ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಈ ವರ್ಷ ನಗರದ ಎರಡು ಕಡೆ ಆಯೋಜಿಸುತ್ತಿರುವ ಜನಪ್ರಿಯ ಆಹಾರ ಮೇಳದಲ್ಲಿ ಬುಡಕಟ್ಟು ಆಹಾರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಕೇರಳ ಮತ್ತು ಖಂಡಾಂತರ ಶೈಲಿಯ ಆಹಾರ ಪದಾರ್ಥಗಳೂ ದೊರೆಯಲಿವೆ ಎಂದು ದಸರಾ ವಿಶೇಷಾಧಿಕಾರಿ ರಂದೀಪ್ ಡಿ. ತಿಳಿಸಿದರು.
ನಗರದ ಹೋಟೆಲ್ ಲಲಿತ್‌ಮಹಲ್ ಪ್ಯಾಲೇಸ್ ಪಕ್ಕದ ಮುಡಾ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಆಹಾರ ಮೇಳದ ಸಿದ್ಧತೆ ಪರಿಶೀಲಿಸಿದ ನಂತರ ಸುದ್ದಿಗೋಷ್ಠಿ ನಡೆಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಸೆ.21ರಿಂದ 28ರವರೆಗೆ, ಮುಡಾ ಮೈದಾನದಲ್ಲಿ ಸೆ.21 ರಿಂದ 30ರವರೆಗೆ ಆಹಾರ ಮೇಳ ನಡೆಯಲಿದೆ. ಸ್ಕೌಟ್ಸ್ ಮೈದಾನದ ಒಟ್ಟು 6 ಬ್ಲಾಕ್‌ಗಳಲ್ಲಿ 95 ಆಹಾರ ಮಳಿಗೆಗಳು ಇರಲಿದ್ದು,
ಈ ಪೈಕಿ 68 ಸಸ್ಯಾಹಾರಿ, 2 ಬುಡಕಟ್ಟು ಆಹಾರ ಮಳಿಗೆಗಳೂ ಸೇರಿ 25 ಮಂಸಾಹಾರಿ ಮಳಿಗೆಗಳು, 2 ತಾರಾ ಹೋಟೆಲ್ ಸೇರಿದಂತೆ 15 ಹೋಟೆಲ್‌ಗಳು, ಬೇಕರಿ-ಕಾಂಡಿಮೆಂಟ್ಸ್‌ನ 8 ಮಳಿಗೆ ಸೇರಿದಂತೆ ಕೋಕೋಕೋಲಾ, ಡೇರಿ ಡೇ, ಅನಘ ರಿಫೈನರೀಸ್, ಡೊಮಿನೋಸ್ ಪಿಜ್ಜಾ, ಯು.ಎಸ್. ಪಿಜ್ಜಾ, ಧಾರವಾಡ ಪೇಡಾಗಳ 5 ಮಳಿಗೆಗಳು, ಮೀನುಗಾರಿಕೆ ಮಹಾ ಮಂಡಳಿ, ಮೀನು ಅಭಿವೃದ್ಧಿ ನಿಗಮ, ಕೆಎಂಎಫ್, ಹಾಪ್‌ಕಾಮ್ಸ್‌ನ 4 ಮಳಿಗೆಗಳು ಇರಲಿವೆ.
ಲಲಿತ್ ಮಹಲ್ ಪ್ಯಾಲೇಸ್ ಪಕ್ಕದ ಮುಡಾ ಮೈದಾನದ 8 ಬ್ಲಾಕ್‌ಗಳಲ್ಲಿ 75 ಆಹಾರ ಮಳಿಗೆಗಳು ಇರಲಿದ್ದು, ಈ ಪೈಕಿ 50 ಸಸ್ಯಾಹಾರಿ, 25 ಮಾಂಸಾಹಾರಿ ಮಳಿಗೆಗಳು ಸೇರಿವೆ. ಮೈಸೂರು, ಮಂಡ್ಯ, ದಕ್ಷಿಣ ಕನ್ನಡ, ಬೆಂಗಳೂರು, ಹಾವೇರಿ, ಬಾಗಲಕೋಟೆ ಜಿಲ್ಲೆಗಳ ಆಹಾರ ಪದಾರ್ಥಗಳ ತಯಾರಕರು ಭಾಗವಹಿಸಲಿದ್ದಾರೆಂದರು.
ಈ ವರ್ಷ ಸಿರಿಧಾನ್ಯ, ಮೈಸೂರು ಶೈಲಿ, ಕೊಡಗು ಶೈಲಿ, ಕೇರಳ ಶೈಲಿ, ಉತ್ತರ ಕನ್ನಡ ಶೈಲಿ, ಕರಾವಳಿ ಶೈಲಿ, ಉತ್ತರ ಕರ್ನಾಟಕ ಶೈಲಿ, ಸಾಂಪ್ರದಾಯಿಕ ಶೈಲಿ, ಖಂಡಾಂತರ ಶೈಲಿ ಆಹಾರ ಪದಾರ್ಥ ದೊರೆಯುವಂತೆ ವ್ಯವಸ್ಥೆ ಮಾಡಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು, ಧಾರವಾಡ, ಬೀದರ್ ಜಿಲ್ಲೆಗಳ ಆಹಾರ ಪದಾರ್ಥ ತಯಾರಕರು ಭಾಗವಹಿಸಲಿದ್ದಾರೆ ಎಂದರು.
ಆಹಾರ ಮೇಳದಲ್ಲಿ ಸಾಮಾಜಿಕ ಸಮಾನತೆ ವಿಚಾರಗೋಷ್ಠಿ, ನಳಪಾಕ ಅಡುಗೆ ಸ್ಪರ್ಧೆ, ಸವಿಭೋಜನ ಸ್ಪರ್ಧೆ, ಪ್ರತಿ ದಿನ ಸಂಜೆ 5 ರಿಂದ ರಾತ್ರಿ 10ರ ವರೆಗೆ ಪ್ರಸಿದ್ಧ ಜನಪದ ಕಲಾ ತಂಡಗಳು ಮತ್ತು ನೃತ್ಯ ಸಂಸ್ಥೆಗಳು, ಸಂಗೀತಗಾರರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಜತೆಗೆ ಸರ್ಕಾರದ ವಿವಿಧ ಆಹಾರ ಭದ್ರತಾ ಯೋಜನೆಗಳ ಬಗ್ಗೆ ಪರಿಚಯ ಮತ್ತು ಪ್ರಾತ್ಯಕ್ಷಿಕೆಗಳು ನಡೆಯುತ್ತವೆ ಎಂದು ಮಾಹಿತಿ ನೀಡಿದರು. ಆಹಾರ ಮೇಳ ಉಪ ಸಮಿತಿ ಕಾರ್ಯಾಧ್ಯಕ್ಷ ಡಾ.ಕಾ.ರಾಮೇಶ್ವರಪ್ಪ ಇದ್ದರು.