Advertisement

ಕೈ ಮುಗಿತೇನೆ, ಬಂದು ಬಿಡಿ: ಶಾಸಕರಿಗೆ ಸಿದ್ದು ಮನವಿ

01:26 AM Feb 07, 2019 | Team Udayavani |

ಬೆಂಗಳೂರು: ವಿಪ್‌ ಜಾರಿ ನಡುವೆಯೂ ಅಧಿವೇಶನಕ್ಕೆ ಗೈರು ಹಾಜರಾಗಿರುವ ಅತೃಪ್ತ ಶಾಸಕರಿಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಾಪಸ್‌ ಬರುವಂತೆ ಕೈ ಮುಗಿದು ಮನವಿ ಮಾಡಿದ್ದಾರೆ. ಅಲ್ಲದೇ ಫೆಬ್ರವರಿ 8ರಂದು ನಡೆಯುವ ಶಾಸಕಾಂಗ ಪಕ್ಷದ ಸಭೆಗೂ ಗೈರು ಹಾಜರಾದರೆ, ಕಾನೂನು ಕ್ರಮ ಕೈಗೊಳ್ಳಲು ಸ್ಪೀಕರ್‌ಗೆ ದೂರು ನೀಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.

Advertisement

ಪಕ್ಷದ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಆಡಳಿತ ಪಕ್ಷಗಳ ಶಾಸಕರಿಗೆ ಹಣದ ಆಮಿಷ ಒಡ್ಡಿ ಆಪರೇಷನ್‌ ಕಮಲ ಮಾಡುತ್ತಿದ್ದಾರೆ. ಮಂಗಳವಾರ ಜೆಡಿಎಸ್‌ ಶಾಸಕರೊಬ್ಬರಿಗೆ 30 ಕೋಟಿ ಹಣ ನೀಡಿ, ತಮ್ಮೊಂದಿಗೆ ಬರುವಂತೆ ಕೇಳಿದ್ದಾರೆ. ಮತ್ತೂಬ್ಬ ಶಾಸಕರ ಮನೆಗೆ ಹೋಗಿ ಐದು ಕೋಟಿ ರೂಪಾಯಿ ಇಟ್ಟು, ಆ ಮೇಲೆ ಮಾತನಾಡೋಣ ಎಂದು ಬಂದಿದ್ದಾರೆ. ಕಾಂಗ್ರೆಸ್‌ನ 25 ರಿಂದ 30 ಶಾಸಕರಿಗೆ ಬಿಜೆಪಿಯವರು ಆಪರೇಷನ್‌ ಕಮಲದ ಆಮಿಷ ಒಡ್ಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಈಗಾಗಲೇ ಒಂದಿಬ್ಬರು ಕಾಂಗ್ರೆಸ್‌ ಶಾಸಕರು ಆಪರೇಷನ್‌ ಕಮಲಕ್ಕೆ ಬಲಿಯಾಗಿದ್ದಾರೆ. ಈಗಲೂ ಕೈ ಮುಗಿದು ಹೇಳುತ್ತಿದ್ದೇನೆ. ಮನಸ್ಸು ಬದಲಾಯಿಸಿಕೊಳ್ಳಿ. ಇಲ್ಲದಿದ್ದರೆ ಪಕ್ಷದಿಂದ ಅನರ್ಹಗೊಳಿಸುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಎರಡು ಬಾರಿ ವಿಪ್‌ ಜಾರಿ ಮಾಡಿದಾಗಲೂ ಖುದ್ದು ಭೇಟಿಯಾಗಲಿಲ್ಲ. ಈಗ ಮತ್ತೆ ವಿಪ್‌ ಜಾರಿ ಮಾಡಿದ್ದೇನೆ. ಆದರೂ, ಬರದೇ ಇದ್ದರೆ ಸ್ಪೀಕರ್‌ಗೆ ದೂರು ನೀಡುವುದರ ಜೊತೆಗೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ. ಆಪರೇಷನ್‌ ಕಮಲಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರೂ ಕೈ ಜೋಡಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಇದರ ಹಿಂದೆ ಇದ್ದಾರೆ. ರಾಜ್ಯದಲ್ಲಿ ಜೆಡಿಎಸ್‌ ಜೊತೆ ಸೇರಿ ಲೋಕಸಭಾ ಚುನಾವಣೆ ಎದುರಿಸಲು ನಿರ್ಧರಿಸಲಾಗಿದ್ದು, ಕನಿಷ್ಠ 25 ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಸಬೇಕು ಎಂದು ಸಭೆಯಲ್ಲಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯ ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಬಿಜೆಪಿ ಕೀಳು ಮಟ್ಟಕ್ಕಿಳಿದು ಸರ್ಕಾರವನ್ನು ಬೀಳಿಸುವ ಹಠಕ್ಕೆ ಬಿದ್ದಿದೆ. ಅದೆಲ್ಲವನ್ನು ಕಾಂಗ್ರೆಸ್‌ ಮೀರಿ ನಿಲ್ಲಲಿದೆ. ಫೆಬ್ರವರಿ 8 ರ ಶಾಸಕಾಂಗ ಸಭೆಗೂ ಶಾಸಕರು ಹಾಜರಾಗದಿದ್ದರೆ, ಪಕ್ಷಾಂತರ ನಿಷೇದ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಜೆಟ್ ಮಂಡನೆಗೆ ಬಿಜೆಪಿ ಅಡ್ಡಿ ಪಡಿಸಿದರೆ, ಸ್ಪೀಕರ್‌ ಅಗತ್ಯ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ ಎಂದು ಹೇಳಿದರು.

Advertisement

ಒಂದು ತಿಂಗಳು ಜನ ಸಂಪರ್ಕ ಅಭಿಯಾನ: ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಕ್ರೀಯರಾಗಿ ಕಾರ್ಯ ನಿರ್ವಹಿಸುವಂತೆ ಎಲ್ಲ ಹಂತದ ಪದಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಫೆಬ್ರವರಿ 15ರಿಂದ ಮಾರ್ಚ್‌ 15ರ ವರೆಗೆ ಕಾಂಗ್ರೆಸ್‌ ಸಾಧನೆ ಹಾಗೂ ಎನ್‌ಡಿಎ ಸರ್ಕಾರದ ವೈಫ‌ಲ್ಯಗಳ ಬಗ್ಗೆ ಮನೆ ಮನೆಗೆ ತೆರಳಿ ಜನ ಸಂಪರ್ಕ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಪಾಕ್ಷಿಕ ಪತ್ರಿಕೆ ಬಿಡುಗಡೆ:.ಕೆಪಿಸಿಸಿ ವತಿಯಿಂದ ನಮ್ಮ ಕಾಂಗ್ರೆಸ್‌ ಎಂಬ ಪಾಕ್ಷಿಕ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಪಕ್ಷದ ಚಟುವಟಿಕೆಗಳ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ಮಾಹಿತಿ ಒದಗಿಸಲು ಖಾಸಗಿ ಪ್ರಸಾರಕ್ಕಾಗಿ ಪತ್ರಿಕೆಯನ್ನು ಹೊರ ತರಲಾಗಿದ್ದು, ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಅವರ ಸಂಪಾದಕತ್ವದಲ್ಲಿ ಪತ್ರಿಕೆ ಹೊರ ತರಲಾಗಿದೆ.

ಮೂರು ನಿರ್ಣಯ

•ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುವುದು.

•ಮೈತ್ರಿ ಸರ್ಕಾರ ಸಾಲಮನ್ನಾ. ಬಡವರ ಬಂಧು ಯೋಜನೆ ಶ್ಲಾಘನೆ.•ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪಕ್ಷದ ಸಾಧನೆಗೆ ಅಭಿನಂದನೆ.

ಪ್ರಿಯಾಂಕಾ ವಾದ್ರಾರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಗೆ ಮುಂದಾಗಿದ್ದಕ್ಕೆ ಮೆಚ್ಚುಗೆ ವಕ್ತಪಡಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next