Advertisement

ಬನ್ನಿ…ಕೊಳವೆ ಬಾವಿಗೆ ನೀರಿಂಗಿಸೋಣ, ಜಲ ಸಂರಕ್ಷಿಸೋಣ

11:12 PM Jun 18, 2019 | sudhir |

ಕಾಸರಗೋಡು: ಈ ವರ್ಷದ ಬೇಸಗೆಯಲ್ಲೇ ಜೀವ ಸಂಕುಲಕ್ಕೆ ನೀರಿನ ಆವಶ್ಯಕತೆ ಎಷ್ಟಿದೆ ಎಂಬ ಬಗ್ಗೆ ನಿಖರವಾದ ಅನುಭವವಾಯಿತು. ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದರೂ ಬರಡಾದ ಯಾವುದೇ ಬಾವಿಗಳೂ ತುಂಬಿಕೊಳ್ಳಲಿಲ್ಲ. ಯಾವುದೇ ತೋಡುಗಳಲ್ಲೂ ನೀರು ಹರಿಯಲಿಲ್ಲ.

Advertisement

ಗುಡ್ಡದಿಂದ ಹರಿದು ಬಂದ ಮಳೆ ನೀರು, ಮಳೆ ಕಡಿಮೆಯಾದಾಗ ಭೂಮಿಯಲ್ಲಿ ಇಂಗಿ ಹೋಯಿತು. ಇದರಿಂದ ಒರತೆ ಹಿಗ್ಗಲಿಲ್ಲ. ಕಾದ ಕಾವಲಿಗೆ ಹಾಕಿದ ಬಿಂದು ನೀರಿನಂತೆ ಬಸಿದು ಹೋಯಿತು. ಈ ವರ್ಷದ ಬೇಸಗೆಯಲ್ಲಿ ಭೂಮಿ ಅಷ್ಟು ಕಠಿನವಾಗಿ ಹೋಗಿತ್ತು. ಅರಳುವ ಹುಲ್ಲು ಕೂಡ ಕರಟುವಷ್ಟು ಕಠಿನವಾದ ಬೇಸಗೆ ನೀರಿನ ಚಿಲುಮೆಗಳನ್ನು ಹೊಸಕಿ ಹಾಕಿತ್ತು. ಇದರ ಪರಿಣಾಮವಾಗಿ ಬರಗಾಲ ತಾಂಡವವಾಡಿತ್ತು.

ಭೂಮಿಯಲ್ಲಿ ಅಂತರ್ಜಲ ಮಟ್ಟ ಬಹಳಷ್ಟು ಕುಸಿದಿದೆ ಎಂಬ ವಾದಕ್ಕೆ ಒಂದೆರಡು ಇಂಚು ನೀರು ನೀಡಿದ ಕೊಳವೆ ಬಾವಿಗಳು ಬರಿದಾಗಿ ಸಾಕ್ಷಿಯಾಗಿವೆ. ಅತಿಯಾದ ಕೊಳವೆ ಬಾವಿ ನಿರ್ಮಾಣದಿಂದ ಭೂಮಿಯ ಆಂತರಿಕ ಪದರಗಳು ಸಡಿಲಗೊಳ್ಳುವ ಆತಂಕವಿದೆ. ಜಲಮೂಲಗಳು ಅತ್ಯಂತ ಅಡಿಯಲ್ಲಿ ಇರುವುದರಿಂದ ನೀರಿನ ಆವಶ್ಯಕತೆಗಾಗಿ ಕೊಳವೆ ಬಾವಿ ಅನಿವಾರ್ಯ. ಇದನ್ನು ಕೊರೆಯುವ ಜತೆಗೆ ಮಳೆಗಾಲದಲ್ಲಿ ಕೊಳವೆ ಬಾವಿಗಳಿಗೆ ಜಲ ಮರುಪೂರಣದ ಮೂಲಕ ನೀರನ್ನು ತುಂಬಿಸುವ ಕೆಲಸವೂ ನಡೆಯಬೇಕು. ಈ ಒತ್ತಾಯ ಕಾನೂನು ರೂಪ ಪಡೆದು ಕಡ್ಡಾಯವಾಗಬೇಕು.

ಕೊಳವೆ ಬಾವಿಗಳು ನೀರಿನ ಟ್ಯಾಂಕ್‌ ಇದ್ದಂತೆ. ಅದಕ್ಕೆ ತುಂಬಿಸುವ ಕೆಲಸ ಮಾಡದೆ ಇದ್ದರೆ ಅದು ಖಾಲಿಯಾಗುವುದು ಖಂಡಿತ. ಆದ್ದರಿಂದ ಕೊಳವೆ ಬಾವಿಗಳಿಗೆ ನೀರಿನ ಮರುಪೂರಣ ಕೆಲಸ ಮಳೆಗಾಲದಲ್ಲಿ ನಡೆಯಲೇಬೇಕು.

ಅದಕ್ಕೆ ಸರಕಾರ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ನೂತನ ಕಾನೂನು ಸಿದ್ಧಪಡಿಸಿ ಅನುಷ್ಠಾನಗೊಳಿಸಬೇಕು.

Advertisement

ಕಡ್ಡಾಯ ಕಾನೂನು
ಸಾಮಾನ್ಯವಾಗಿ ಕೊಳವೆ ಬಾವಿಗಳನ್ನು ಕೊರೆಯಲು ಭೂಗರ್ಭ ಇಲಾಖೆಯ ಅನುಮತಿ ಬೇಕು. ಇಲಾಖೆಯ ಅ ಧಿಕಾರಿಗಳು ಕೊಳವೆ ಬಾವಿ ಕೊರೆಯುವ ಪ್ರದೇಶಕ್ಕೆ ಆಗಮಿಸಿ, ಪರಿಶೀಲಿಸಿ ಅನುಮತಿ ನೀಡುತ್ತಾರೆ. ಇದೀಗ ಪ್ರಾದೇಶಿಕ ಗ್ರಾಮ ಪಂಚಾಯತ್‌ನಿಂದಲೂ ಅನುಮತಿ ಪಡೆಯಬೇಕು. ಮುಂದಿನ ದಿನಗಳಲ್ಲಿ ಭೂಮಿಯಲ್ಲಿ ಜಲ ಸಂರಕ್ಷಣೆ ಮಾಡುವ ಹಿನ್ನೆಲೆಯಲ್ಲಿ ಕೆಲವೊಂದು ಕಡ್ಡಾಯ ಕಾನೂನುಗಳನ್ನು ರೂಪಿಸಬೇಕಿದೆ. ಕೊರೆದ ಕೊಳವೆ ಬಾವಿಗಳಿಗೆ ಮಳೆಗಾಲದಲ್ಲಿ ಮಳೆ ನೀರನ್ನು ತುಂಬಿಸುವ ಜಲ ಮರುಪೂರಣ ವಿಧಾನವನ್ನು ಕಡ್ಡಾಯವಾಗಿ ಮಾಡಬೇಕು. ಭೂಗರ್ಭ ಇಲಾಖೆ, ಗ್ರಾಮ ಪಂಚಾಯತ್‌ಗಳು ಈ ಬಗ್ಗೆ ಖುದ್ದಾಗಿ ಕೊಳವೆ ಬಾವಿ ಕೊರೆದ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಬೇಕು. ಜಲ ಮರುಪೂರಣ ವಿಧಾನಗನ್ನು ಕೊಳವೆ ಬಾವಿಗಳಿಗೆ ಅಳವಡಿಸಿಕೊಂಡರೆ ಮಾತ್ರ ವಿದ್ಯುತ್‌ ಇಲಾಖೆಗಳು ಈ ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ನೀಡಬೇಕು. ಜಲ ಮರುಪೂರಣ ವಿಧಾನವನ್ನು ಅಳವಡಿಸದ ಕೊಳವೆ ಬಾವಿಗಳನ್ನು ಪ್ರಾದೇಶಿಕ ಗ್ರಾಮ ಪಂಚಾಯತ್‌ಗಳು ನಿರ್ದಾಕ್ಷಿಣ್ಯವಾಗಿ ನಿರ್ಬಂ ಧಿಸಬೇಕು. ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಕೊರೆದ ಕೊಳವೆ ಬಾವಿಗಳಿಗೆ ಮಳೆ ನೀರು ಸಂಗ್ರಹ ನಡೆಸುವ ಕುರಿತು ಸಾರ್ವತ್ರಿಕ ಜಾಗೃತಿಯನ್ನು ಕೂಡ ಈ ಆಡಳಿತ ಸಂಸ್ಥೆಗಳು ಮಾಡಬೇಕು.

ನೀರಿಂಗಿಸುವ ಪ್ರಯತ್ನ
ಮಳೆಗಾಲದಲ್ಲಿ ಮರುಪೂರಣ ನಡೆಸುವ ಬಗ್ಗೆ ಆಡಳಿತ ವಿಭಾಗವು ಕಾನೂನು ರೂಪಿಸಬೇಕು. ಮಳೆಗಾಲದ ನೀರು ತೋಡಿನ ಮೂಲಕ ಹರಿದು ಹೋಗದೆ ಅವುಗಳನ್ನು ತನ್ನ ಬಾವಿ ಹಾಗೂ ಕೆರೆಗಳಲ್ಲಿ ಸೋಸಿ ಶೇಖರಿಸಿ ಇಂಗಿಸುವ ಪ್ರಯತ್ನ ಮಾಡಬೇಕು. ತನ್ನ ಜಮೀನಿನಲ್ಲಿ ಸಾಧ್ಯವಾದಷ್ಟು ಇಂಗುಗುಂಡಿಗಳನ್ನು ನಿರ್ಮಿಸಬೇಕು ಎಂಬ ಕ್ರಿಯಾತ್ಮಕ ಕಾನೂನನ್ನು ರೂಪಿಸಿ ಕಡ್ಡಾಯ ಗೊಳಿಸಬೇಕು ಎಂಬುವುದು ಸಾರ್ವತ್ರಿಕ ಅಭಿಮತ. ಇದೀಗ ಅನೇಕ ಪ್ರದೇಶಗಳಲ್ಲಿ ಕೊರೆದ ಶೇ. 90ರಷ್ಟು ಕೊಳವೆ ಬಾವಿಗಳಿಗೆ ಜಲ ಮರುಪೂರಣ ಕಾರ್ಯ ನಡೆಯುತ್ತಿಲ್ಲ. ಆದ್ದರಿಂದ ಅನೇಕ ಕೊಳವೆ ಬಾವಿಗಳು ಕೆಲವೇ ವರ್ಷದಲ್ಲಿ ಬರಿದಾಗುತ್ತವೆ. ಪ್ರಾದೇಶಿಕವಾದ ಯುವ ಸಂಘಟನೆಗಳು ಯೋಗ್ಯ ಜಲತಜ್ಞರನ್ನು ಕರೆಸಿ ಸಾರ್ವಜನಿಕರಿಗೆ ಜಲ ಮರುಪೂರಣ ವಿಧಾನಗಳು ಹಾಗೂ ಅದರ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು.

ಜಲ ಸಂರಕ್ಷಣೆಯ ಹಿನ್ನೆಲೆಯಲ್ಲಿ ಇಂಗುಗುಂಡಿಗಳು ಬಹಳಷ್ಟು ಭರವಸೆ ಮೂಡಿಸಿದ್ದರೂ ಫಲಪ್ರದವಾಗಿ ಅನುಷ್ಠಾನಗೊಂಡಿಲ್ಲ. ಗುಡ್ಡ ಪ್ರದೇಶಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಡಳಿತ ಸಮಿತಿಗಳು ಕಾನೂನುಬದ್ಧ ಯೋಜನೆಯನ್ನು ರೂಪಿಸಬೇಕಿದೆ. ಒಟ್ಟಿನಲ್ಲಿ ಕೊಳವೆ ಬಾವಿ ಹಾಗೂ ಇಂಗುಗುಂಡಿಗಳ ಮೂಲಕ ಮಳೆಗಾಲದ ನೀರನ್ನು ಹಿಡಿದಿಡುವ ಪ್ರಯತ್ನ ನಡೆಯಬೇಕು.

ಶಾಶ್ವತ ಪರಿಹಾರ : ಜಲ ಮರುಪೂರಣದ ವ್ಯವಸ್ಥೆಗೆ ದುಬಾರಿ ಇಲ್ಲ. ಪ್ರತೀ ವರ್ಷವೂ ಸಾಕಷ್ಟು ಮಳೆ ಬೀಳುವ ಕರಾವಳಿ ಪ್ರದೇಶದಲ್ಲಿ ಜಲ ಮರುಪೂರಣಕ್ಕೆ ಸಾಕಷ್ಟು ಪೂರಕ ವ್ಯವಸ್ಥೆ ಇದೆ. ಆದರೆ ನೀರನ್ನು ಹಿಡಿದಿಡುವ ಬಗೆಗಿನ ಜನತೆಯ ಔದಾಸಿನ್ಯ ಮಾತ್ರ ಮಿತಿ ಮೀರಿದೆ. ಮಳೆ ದೂರವಾದಾಗ ಹಾಹಾಕಾರ ಮಾಡುವ ಬದಲು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸ್ವತ: ಕಂಡುಕೊಳ್ಳಲು ಸಾಧ್ಯವಿದೆ.

ಒಂದು ಕೊಳವೆ ಬಾವಿಯಲ್ಲಿ ಜಲ ಮರುಪೂರಣದ ಮೂಲಕ ನೀರು ಇಂಗಿಸುವುದರಿಂದ ಆ ಪ್ರದೇಶದ ಸುಮಾರು 1 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟದ ಏರಿಕೆಯನ್ನು ದಾಖಲಿಸಬಹುದು ಎಂದು ಸಂಶೋ ಧಿಸಲಾಗಿದೆ. ಕೊಳವೆ ಬಾವಿಯಲ್ಲಿ ಸರಿಯಾದ ರೀತಿಯಲ್ಲಿ ನೀರಿಂಗಿಸಿದರೆ ಸುಮಾರು 25 ವರ್ಷಕ್ಕಿಂತಲೂ ಹೆಚ್ಚು ಕಾಲ ಯಥೇತ್ಛವಾಗಿ ನೀರು ಪಡೆಯಬಹುದು.

ಮಳೆಗಾಲದಲ್ಲಿ ಮನೆಯ ಕಾಂಕ್ರಿಟ್‌ ಛಾವಣಿಯಿಂದ ಹರಿಯುವ ನೀರನ್ನೂ ಕೂಡಾ ಕೊಳವೆ ಬಾವಿಗಳಿಗೆ ನಿಖರ ರೀತಿಯಲ್ಲಿ ಸೋಸಿ ಕಳುಹಿಸುವ ವ್ಯವಸ್ಥೆಯನ್ನು ಮಾಡಬಹುದು. ಕಾಸರಗೋಡು ಸೇರಿದಂತೆ ಕರಾವಳಿ ಜಿಲ್ಲೆ ಬರಡು ನೆಲವಲ್ಲ. ಆದರೆ ಇಲ್ಲಿನ ಪಾರಂಪರಿಕ ನೀರಿನ ಚಿಲುಮೆಗಳನ್ನು ಶಕ್ತವಾಗಿ ರಕ್ಷಿಸಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next