌ ಪಾಕ್‌ ಸಿಗೋ ಜಾಗ ಇದೆಯಂತಲ್ಲಾ? ಅಲ್ಲಿಗೆ ಹೋಗೋಣ ನಡಿ. ಮನೇಲಿ ಕೂತು ಏನು ಮಾಡ್ತೀ?’
  ಒಮ್ಮೊಮ್ಮೆ ರೇಗುತ್ತದೆ. ನವರಾತ್ರಿಗೆ ಮಳೆ ಕಾದು- ಕಾದು ಬರುತ್ತದೆ. ಹಾಗಾಗಿ, ದಿನವಿಡೀ ಬಿಸಿಲೇರಿದಂತೆಲ್ಲಾ ಆರೋಗ್ಯ ಹದಗಟ್ಟು, ಗೆಸ್ಟುಗಳು ಆರಾಮಾಗಿ ಮನೆಯಲ್ಲಿ ಸೆಟ್ಲ ಆಗುತ್ತಿದ್ದಾರೆ ಎನ್ನಿಸಿದಾಗ ಎಲ್ಲಿಲ್ಲದ ಕೋಪ ಕುದಿಯುತ್ತದೆ.

  ಹಾಗಂತ ಬಂದವರನ್ನು ದ್ವೇಷಿಸುತ್ತೇವೆ ಅಂತಲ್ಲ. ಸತ್ಕಾರ ಮಾಡಬೇಕು ಎನ್ನುವ ಹಂಬಲ ಖಂಡಿತಾ ಇದೆ. ಆದರೆ, ಈ ಸಮಯದಲ್ಲೇ ಮನೆಗೆ ಒಂದೇ ಒಂದು ಸಂಸಾರ ಬಂದರೂ ಅವರೆಲ್ಲರಿಗೂ ಅನುಕೂಲವಾಗುವಂತೆ ವ್ಯವಸ್ಥೆ ಮಾಡುವುದೆಂದರೆ ಚಿಕ್ಕ ಹೋಟೆಲ್ಲು, ಟ್ರಾವೆಲ್‌ ಏಜೆನ್ಸಿ, ಟೂರ್‌ ಅಸಿಸ್ಟೆಂಟು, ಕುಕ್‌, ಹೌಸ್‌ ಕೀಪರ್‌, ಬಟ್ಟೆ ಮಡೊರು, ಬಟ್ಟೆ ಎತ್ತಿಡೋರು, ಎಲ್ಲಾ ನಾವೇ!

  ಬಂದವರು ತಮ್ಮ ಓಡಾಡುವ ವ್ಯವಸ್ಥೆ ತಾವೇ ಮಾಡಿಕೊಂಡರೆ, ಊಟ ತಿಂಡಿಯ ವಿಷಯಗಳನ್ನು ಸರಿಯಾಗಿ ಹೇಳಿದರೆ, ನಮ್ಮ ಜೊತೆ ಕೂತು ನಾಲ್ಕು ಮಾತಾಡಿದರೆ ಎಲ್ಲವೂ ಚೆನ್ನ. ಆದರೆ, ಹಾಗೆ ಆಗುವುದೇ ಇಲ್ಲ.
  ನನ್ನ ಪ್ರಕಾರ ಗೆಸ್ಟುಗಳು ಎರಡು ದಿನ ಕಳೆದ ನಂತರ ಮೂರನೇ ದಿನಕ್ಕೇ ಮನೆಯವರೇ ಆಗಿಬಿಡುತ್ತಾರೆ. ಸಿಕ್ಕ ಸಿಕ್ಕ ವಿಷಯಗಳ ಬಗ್ಗೆ ತಮ್ಮ ಅನವಶ್ಯ ಅಭಿಪ್ರಾಯ ನೀಡುವುದು, ಊಟಕ್ಕೆ ಬರುತ್ತೀವಿ ಅಂದು ಬರದೇ ಹೋಗುವುದು ಎಲ್ಲಾ ಮಾಡಿದಾಗ ತಂಗಳನ್ನು ವಿಲೇವಾರಿ ಮಾಡಬೇಕಾಗಿ ಬಂದಾಗ ಬಹಳ ಸಂಕಟವಾಗುತ್ತದೆ. ಯಾಕಪ್ಪಾ ಇವರಿಗೆ ಇಷ್ಟು ಸರಳ ವಿಷಯಗಳು ಅರ್ಥ ಆಗುವುದಿಲ್ಲ ಎನ್ನಿಸಿ ಸಿಟ್ಟು ಬರುತ್ತೆ.

  ಹೊರಡುವಾಗ ಮತ್ತೆ ಅವರ ಫೋನ್‌ ಚಾರ್ಜರು, ನೀರಿನ ಫ್ಲಾಸ್ಕಾ, ದಾರಿಯಲ್ಲಿರುವ ದೇವಾಲಯಗಳ ಮಾಹಿತಿ, ದಾರಿಗಷ್ಟು ಬುತ್ತಿ… ಎಲ್ಲವನ್ನೂ ಕಟ್ಟಿದರೆ ಮತ್ತೆ ಮುಂದಿನ ದಸರೆವರೆಗೆ ನಮ್ಮ ಮನೆ ನಮ್ಮದು. ನಮ್ಮ ಊರು ನಮ್ಮದು!

 ಪ್ರೀತಿ ನಾಗರಾಜ್‌

Advertisement

Udayavani is now on Telegram. Click here to join our channel and stay updated with the latest news.

Next