Advertisement
ಕಲಘಟಗಿ ತಾಲೂಕಿನ ಬುದನಗುಡ್ಡ ಬೆಟ್ಟದ ಸಾಲಿನಲ್ಲಿರುವ ಭೈರಪ್ಪನ ಫಾಲ್ಸ್ ಅಥವಾ ಭೈರಪ್ಪ ಕೊಳ್ಳ ಎಂದೇ ಕರೆಯಲ್ಪಡುವ ಈ ಫಾಲ್ಸ್ ಬಗ್ಗೆ ಹೆಚ್ಚಾಗಿ ಯಾರಿಗೂ ಗೊತ್ತಿಲ್ಲ. ಸುತ್ತಲಿನ ಎರಡ್ಮೂರು ಹಳ್ಳಿಗಳ ಜನರನ್ನು ಬಿಟ್ಟರೆ ಇಂತಹದೊಂದು ಫಾಲ್ಸ್ ಇದೇ ಎಂಬುದು ಕಲಘಟಗಿ ತಾಲೂಕಿಗೆ ಸಂಪೂರ್ಣ ಮಾಹಿತಿಯೇ ಇಲ್ಲ.
Related Articles
Advertisement
ಧಾರವಾಡದಿಂದ ಮಾರ್ಗ: ಧಾರವಾಡ- ಕಲಘಟಗಿ ಮಾರ್ಗದಲ್ಲಿ ಸಂಚರಿಸಿದರೆ ಸುಮಾರು 25 ಕಿಮೀ ನಂತರ ಗುಡಿಹಾಳ ಕ್ರಾಸ್ ಬರುತ್ತದೆ. ಅಲ್ಲಿಂದ ಎಡಭಾಗಕ್ಕೆ ಚಳಮಟ್ಟಿ ಕ್ರಾಸ್ ರಸ್ತೆ ಮೂಲಕ ಮೂರು ಕಿಮೀ ಸಾಗಿದರೆ ಕುರುವಿನಕೊಪ್ಪ ಗ್ರಾಮದ ಕ್ರಾಸ್ ಸಿಗುತ್ತದೆ. ಅಲ್ಲಿಂದ ಕುರುವಿನಕೊಪ್ಪ ತಲುಪಿ ಎರಡು ಕಿಮೀ ದೂರ ತೆರಳಿದರೆ ಭೈರಪ್ಪ ಫಾಲ್ಸ್ ಕಾಣಸಿಗುತ್ತದೆ.
ಹುಬ್ಬಳ್ಳಿಯಿಂದ ಪ್ರಯಾಣ ಹೇಗೆ?: ಹುಬ್ಬಳ್ಳಿ-ಕಲಘಟಗಿ ರಸ್ತೆ ಮೂಲಕ 12 ಕಿಮೀ ಸಾಗಿದರೆ ಚಳಮಟ್ಟಿ ಕ್ರಾಸ್ ಬರುತ್ತದೆ. ಅಲ್ಲಿಂದ ಬಲಕ್ಕೆ ಹುಲಕೊಪ್ಪ ರಸ್ತೆ ಮೂಲಕ ಕುರುವಿನಕೊಪ್ಪ ಗ್ರಾಮಕ್ಕೆ ತಲುಪಬೇಕು. ಅಲ್ಲಿ ಗ್ರಾಮಸ್ಥರನ್ನು ವಿಚಾರಿಸಿದರೆ ಫಾಲ್ಸ್ ಬಗ್ಗೆ ಮಾಹಿತಿ ಸಿಗುತ್ತದೆ.
ಅಗತ್ಯ-ವಸ್ತುಗಳ ಸಂಗ್ರವಿರಲಿ: ಭೈರಪ್ಪ ಫಾಲ್ಸ್ ನೋಡಲು ಹೋಗುವವರು ಕಡ್ಡಾಯವಾಗಿ ಅಗತ್ಯ ವಸ್ತು ತೆಗೆದುಕೊಂಡು ಹೋಗಲೇಬೇಕು. ಕುಡಿಯುವ ನೀರು, ಆಹಾರ, ಬಟ್ಟೆ ಇತ್ಯಾದಿ ಇದ್ದರೆ ಉತ್ತಮ.
ಕಾರು ಬೇಡ; ಬೈಕ್ ಇರಲಿ: ಇಲ್ಲಿಗೆ ಪ್ರಯಾಣಿಸುವ ಚಾರಣಿಗಳು ಬೈಕ್ ಮೂಲಕ ತೆರಳಿದರೆ ಉತ್ತಮ. ಕುರುವಿನಕೊಪ್ಪ ಗ್ರಾಮದವರೆಗೆ ಕಾರಲ್ಲಿ ತೆರಳಬಹುದು. ಮುಂದೆ ಸಾಗಬೇಕಾದರೆ ಗ್ರಾಮದಿಂದ ಎರಡು ಕಿಮೀ ನಡೆಯುವುದು ಅನಿವಾರ್ಯ. ಬೈಕ್ ಸವಾರರು ಫಾಲ್ಸ್ ಹತ್ತಿರದವರಿಗೂ ತೆರಳಬಹುದು. ಹೀಗಾಗಿ ಇಲ್ಲಿಗೆ ಬೈಕ್ ಸವಾರಿಯೇ ಅತ್ಯುತ್ತಮ ಆಯ್ಕೆ.
ಫ್ಯಾಮಿಲಿಗೂ ಓಕೆ: ಭೈರಪ್ಪ ಫಾಲ್ಸ್ ಹರಿವು ಶಾಂತ. ಅಷ್ಟೊಂದು ರಭಸವೂ ಇಲ್ಲ. ಗುಂಡಿಗಳೂ ಇಲ್ಲ. ಅಪಾಯಕ್ಕೆ ಇಲ್ಲಿ ಆಸ್ಪದವೂ ಇಲ್ಲ. ಹೀಗಾಗಿ ಕುಟುಂಬ ಸಮೇತರಾಗಿ ಇಲ್ಲಿಗೆ ಭೇಟಿ ಕೊಡಬಹುದು.
ನೋಡ ಬನ್ನಿ ಭೈರಪ್ಪ ಫಾಲ್ಸ್ ಸೊಬಗು:
ಸುಮಾರು 10 ಅಡಿ ಅಗಲ ಹಾಗೂ 20 ಅಡಿ ಮೇಲಿಂದ ಧುಮುಕುವ ಇಲ್ಲಿನ ನೀರು ಶುದ್ಧ ಹಾಲಿನಂತೆ ಕಂಗೊಳಿಸುತ್ತದ್ತೆ. ಮಳೆ ಹೆಚ್ಚಾದರಂತೂ ಇಲ್ಲಿ ರಭಸದಿಂದ ಬೀಳುವ ನೀರನ್ನು ನೋಡುವುದೇ ಒಂದು ಆನಂದ.
ಗೆಳೆಯರೊಂದಿಗೆ ಎರಡು ದಿನದ ಹಿಂದೆ ತೆರಳಿದ್ದೆ. ಫಾಲ್ಸ್ ನೋಡಲು ತುಂಬಾ ದೂರ ಹೋಗಿ ಹಣ ಖರ್ಚು ಮಾಡುವ ಬದಲು ಸ್ಥಳೀಯವಾಗಿಯೇ ಸಿಗುವ ಭೈರಪ್ಪ ಫಾಲ್ಸ್ಗೆ ಭೇಟಿ ನೀಡಬಹುದು. ಕುರುವಿನಕೊಪ್ಪದಿಂದ ಫಾಲ್ಸ್ಗೆ ತೆರಳುವ ರಸ್ತೆ ಅಭಿವೃದ್ಧಿಪಡಿಸಬೇಕು. ಇದನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಬೇಕು.•ಶಂಕರ ದಾಸನಕೊಪ್ಪ, ಹಿರೇಹೊನ್ನಳ್ಳಿ ಗ್ರಾಮದ ನಿವಾಸಿ
•ಪ್ರಹ್ಲಾದಗೌಡ ಗೊಲ್ಲಗೌಡರ