Advertisement
ಮೊನ್ನೆ ಒಂದು ರೈಲ್ವೆ ಸ್ಟೇಷನ್ನಿನಲ್ಲಿ ಕುಳಿತಾಗ, ಅಲ್ಲಿ ಯೋಧನನ್ನು ಅವನ ಪತ್ನಿ ಬೀಳ್ಕೊಡುತ್ತಿರುವ ಭಾವುಕ ಸನ್ನಿವೇಶವನ್ನು ಕಂಡೆನು. ಅವಳ ಕಂಕುಳಲ್ಲಿ ಪುಟ್ಟ ಕಂದಮ್ಮ, ಏನನ್ನೂ ಅರಿಯದೇ ಮುಗ್ಧವಾಗಿ ಅತ್ತಿತ್ತ ನೋಡುತ್ತಿದೆ. ಪತ್ನಿಯ ಕಂಗಳಲ್ಲಿ ದಳದಳನೆ ಕಣ್ಣೀರು. ಆರ್ಮಿ ಸಮವಸ್ತ್ರದಲ್ಲಿರುವ ಗಂಡನ ಹಣೆಗೆ ಮುತ್ತು ಕೊಟ್ಟರೂ, “ನಿನ್ನ ಹೇಗೆ ಬಿಟ್ಟಿರಲಿ?’ ಎನ್ನುವ ಪ್ರಶ್ನೆಯೊಂದು ಅವಳ ಎದೆಯೊಳಗೆ ಬಾಕಿ ಇದೆ. ಅದನ್ನು ನೋಡುತ್ತಾ, ಯಾಕೋ ಅತ್ತೆ ನೆನಪಾದರು….
Related Articles
Advertisement
“ಆಗಷ್ಟೇ ಭಾರತ- ಪಾಕಿಸ್ತಾನದ (ಬಾಂಗ್ಲಾ) ನಡುವೆ ಯುದ್ಧ ಘೋಷಣೆ ಆಗಿತ್ತು. ನಾನು ಆಗ ಗೋಕರ್ಣದಲ್ಲಿದ್ದೆ. ನಿನ್ನ ಮಾವ, ಕ್ಯಾಪ್ಟನ್ ಎಸ್.ಜಿ. ಭಾಗÌತ್‌ರಿಗೆ ಮೀಸಾಮಾರಿ ಅಸ್ಸಾಂನಲ್ಲಿ ಪೋಸ್ಟಿಂಗ್ ಆಗಿತ್ತು. ನಾನು 5 ತಿಂಗಳ ಬಾಣಂತಿ. ರಜೆ ಸಿಗದ ಕಾರಣ ಅವರು ಮಗುವನ್ನು ನೋಡಲೂ ಬಂದಿರಲಿಲ್ಲ. ಏನಾದರೂ ತುರ್ತು ಘಟನೆ ನಡೆದರೆ ಟೆಲಿಗ್ರಾಂ ಮಾಡುವ ಕಾಲವದು. ನಮ್ಮಿಬ್ಬರ ನಡುವೆ ಮಾತೇ ಇಲ್ಲ. ಅವರೊಂದು ಕಡೆ, ನಾನೊಂದು ಕಡೆ. ಯುದ್ಧ ಪ್ರಾರಂಭವಾಯಿತು. ಎದೆಯಲ್ಲಿ ಆತಂಕ, ದಿಗಿಲು, ನೋವು. ಮಗುವಿನ ಮುಖವನ್ನು ಅವರು ನೋಡುತ್ತಾರೋ ಇಲ್ಲವೋ! ಹೀಗೆ ಕೆಟ್ಟ ಯೋಚನೆಗಳಿಂದ ದಿನ ಕಳೆಯುವುದೇ ಕಷ್ಟವಾಯಿತು. ಆಗ ಟಿ.ವಿ. ಇರಲಿಲ್ಲ. ರೇಡಿಯೋ ನ್ಯೂಸ್‌ಅನ್ನು ತಪ್ಪದೇ ಕೇಳುತ್ತಿದ್ದೆ. ಯುದ್ಧ ನಡೆದ 13 ರಾತ್ರಿಗಳನ್ನು ನಿದ್ದೆ ಇಲ್ಲದೆ ಕಳೆದು, ಬೆಳಗು ಮಾಡಿದ್ದೇನೆ.
ಚಿಕ್ಕ ಮಗುವನ್ನು ಹೊತ್ತು ನಾನೊಬ್ಬಳೆ ಅಸ್ಸಾಂಗೆ ಹೋಗುವುದು ಕೂಡ ಸುಲಭವಾಗಿರಲಿಲ್ಲ. ಅಗ್ನಿಪರೀಕ್ಷೆಯ ಆ 13 ದಿನಗಳು ಜೀವನದಲ್ಲಿ ಬಹುದೊಡ್ಡ ಪಾಠ ಕಲಿಸಿದವು. ಹಿಂದಿ ಭಾಷೆ ಬರದ ನಾನು ನಿಧಾನವಾಗಿ ಹಿಂದಿ ಕಲಿಯಲು ಶುರುಮಾಡಿದ್ದೇ ಆಗ…’ ಎಂದರು ಬಿಕ್ಕುತ್ತಾ. ನನ್ನ ಗಂಟಲಿನಿಂದ ದನಿಯೇ ಹೊಮ್ಮದಾಗಿತ್ತು.
ಅತ್ತೆ ಮತ್ತೆ ಮುಂದುವರಿಸಿದರು… “ದೂರದಲ್ಲಿ ಪೋಸ್ಟಿಂಗ್ ಹಾಕಿದ್ದಾಗ ಕೆಲವೊಮ್ಮೆ ಮಾತ್ರ ಕುಟುಂಬದ ಜೊತೆಗೆ ನೆಲೆಸಲು ಸಾಧ್ಯವಾಗುತ್ತಿತ್ತು. ಅವರು ಲೇಹ್- ಲಡಾಕ್‌ನಲ್ಲಿ ಇದ್ದಾಗ ನಾನು ಮಕ್ಕಳ ಜೊತೆಗೆ ಉತ್ತರಪ್ರದೇಶದ ರೂರ್ಕಿಯಲ್ಲಿದ್ದೆ. ನಿನ್ನ ಗಂಡನೂ ಸೈನ್ಯ ಸೇರಲು ಎರಡು ಬಾರಿ ಪ್ರಯತ್ನಿಸಿ ಫೇಲ್ ಆದ. ಅವನು ಹತ್ತನೇ ತರಗತಿಯಲ್ಲಿದ್ದಾಗ ಕೈ ಮುರಿದುಕೊಂಡಿದ್ದ. ಆ ಕಾರಣದಿಂದಲೇ ಸೈನ್ಯದ ವೈದ್ಯಕೀಯ ಪರೀಕ್ಷೆಯಲ್ಲಿ ಪಾಸ್ ಆಗಲಿಲ್ಲ. ಈಗ ಕಾರ್ಗಿಲ್ ಯುದ್ಧವಂತೆ. ಸೇನೆಯ ಅಧಿಕಾರಿಗಳಿಗೆ ಯುದ್ಧ ಸಿದ್ಧತೆಯ ಎಚ್ಚರಿಕೆ ಇದೆ. ಈಗ ಬ್ರಿಗೇಡಿಯರ್ ಹುದ್ದೆಯಲ್ಲಿರುವುದರಿಂದ ಅಗತ್ಯವಿದ್ದರೆ ಹೊರಡಬೇಕಂತೆ…’
ಅದನ್ನು ಕೇಳುತ್ತಲೇ, ನಾಲಿಗೆಯೇಕೋ ಕಹಿ ಆಗುತ್ತಿತ್ತು. ಅತ್ತೆ ಕೊಟ್ಟ ಕಾಫಿಯಲ್ಲಿ ಅವರ ವಿರಹದ ತಾಪವೂ ಬೆರೆತಿತ್ತು.
ಡಾ. ವಾಣಿ ಸಂದೀಪ್, ಸೌದಿ ಅರೇಬಿಯ