Advertisement

ಬಾರೋ ಮಾವಿನ ಮನೆಗೆ…

02:26 PM May 26, 2018 | |

ಇದು ಮಾವಿನ ಸೀಸನ್‌. ಅಂಗಡಿಯಲ್ಲಿ ಮಿರಮಿರನೆ ಮಿಂಚುತ್ತಾ, ಸುವಾಸನೆ ಬೀರುತ್ತಾ ಕುಳಿತ ಹಣ್ಣಿನ ರಾಜನನ್ನು ನಿರ್ಲಕ್ಷಿಸಲು ಸಾಧ್ಯವೇ? ಹಣ್ಣು ಹುಳಿಯಿರಲಿ, ಸರಿಯಾಗಿ ಮಾಗದೇ ಇರಲಿ ಒಂದೆರಡು ಕೆ.ಜಿ. ಖರೀದಿಸೋಣ ಎನ್ನುತ್ತದೆ ಮನಸ್ಸು. ಇನ್ನು ತಾಜಾ ತಾಜಾ ಮಾವಿನ ಹಣ್ಣಿನ ತೋಟಕ್ಕೇ ಲಗ್ಗೆ ಇಡುವ ಅವಕಾಶ ಸಿಕ್ಕಿಬಿಟ್ಟರೆ… ಆಹಾ, ನೆನೆಸಿಕೊಂಡರೇ ಬಾಯಲ್ಲಿ ನೀರೂರತ್ತದೆ ಅಲ್ಲವೇ? ಅಂಥದ್ದೊಂದು ಅವಕಾಶವನ್ನು, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ನಿಮಗಾಗಿ ಕಲ್ಪಿಸಿದೆ. ಅದುವೇ “ಮ್ಯಾಂಗೋ ಪಿಕಿಂಗ್‌ ಟೂರಿಸಂ’. 

Advertisement

ಏನಿದು ಮ್ಯಾಂಗೋ ಪಿಕಿಂಗ್‌?: ಇದು ಮಾವು ಅಭಿವೃದ್ಧಿ ಮಂಡಳಿ ವತಿಯಿಂದ ನಡೆಯುವ ಒಂದು ದಿನದ ಕಾರ್ಯಕ್ರಮ. ಇಲ್ಲಿ ನಿಮಗೆ, ರೈತರ ಮಾವಿನ ತೋಟಕ್ಕೆ ಹೋಗಿ, ತಾಜಾ ಹಣ್ಣುಗಳನ್ನು ನೇರವಾಗಿ ಮರದಿಂದ ಕಿತ್ತುಕೊಳ್ಳುವ ಅವಕಾಶ ಸಿಗುತ್ತದೆ. ಅಂದರೆ, ನಿಮ್ಮ ಕೈಯಲ್ಲಿರುವ ಹಣ್ಣು ತಾಜಾ, ರುಚಿಕರ ಮತ್ತು ರಾಸಾಯನಿಕಮುಕ್ತ ಅನ್ನುವುದು ಖಾತ್ರಿ. ತೋಟದಲ್ಲಿ ಸುತ್ತಾಡಿ, ರೈತರೊಂದಿಗೆ ಸಂವಾದ ನಡೆಸಿ ಜ್ಞಾನಾರ್ಜನೆಯೂ ಆಗುತ್ತದೆ.

ನಿಗಮದ ಜೊತೆಗೆ ಒಪ್ಪಂದ ಮಾಡಿಕೊಂಡ, ತುಮಕೂರು, ಕೋಲಾರ, ಮಧುಗಿರಿ, ರಾಮನಗರ ಮುಂತಾದ ಕಡೆಯ ರೈತರ ತೋಟಗಳಿಗೆ ನೀವು ಭೇಟಿ ನೀಡಬಹುದು. ಈ ಭಾನುವಾರ ಬೆಂಗಳೂರಿನಿಂದ ಹೊರಟ ನಾಲ್ಕು ಬಸ್‌ಗಳು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಂಜು ಹಾಗೂ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೆ.ಮುನಿರಾಜು ಅವರ ತೋಟಕ್ಕೆ ಲಗ್ಗೆ ಇಡಲಿವೆ. 

ಮಕ್ಕಳನ್ನೂ ಕರೆದೊಯ್ಯಿರಿ: ಬೆಂಗಳೂರಿನ ಎಷ್ಟೋ ಪುಟಾಣಿಗಳು ಮಾವಿನ ಮರವನ್ನೇ ನೋಡಿರುವುದಿಲ್ಲ. ಅವರ ಪ್ರಕಾರ ಮಾವು ಎಂದರೆ ಅಂಗಡಿ, ಮಾಲ್‌, ಫ್ರಿಡ್ಜ್ ಒಳಗೆ ಸಿಗುವಂಥ ವಸ್ತು ಅಷ್ಟೇ. ಈ “ಮ್ಯಾಂಗೋ ಪಿಕಿಂಗ್‌ ಟೂರಿಸಂ’ನಿಂದ ಮಕ್ಕಳಿಗೆ ಹಣ್ಣಿನರಾಜನ ಪರಿಚಯವಾಗುತ್ತದೆ. ಎಲ್ಲರಿಗೂ ಅನುಕೂಲವಾಗಲೆಂದು, ರಜಾದಿನಗಳೆಂದೇ ಈ ಕಾರ್ಯಕ್ರಮ ನಡೆಯುತ್ತಿದೆ. ಇಲ್ಲಿ ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಏರ್ಪಡುವುದಷ್ಟೇ ಅಲ್ಲದೆ, ಕುಟುಂಬದವರೆಲ್ಲ ಒಟ್ಟಿಗೆ ಸೇರಿ ಆನಂದಿಸಲು ಒಳ್ಳೆಯ ಅವಕಾಶ. ಆಸಕ್ತರು www.ksmdmcl.org/ ನಲ್ಲಿ ಹೆಸರು ನೋಂದಾಯಿಸಬಹುದು.

ಏನು ಉಪಯೋಗ?: ಅಂಗಡಿಯಲ್ಲಿ ಸಿಗುವ ಮಾವು, ಎಷ್ಟೋ ಬಾರಿ ಸ್ವಾಭಾವಿಕವಾಗಿ ಹಣ್ಣಾಗಿರುವುದಿಲ್ಲ. ಬಲಿತ, ಕೆಲವೊಮ್ಮೆ ಎಳೆಯ ಕಾಯಿಗಳನ್ನೇ ಕೊಯ್ದು ಕ್ಯಾಲ್ಸಿಯಂ ಕಾರ್ಬೈಡ್‌ನ‌ಂಥ ರಾಸಾಯನಿಕ ಸಿಂಪಡಿಸಿ ಮಾಗಿಸಲಾಗುತ್ತದೆ. ಕ್ಯಾಲ್ಸಿಯಂ ಕಾರ್ಬೈಡ್‌ನ‌ಲ್ಲಿ ಪಾಸ್ಫರಸ್‌ ಹಾಗೂ ಆರ್ಸೆನಿಕ್‌ ಅಂಶವಿರುತ್ತದೆ. ಇದು ಹಣ್ಣಿನ ರುಚಿಯ ಮೇಲಷ್ಟೇ ಅಲ್ಲದೆ, ನಮ್ಮ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ, ಇಲ್ಲಿ ಮಾಗಿದ ಹಣ್ಣುಗಳನ್ನು ಮರದಿಂದ ನೀವೇ ಕೀಳುವುದರಿಂದ ಸ್ವಾದಿಷ್ಟ ಹಾಗೂ ಆರೋಗ್ಯಭರಿತ ಹಣ್ಣುಗಳನ್ನು ಸವಿಯಬಹುದು.

Advertisement

ಕೆಲವು ನಿಯಮಗಳು ಹೀಗಿವೆ
– ಆಸಕ್ತರು //www.ksmdmcl.org/ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಬೇಕು
-100 ರೂ. ಶುಲ್ಕ ಪಾವತಿಸಬೇಕು
– ಹಣವನ್ನು ಆನ್‌ಲೈನ್‌ಬ್ಯಾಂಕಿಂಗ್‌/ ಆರ್‌ಟಿಜಿಎಸ್‌/ ಎನ್‌ಇಎಫ್ಟಿ ಮೂಲಕವೇ ಪಾವತಿಸಬೇಕು
– ಹತ್ತು ವರ್ಷ ಮೇಲ್ಪಟ್ಟ ಮಕ್ಕಳು ಪೂರ್ತಿ ಶುಲ್ಕ ಪಾವತಿಸಬೇಕು
– ಒಮ್ಮೆ ಹೆಸರು ನೋಂದಾಯಿಸಿದ ಮೇಲೆ ಕಾರ್ಯಕ್ರಮದ ದಿನಾಂಕದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ
– ಒಂದು ಬಾರಿ ಪಾವತಿಸಿದ ಹಣವನ್ನು ಹಿಂದಕ್ಕೆ ಪಡೆಯಲಾಗದು
–  ಸರಿಯಾದ ಐಡಿ ಪ್ರೂಫ್/ ದಾಖಲಾತಿ ಜೊತೆಗಿರಲಿ
– ಕನಿಷ್ಠ 6-8 ಕೆ.ಜಿ ಖರೀದಿಸಬಹುದು
–  ಎರಡನೇ ಶನಿವಾರ ಮತ್ತು ಭಾನುವಾರಗಳಂದು ಈ ಕಾರ್ಯಕ್ರಮ ನಡೆಯುತ್ತದೆ
– ಹೆಸರು ನೋಂದಾಯಿಸಿದವರು, ಕಬ್ಬನ್‌ ಪಾರ್ಕ್‌ (ವಿಶ್ವೇಶ್ವರಯ್ಯ ಮ್ಯೂಸಿಯಂ ಹಿಂದಿರುವ ಪಾರ್ಕಿಂಗ್‌ ಸ್ಥಳ)ನಲ್ಲಿ ನಿಗದಿತ ಸಮಯಕ್ಕೆ ಹಾಜರಿರಬೇಕು
– ನೋಂದಣಿ ಖಚಿತತೆಯ ಬಗ್ಗೆ ಮಾವು ಅಭಿವೃದ್ಧಿ ನಿಗಮದಿಂದ ಮೆಸೇಜ್‌ ಕಳುಹಿಸಲಾಗುತ್ತದೆ
– ಊಟ-ತಿಂಡಿಯ ವ್ಯವಸ್ಥೆ ನಿಮ್ಮದೇ ಆಗಿರುತ್ತದೆ
– ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ

ಆನ್‌ಲೈನ್‌ ಪಾವತಿಗೆ…
ವ್ಯವಸ್ಥಾಪಕ ನಿರ್ದೇಶಕ
ಖಾತೆದಾರರು:
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮ ನಿಯಮಿತ
ಅಕೌಂಟ್‌ ಸಂಖ್ಯೆ: 002294600000981
ಬ್ಯಾಂಕ್‌ ಹೆಸರು: ಯೆಸ್‌ ಬ್ಯಾಂಕ್‌
ಬ್ರಾಂಚ್‌: ಕಸ್ತೂರ್‌ ಬಾ ರಸ್ತೆ, ಬೆಂಗಳೂರು
ಐಎಫ್ಎಸ್‌ಸಿ ಕೋಡ್‌: YESB0000022

“ಹೌಸ್‌ಫ‌ುಲ್‌ ಟೂರಿಸಂ’: ಮೇ 27 (ಭಾನುವಾರ)ರ ಮ್ಯಾಂಗೋ ಪಿಕಿಂಗ್‌ ಟೂರಿಸಂನ 220 ಟಿಕೆಟ್‌ಗಳು ಈಗಾಗಲೇ ಭರ್ತಿಯಾಗಿವೆ.  ಆದರೆ, ಬೇಸರಪಡುವ ಅಗತ್ಯವಿಲ್ಲ. ಈ ಕಾರ್ಯಕ್ರಮ ಮಾವಿನ ಸೀಸನ್‌ ಮುಗಿಯುವವರೆಗೆ ನಡೆಯುತ್ತಿದ್ದು, ಮುಂದಿನ ಭಾನುವಾರದ ಸೀಟುಗಳನ್ನು ಕಾಯ್ದಿರಿಸಬಹುದು.

* ಪ್ರಿಯಾಂಕಾ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next