ಇನ್ನೇನು ಕೆಲವೇ ದಿನ… ಸಾವು ಆ ಮಗಳನ್ನು ಅಪ್ಪಿಕೊಳ್ಳುತ್ತದೆ. ತನ್ನನ್ನು ಬಿಟ್ಟು ಇಹಲೋಕ ತ್ಯಜಿಸುವ ಮಗಳಿಗಾಗಿ, ಅಪ್ಪ ಈ ಗುಂಡಿ ತೋಡಿದ್ದಾನೆ…
ಗುಂಡಿಯೊಳಗೆ ಇಳಿದು ಅಪ್ಪ- ಮಗಳು ಆಡುತ್ತಿದ್ದಾರೆ. ಆಟ ಆಡಿ ಸಾಕೆಂದಾಗ, ಪುಟಾಣಿಯ ಕೈಹಿಡಿದು ಅಪ್ಪ ಇಲ್ಲಿಯೇ ವಿರಮಿಸುತ್ತಾನೆ. ಕೆಲ ತಾಸಿನ ನಂತರ ಮಗಳು ಎದ್ದು, ತುಂಟಾಟ ಮಾಡುತ್ತಾ, ಅಪ್ಪನನ್ನು ಎಬ್ಬಿಸುತ್ತಾಳೆ. ಮತ್ತೆ ಆಟ, ಹೊಟ್ಟೆ ಹಸಿಯಿತೆಂದರೆ ಇಲ್ಲಿಯೇ ಊಟ. “ಮಗಳು ಸದಾ ನಗುತ್ತಿರಬೇಕು’, ಅಷ್ಟೇ ಈ ಅಪ್ಪನ ಹಂಬಲ. ಆದರೆ, ಮಗಳ ಜತೆಗಿದ್ದಷ್ಟು ಹೊತ್ತು ಅವನ ಹೃದಯದಲ್ಲಿ ಹೇಳತೀರದ ನೋವೊಂದು ಹೆಪ್ಪುಗಟ್ಟಿರುತ್ತದೆ. ಜೋರು ಅಳಬೇಕು ಎನಿಸುತ್ತದೆ, ಆದರೆ ಅಳುವುದಿಲ್ಲ. “ಅಯ್ಯೋ, ದೇವರೆ…’ ಎನ್ನುತ್ತಾ ಎದೆ ಬಡಿದುಕೊಳ್ಳಬೇಕೆನಿಸುತ್ತದೆ, ಆದರೆ, ಹಾಗೆ ಮಾಡುವುದಿಲ್ಲ. ಏಕೆಂದರೆ, ಮಗಳಿಗೆ ಕಹಿಸತ್ಯ ಗೊತ್ತಾಗಬಾರದು?
ಇನ್ನೇನು ಕೆಲವೇ ದಿನ… ಸಾವು ಆ ಮಗಳನ್ನು ಅಪ್ಪಿಕೊಳ್ಳುತ್ತದೆ. ತನ್ನನ್ನು ಬಿಟ್ಟು ಇಹಲೋಕ ತ್ಯಜಿಸುವ ಮಗಳಿಗಾಗಿ, ಅಪ್ಪ ಈ ಗುಂಡಿ ತೋಡಿದ್ದಾನೆ. ಮುಂದೊಂದು ದಿನ ಇದೇ ಗುಂಡಿಯಲ್ಲಿಯೇ ಅವಳನ್ನು ಹೂಳಬೇಕು. ಅವಳ ಮೈಮೇಲೆ ಹತ್ತಾರು ಬುಟ್ಟಿ ಮಣ್ಣು ಬೀಳುತ್ತದೆ. ಆಗೊಂದು ಕತ್ತಲು ಆವರಿಸುತ್ತದೆ. ಈ ದೊಡ್ಡ ಗುಂಡಿಯಲ್ಲಿ ಆಕೆಗೆ ತನ್ನವರು ಯಾರೂ ಇಲ್ಲ ಅಂತನ್ನಿಸಬಾರದು. ಸೂರ್ಯ ಮುಳುಗಿ ರಾತ್ರಿ ಆದಾಗ, ಜೋರು ಮಳೆ ಬಂದಾಗ, ನೆಲ ನಡಗುವಂತೆ ಸಿಡಿಲು ಗುಡುಗಿದಾಗ, ಮಗಳಿಗೆ ಭಯ ಆವರಿಸಬಾರದು ಎನ್ನುವುದು ಈ ಅಪ್ಪನ ಕಾಳಜಿ.
ಚೀನಾದ ಹಳ್ಳಿಯೊಂದರ ರೈತ ಝಾಂಗ್ ಲಿಯೋಂಗ್, ಈ ವಿಚಿತ್ರ ಒದ್ದಾಟದಲ್ಲಿ ದಿನ ತಳ್ಳುತ್ತಿದ್ದಾನೆ. ಪುಟಾಣಿ ಝಾಂಗ್ ಕ್ಸಿನ್ಲಯ ರಕ್ತದಲ್ಲಿ “ತಾಲಾಸ್ಸೆಮಿಯಾ’ ಮಾರಣಾಂತಿಕ ಕಾಯಿಲೆ ಅಡಗಿ, ಅವಳ ದೈಹಿಕ ನೆಮ್ಮದಿಯನ್ನು ಕೊಲ್ಲುತ್ತಿದೆ. ಅತಿ ಕಡಿಮೆ ಹಿಮೋಗ್ಲೋಬಿನ್‌ನಿಂದ ಈ ಕಾಯಿಲೆ ಬರುತ್ತದೆ ಎನ್ನುತ್ತಾರೆ ವೈದ್ಯರು. ಆಕೆ ಎರಡು ತಿಂಗಳ ಮಗುವಿದ್ದಾಗ, ಬಂದ ಈ ಕಾಯಿಲೆ ಇನ್ನೇನು ಕೆಲವೇ ದಿನಗಳಲ್ಲಿ ಮಗಳನ್ನು ಜೀವಸಹಿತ ಹೊತ್ತುಕೊಂಡು ಹೋಗುತ್ತದೆಂದು ಗೊತ್ತಾದಾಗ, ಅಪ್ಪ ಹೀಗೆ ಭಾವುಕನಾಗಿದ್ದಾನೆ. ಆಕೆಯನ್ನು ಉಳಿಸಲು ಈಗಾಗಲೇ ಒಂಬತ್ತೂವರೆ ಲಕ್ಷ ಖರ್ಚು ಮಾಡಿರುವ ಸಣ್ಣ ಬೇಸರವೂ ಈ ಅಪ್ಪನಿಗಿಲ್ಲ. ಮೈತುಂಬಾ ಸಾಲ ಅವನನ್ನು ಮಾನಸಿಕ ಹಿಂಸೆಗೆ ತಳ್ಳಿಲ್ಲ. ಆದರೆ, ಅವನ ನಿದ್ದೆಗೆಡಿಸಿರುವುದು ಅವನ ಮಗಳ ಮುಂದಿನ ಮರಣ.
ಇದಲ್ಲವೇ, ಮಗಳೆಂಬ ಸೆಳೆತ… ಅಪ್ಪನೆಂಬ ಆಕಾಶದಗಲ ಪ್ರೀತಿ..!?