Advertisement

ಬನ್ನಿ, ಮುದುಕರಾಗೋಣ!

09:22 AM Jul 31, 2019 | Lakshmi GovindaRaj |

ಫೇಸ್‌ ಆ್ಯಪ್‌ ಬಂದಾದ ಮೇಲೆ, ಸೋಷಿಯಲ್‌ ಮೀಡಿಯಾದಲ್ಲಿ ಈಗ ಎಲ್ಲರೂ ಮುದುಕರೇ! ಸ್ವಾಮಿ ವಿವೇಕಾನಂದರು, ಯಾವತ್ತೂ “ಯಂಗ್‌’ ಆಗಿರಿ ಅಂದರೆ, ನಾವು ಹೆಂಗೆಂಗೊ ಆಗುತ್ತಿದ್ದೇವೆ. ನನಗೆ ಇವರೆಲ್ಲರೂ ಅಕಾಲ ವೃದ್ಧಾಪ್ಯ ತಂದುಕೊಂಡ “ಯಯಾತಿ’ ನಾಟಕದ ಪುರುವಿನಂತೆ ಕಾಣಿಸುತ್ತಾರೆ…

Advertisement

ಹಿಂದೆ ಒಂದು ನೀಲಿ ಪರದೆ. ಎತ್ತರದ ಸ್ಟೂಲಿನ ಮೇಲಿಟ್ಟ ಒಂದು ಹೂವಿನ ಗುತ್ಛ. ಅದರ ಪಕ್ಕ ಗಂಭೀರವಾಗಿ, ಸಾವಧಾನ ಸ್ಥಿತಿಯಲ್ಲಿ ನಿಂತು ತೆಗೆಸಿಕೊಂಡ ಫೋಟೋ, ಆ ಕಾಲದ ಒಂದು ಹೆಗ್ಗಳಿಕೆ. ಅದಕ್ಕೊಂದು ಮರದ ಫ್ರೇಮ್‌ ಹಾಕಿಸಿ, ಗೂಡಿನಲ್ಲಿಟ್ಟುಬಿಟ್ಟರೆ, ಅದೇನೋ ಅಪಾರ ಖುಷಿ. ನೋಡಿ, ಈ ಹೊತ್ತಿಗೆ ಎಷ್ಟು ಬದಲಾಗಿ ಬಿಟ್ಟಿದ್ದೇವೆ! ಕೈಯಲ್ಲಿ ಮೊಬೈಲ್, ಅದರಲ್ಲೊಂದು ಕ್ಯಾಮೆರಾ ಬಂದಿದ್ದೇ ಗೊತ್ತು… ಅದೆಲ್ಲಿಗೆ ಬಂದು ನಿಂತಿದ್ದೀವಿ, ನೋಡಿ! ನಮಗೆ ನಾವೇ ಕಳವಳಗೊಳ್ಳುವಷ್ಟು ಬದಲಾಗಿದ್ದೇವೆ.

ಫೋಟೋಗಳಿಗಾಗಿಯೇ ಒಂದು ಟ್ರೆಂಡ್‌ ಸೃಷ್ಟಿಯಾಯಿತೊ; ಟ್ರೆಂಡ್‌ಗಾಗಿ ವಿಚಿತ್ರ ಸ್ವರೂಪದ ಫೋಟೊ ಅಭಿರುಚಿಯನ್ನು ಸೃಷ್ಟಿಸಲಾಗುತ್ತದೆಯೊ ಗೊತ್ತಿಲ್ಲ. ನಾವು ನಮ್ಮನ್ನು ವಿಚಿತ್ರವಾಗಿ ಹೊರಜಗತ್ತಿಗೆ, ಅದರಲ್ಲೂ ಸೋಷಿಯಲ್‌ ಮೀಡಿಯಾದಲ್ಲಿ ತೋರಿಸಿಕೊಳ್ಳಲು ಒಂದು ಶೋಕಿಗೆ ಬಿದ್ದಿದ್ದೇವೆ ಅನ್ನುವುದು ಮಾತ್ರ ಸತ್ಯ. ಅದಕ್ಕಾಗಿ ಲಕ್ಷಾಂತರ ಆ್ಯಪ್‌ಗ್ಳು ಬಂದುಹೋಗಿವೆ. ಮೊನ್ನೆಯಿಂದ ಫೇಸ್‌ ಅ್ಯಪ್‌ನ ಜಮಾನ ಶುರುವಾಗಿದೆ.

ಕೆಲ ದಿನಗಳ ಹಿಂದೆ ಧೋನಿಯ ಬಿಳಿ ಗಡ್ಡ ಒಂದು ಟ್ರೆಂಡ್‌ ಸೃಷ್ಟಿಸಿತ್ತು. ಆಗ ಎಷ್ಟೋ ಯುವಕರು ತಮ್ಮ ಕರಿ ಗಡ್ಡಕ್ಕೆ ಬಿಳಿ ಬಣ್ಣ ಬಳಿದುಕೊಂಡೂ ತಿರುಗಾಡಿದ್ದಿದೆ. ತಮಿಳು ನಟ ಅಜಿತ್‌ ಅವರ ಮೋಹಕ ಬಿಳಿಕೂದಲಂತೂ ಹಲವರಿಗೆ ಹುಚ್ಚು ಹಿಡಿಸಿಬಿಟ್ಟಿತ್ತು… ಇಂತಹ ನೂರಾರು ಆಸೆಗಳು ಈಗ ಫೇಸ್‌ ಆ್ಯಪ್‌ನಲ್ಲಿ ಸಾಧ್ಯವಾಗುತ್ತಿವೆ. ಇದೆಲ್ಲಾ ತಿದ್ದಿದ್ದು ಎಂಬ ಅನುಮಾನವೂ ಬಾರದಂತೆ ಈ ಆ್ಯಪ್‌ ತನ್ನ ಕೆಲಸ ಮಾಡಿ ಮುಗಿಸುತ್ತದೆ. ನಟ- ನಟಿಯರಿಂದ ಹಿಡಿದು, ಸಾಮಾನ್ಯರೂ ತಮಗೆ ಹೇಗೆ ಇಷ್ಟವೋ, ಹಾಗೆ ತಮ್ಮ ಫೋಟೊವನ್ನು ತಿದ್ದಿಕೊಂಡು ಖುಷಿಪಟ್ಟರು. ತಮ್ಮ ಮುಖವನ್ನು ತಾವೇ ಗುರುತಿಸಿಕೊಳ್ಳ­ಲಾಗದಷ್ಟು ಕಳೆದು ಹೋಗಿಬಿಟ್ಟರು.

ಎಲ್ಲಿ ನೋಡಿದರೂ ಮುದುಕರೇ…: ಸೋಷಿಯಲ್‌ ಮೀಡಿಯಾದಲ್ಲಿ ಈಗ ಎಲ್ಲರೂ ಮುದುಕರಾಗುತ್ತಿದ್ದಾರೆ. ನನಗೆ ಇವರೆಲ್ಲರೂ ಅಕಾಲ ವೃದ್ಧಾಪ್ಯ ತಂದುಕೊಂಡ “ಯಯಾತಿ’ ನಾಟಕದ ಪುರುವಿನಂತೆ ಕಾಣಿಸುತ್ತಾರೆ. “ವೃದ್ಧಾಪ್ಯ ಬರುವ ಹೊತ್ತಿಗೆ ಬಂದರೆ ಸ್ವೀಕರಿಸಬಹುದಿತ್ತು. ಅದರೊಂದಿಗೆ ಬರುವ ಅನುಭವವೂ ಜೊತೆಗಿರುತ್ತಿತ್ತು’ ಅನ್ನುತ್ತಾನೆ ಪುರು. ನನಗೆ ಆಶ್ಚರ್ಯವಾಗುವುದು, ಫೇಸ್‌ ಆ್ಯಪ್‌ನಲ್ಲಿ ಪ್ರತಿಯೊಬ್ಬರಿಗೂ ಮತ್ತಷ್ಟು ಯುವಕರಾಗಲಿಕ್ಕೆ ಹತ್ತಾರು ಆಯ್ಕೆಗಳಿದ್ದವು. ಆದರೆ, ಬಹುಪಾಲು ಮಂದಿ ಮುದುಕರಾಗಲಿಕ್ಕೆ ಬಯಸಿದ್ದಾರೆ.

Advertisement

ಎಲ್ಲರ ಮುಖಗಳು ಮಾವಿನ ಕಾಯಿಯನ್ನು ಕಿತ್ತು ಪೌಡರ್‌ ಹಾಕಿ, ಬಚ್ಚಿಟ್ಟು ಮಾಡಿದ ಹಣ್ಣುಗಳಂತೆ ಕಾಣುತ್ತವೆ. ಸ್ವಾಮಿ ವಿವೇಕಾನಂದರು, ಯಾವತ್ತೂ ಕೂಡ ‘ಯಂಗ್‌’ ಆಗಿರಿ ಅಂದರೆ, ನಾವು ಹೆಂಗೆಂಗೊ ಆದೆವು! ನಾವು ಹದಿಹರೆಯ­ದಲ್ಲಿ ಮುದುಕ­ರಾಗುವ ಕಡೆ ಗಮನ ಹರಿಸುತ್ತಿದ್ದೇವೆ. ಮನಸ್ಸು ಏನು ಬಯಸುತ್ತೋ, ಅದನ್ನೇ ನಾವು ಆಯ್ಕೆ ಮಾಡಿಕೊಳ್ಳುತ್ತೇವೆ ಬಿಡಿ. ಹಾಗಾದರೆ, ನಮ್ಮ ಮನಸ್ಸು ವೃದ್ಧಾಪ್ಯದ ದುರ್ಬಲತೆಯನ್ನು ಯೋಚಿಸುತ್ತಿದೆಯಾ?

ನಾಳೆ ನಾನು ಹೇಗೆ ಕಾಣಿ¤àನಿ ಅನ್ನುವ ಒಂದು ಕುತೂಹಲ ಎಲ್ಲರಿಗೂ ಇದ್ದಿದ್ದೇ. ಅದರಲ್ಲೂ ಕಾಲ ಕೊಡಮಾಡುವ ಟ್ರೆಂಡ್‌ಗೆ ನಾವು ಸಿದ್ಧರಾಗದಿದ್ದರೆ ಜನ ನಮ್ಮನ್ನು ಗಮಾರನಂತೆಯೇ ಪರಿಗಣಿಸುತ್ತಾರೆ. ಆ ಒಂದು ಚಡಪಡಿಕೆಗಾದರೂ ಭಯದಿಂದ “ನಮೂª ಒಂದು ಇರ್ಲಿ’ ಅನ್ನುವ ಒತ್ತಡಕ್ಕೆ ಬೀಳುತ್ತೇವೆ. ನಾಳೆ ಅದೊಂದು ಚಟವಾಗಿಬಿಡುತ್ತದೆ. ಬಿಟ್ಟೂಬಿಡದ ಮಾಯೆಯಾಗಿ ಕಾಡುತ್ತದೆ. ಬರೀ ಲೈಕ್‌, ಕಾಮೆಂಟ್‌ಗಾಗಿ ನಾವು ಏನು ಬೇಕಾದರೂ ಆಗಲು ಸಿದ್ಧರಾಗುತ್ತೇವೆ. ಎಂತಹ ವಿಚಿತ್ರ ಅಲ್ವಾ? ನಾವು ಏನನ್ನು ಧೇನಿಸುತ್ತೇವೊ, ಅದೇ ಆಗಿಬಿಡುತ್ತೇವೆ. ತೀರಾ ಹರೆಯದ ಹೊತ್ತಲ್ಲಿ ವೃದ್ಧಾಪ್ಯದಲ್ಲಿ ಹೇಗೆ ಕಂಡೇನು ಅನ್ನುವ ಫೇಸ್‌ ಆ್ಯಪ್‌ನ ಮುದುಕುತನ ನಿಮ್ಮ ಮನಸಲ್ಲಿ ಸಣ್ಣ ಸುಸ್ತನ್ನು ತರಬಹುದು.

ಚೆಂದವಾಗಿ ಕಾಣಿ, ಆದರೆ…: ಚೆನ್ನಾಗಿ ಕಾಣಬೇಕು ಅನ್ನುವ ತುಡಿತ ಯಾರಿಗೆ ತಾನೆ ಇರುವುದಿಲ್ಲ, ಹೇಳಿ? ಅದಕ್ಕೆಂದೇ ತೆಗೆದುಕೊಂಡ ಫೋಟೋಗಳನ್ನು ತಿದ್ದಲು ಕೂರುತ್ತೇವೆ. ಅದರಿಂದ ನೀವು ಚೆಂದವಾಗುವುದಿಲ್ಲ; ನಿಮ್ಮ ಫೋಟೋ ಮಾತ್ರ ಚಂದವಾಗುತ್ತದೆ. ನೀವು ಮಾತ್ರ ಹಾಗೆಯೇ ಉಳಿಯುತ್ತೀರಿ. ಹಾಗೆ ಚೆಂದ ಮಾಡಿದ ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿಕೊಳ್ಳಬೇಕು ಅನ್ನುವುದನ್ನು ಬಿಟ್ಟರೆ, ಬೇರೆ ಏನೂ ಉದ್ದೇಶವಿರುವುದಿಲ್ಲ. ನನ್ನನ್ನು ನಾಲ್ಕು ಜನ ನೋಡಿ ಮೆಚ್ಚಬೇಕು ಅನ್ನುವುದಷ್ಟೇ ತುಡಿತ. ಆ ಮೆಚ್ಚುಗೆ ಎಷ್ಟು ದಿನ ಉಳಿಯುತ್ತದೆ ಎಂಬುದು ಬೇರೆ ಮಾತು. ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ ಫೋಟೊಗಳು ತಂದುಕೊಡುವ ಅವಾಂತರಗಳ ಬಗ್ಗೆ ಹೊಸದಾಗಿ ಏನೂ ಹೇಳಬೇಕಿಲ್ಲ. ಅಷ್ಟೇ ಅಲ್ಲದೆ, ಅದು ನೀಡುವ ಮಾನಸಿಕ ಕಿರಿಕಿರಿ ನೈಜ ಬದುಕಿನಲ್ಲಿ ನಿಮ್ಮ ಮುಖದ ಚೆಲುವನ್ನು ಬಾಡಿಸದೇ ಇರದು.

ನಿಮ್ಮ ಮುಖ ರಷ್ಯಾಗೆ ಹೋಗುತ್ತೆ!: ಹೌದು, ಫೇಸ್‌ ಆ್ಯಪ್‌ ಸೇಫ್ ಅಲ್ಲ!- ಇದು ರಷ್ಯಾ ಮೂಲದ ಒಂದು ಆ್ಯಪ್‌. ಇದರ ಸರ್ವರ್‌ಗಳು ರಷ್ಯಾದಲ್ಲಿವೆ. ನೀವು ಫೇಸ್‌ ಆ್ಯಪ್‌ಗೆ ಅಪ್ಲೋಡ್‌ ಮಾಡಿದ ಫೋಟೊಗಳು ಸರ್ವರ್‌ಗಳಲ್ಲಿ ಉಳಿದುಬಿಡುತ್ತವೆ. ಆ್ಯಪ್‌ನಲ್ಲಿ ಅದನ್ನು ಡಿಲೀಟ್‌ ಮಾಡಿದರೂ ಅವು ಸರ್ವರ್‌ನಿಂದ ಡಿಲೀಟ್‌ ಆಗಿರುವುದಿಲ್ಲ. ಇದರೊಂದಿಗೆ ನಿಮ್ಮ ಮೊಬೈಲ್‌ನ ಡಾಟಾ ಸೋರಿಕೆಯಾಗುವ ಅಪಾಯವೂ ಇದೆ. ನಿಮ್ಮ ವೆಬ್‌ ಸರ್ವರ್‌ ಮಾಹಿತಿ, ಐಪಿ ಅಡ್ರೆಸ್‌, ಬ್ರೌಸರ್‌ ಮಾಹಿತಿ, ಇಂಟರ್ನೆಟ್‌ ಮೂಲಕ ಮಾಡುವ ವ್ಯವಹಾರಗಳು… ಹೀಗೆ ಏನನ್ನು ಬೇಕಾದರೂ ಈ ಆ್ಯಪ್‌ ಕದ್ದು ನೋಡುವ ಅಪಾಯವಿದೆ.

* ಸದಾಶಿವ ಸೊರಟೂರು

Advertisement

Udayavani is now on Telegram. Click here to join our channel and stay updated with the latest news.

Next