ಕಲ್ಲು ಕಲ್ಲುಗಳಲ್ಲಿ ಅಡಗಿದೆ ಸಾವಿರ ಸಂದೇಶ, ಬಳಕುತಿಹ ನಾಟ್ಯ ಮೈಯೂರಿಯಿಂದ ರಾಜನ ದರ್ಬಾರ್‌ವರೆಗೂ ಕಲಾಕಾರನ ಚಾಕಚಕ್ಯತೆಯನ್ನು ಸವಿಯುವ ಮನಗಳಿಗಾಗಿ ಕಾದು ಕೂತಿಹೆ ಪಟ್ಟದ ಕಲ್ಲು. ಇದು ಕೇವಲ ಹಿನ್ನೋಟವಷ್ಟೇ ಇತಿಹಾಸ ಪುಟದಲ್ಲಿ ಚಾಲುಕ್ಯರ ಈ ನೆಲೆ ಇಂದಿಗೂ ಮುಂದಿಗೂ ಅಜರಾಮರ. ಚಾಲುಕ್ಯರ ರಾಜಧಾನಿ ಎಂದು ಪ್ರತೀತಿ ಪಡೆದಿರುವ ಈ ಪ್ರದೇಶದಲ್ಲಿ ಉತ್ತರ ಭಾರತದ ಆರ್ಯ ಶೈಲಿ ಮತ್ತು ದ್ರಾವಿಡ ಶೈಲಿ ಪಟ್ಟದ ಕಲ್ಲಿನ ವೈಶಿಷ್ಟ್ಯವಾಗಿದೆ. ಹೆಚ್ಚಿನ ವಾಸ್ತು ಶಿಲ್ಪಗಳು ಕೈಲಾಸನಾಥ ದೇಗುಲದ ಮಾದರಿ ಪ್ರತಿರೂಪವನ್ನು ಹೋಲುತ್ತಿದ್ದು ಚಾಲುಕ್ಯರ ಕಲೆಗೆ ಮೆರುಗು ನೀಡಿವೆ.
ಚಾಲುಕ್ಯರ ರಾಜವಂಶಸ್ಥರು ಉತ್ತರವಾಹಿನಿಯಲ್ಲಿ ಸ್ನಾನವಾದ ಬಳಿಕ ಪಟ್ಟಾಭಿಷೇಕಕ್ಕೆ ಸನ್ನದ್ಧರಾಗುತ್ತಿದ್ದರಿಂದ ಈ ಸ್ಥಳ
ಪಟ್ಟದ ಕಲ್ಲು ಎಂದು ಕರೆಸಲ್ಪಟ್ಟಿದೆ ಎಂಬ ಪ್ರತೀತಿ ಇದೆ. ಇಲ್ಲಿ 8ನೇ ಶತಮಾನದ ಹಿಂದು ಮತ್ತು ಜೈನ ದೇವಾಲಯ ಕಾಣಸಿಗಲಿವೆ. ವಿರೂಪಾಕ್ಷ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಪಾಪನಾಥ ದೇವಸ್ಥಾನ, ಕಾಶಿ ವಿಶ್ವನಾಥ ದೇವಾಲಯ, ಚಂದ್ರಶೇಖರ ದೇವಾಲಯ ಮುಂತಾದ ದೇವಾಲಯಗಳು ಇಲ್ಲಿ ಅಕ್ಕಪಕ್ಕದಲ್ಲಿಯೇ ಕಾಣಸಿಗುತ್ತಿದ್ದು ದೇವಾಲಯದ ತೊಟ್ಟಿಲು ಎಂಬ ಪ್ರತೀತಿ ಈ ಸ್ಥಳಕ್ಕಿದೆ.
ಇಲ್ಲಿನ ಕಲಾಕೃತಿಯಲ್ಲಿ ರಾಮಾಯಣ, ಮಹಾಭಾರತ ಕಾಲದ ಸಾಮಾಜಿಕ ಜೀವನ ಶೈಲಿ, ನಟರಾಜ, ಉಗ್ರನರಸಿಂಹದ ಶಿಲ್ಪಾಕೃತಿಗಳು ದ್ರಾವಿಡ ಕಲೆಯ ಶ್ರೀಮಂತಿಕೆ ದ್ಯೋತಕವಾಗಿದೆ. 1987ರಲ್ಲಿ ವಿಶ್ವಪರಂಪರೆಯ ತಾಣ ಎಂದು ಘೋಷಿಸಿದೆ.
ಬಾಗಲಕೋಟೆಯಿಂದ ಪಟ್ಟದ ಕಲ್ಲಿಗೆ ಸುಮಾರು 40 ಕಿ.ಮೀ. ಅಂತರ ಇದೆ. ಇಲ್ಲಿಗೆ ಪ್ರವಾಸಕ್ಕೆಂದು ತೆರಳುವವರು ಟೂರಿಸ್ಟ್ ಪ್ಯಾಕೆಜ್ ನೋಡುವುದು ಒಳ್ಳೆಯದು. ಈ ಪ್ರದೇಶಕ್ಕೆ ಸಮೀಪವಾಗಿ ಇತಿಹಾಸ ಪ್ರಸಿದ್ಧ ಬಾದಾಮಿ, ಐಹೊಳೆ ಪ್ರದೇಶಕ್ಕೂ ನೀವು ಭೇಟಿ ನೀಡಬಹುದಾಗಿದೆ.
ಪಟ್ಟದ ಕಲ್ಲು ಪ್ರದೇಶಕ್ಕೆ ತೆರಳುವವರು ಅಗತ್ಯವಾಗಿ ತಾಪಮಾನ ಇಲ್ಲಿ ಅಧಿಕವಿರುವುದರಿಂದ ನೀರು ಮತ್ತು ಸನ್ ಗ್ಲಾಸ್ ಹೊಂದಿದ್ದರೆ ಒಳ್ಳೆಯದು. ಜತೆಗೆ ಸ್ಕಾಫ್, ಕ್ಯಾಪ್ ಇತರ ಪರಿಕರಗಳ ಸಿದ್ಧತೆ ಮಾಡಿಕೊಂಡರೆ ಆರಾಮದಾಯಕ ಪ್ರವಾಸಿ ಅನುಭವ ನಿಮ್ಮದಾಗಿಸಬಹುದಾಗಿದೆ. ಇಷ್ಟೇಲ್ಲಾ ವಿಪುಲ ಅದ್ಭುತ ಅಂಶಗಳನ್ನು ನೀವು ಕಣ್ಣಾರೆ ಸವಿಯಲಿಚ್ಛಿಸಿದರೆ ಈ ದೇಗಲು ತೊಟ್ಟಿಲ್ಲನ್ನು ಮರೆಯದೇ ಭೇಟಿ ನೀಡಿ ಮನೋರಂಜನೆಯೊಂದಿಗೆ ಇತಿಹಾಸ ಹೆಗ್ಗುರುತನ್ನು ಒಮ್ಮೆ ಮರುಕಳಿಸಿ.
ರಾಧಿಕಾ, ಕುಂದಾಪುರ