ನಮ್ಮ ರಾಜ್ಯದ ಸರಕಾರಿ ಶಾಲೆಗಳಲ್ಲಿ ಈಗಿರುವ ಕನ್ನಡ ಮಾಧ್ಯಮ ತರಗತಿಗಳ ಜತೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಬೇಕು ಎಂದು ಕಳೆದ ಎರಡು ವರ್ಷಗಳಿಂದ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಅರ್ಜಿಗಳು ಸಲ್ಲಿಕೆಯಾಗುತ್ತಿವೆಯಂತೆ. ಸರಕಾರಿ ಶಾಲೆಯ ಮಕ್ಕಳ ಪಾಲಕರು ಖಾಸಗಿ ಶಾಲೆಗಳ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಒಲವು ತೋರುತ್ತಿರುವ ಕಾರಣ ಸರಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಮಾಧ್ಯಮವನ್ನು ಪ್ರಾರಂಭಿಸಿದರೆ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಬಹುದು ಎಂಬ ಅಭಿಪ್ರಾಯ ಶಿಕ್ಷಣ ಇಲಾಖೆ ಹೊಂದಿದೆ ಎಂಬ ಸುದ್ದಿಯನ್ನು ಇತ್ತಿಚೇಗೆ ಕೇಳಿದೆ.
ಇಂಗ್ಲಿಷ್ ಭಾಷೆಯ ಕಲಿಕೆ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕೆ ಎಂಬ ಎರಡು ಪದಗಳಿಗೆ ಇರುವಂತಹ ಅಂತರವನ್ನು ಅರ್ಥ ಮಾಡಿಕೊಳ್ಳದೆ ಶಿಕ್ಷಣ ಕ್ಷೇತ್ರದಲ್ಲಿ ಹೊಸದೊಂದು ಬದಲಾವಣೆಯನ್ನು ತಂದೊಡ್ಡಲು ಯತ್ನಿಸುತ್ತಿರುವುದು ಒಂದು ವಿಪರ್ಯಾಸವೇ ಸರಿ.
ಇಂಗ್ಲಿಷ್ ಭಾಷೆಯನ್ನು ಮಕ್ಕಳಿಗೆ ಚೆನ್ನಾಗಿ ಕಲಿಸುವುದರ ಮುಖಾಂತರ ಅವರ ಕಲಿಕೆಗೆ ಹೆಚ್ಚಿನ ಆದ್ಯತೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ದೊರೆಯುವಂತೆ ಮಾಡಬಹುದು ಎಂಬ ವಿಷಯವನ್ನು ನಾವು ಮೊದಲು ಪಾಲಕರಿಗೆ ತಿಳಿ ಹೇಳಬೇಕಾಗಿದೆ, ಅದಕ್ಕಾಗಿ ಈಗಿರುವ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ನಾವು ಅಚ್ಚುಕಟ್ಟಾಗಿ ಇಂಗ್ಲಿಷ್ ಭಾಷೆಯಲ್ಲಿ ಬರೆಯುವುದು ಮತ್ತು ಮಾತನಾಡುವುದನ್ನು ಈಗಿನಿಂದಲೇ ಹೇಳಿಕೊಂಡು ಹೋದರೆ ಕನ್ನಡ ಮಾಧ್ಯಮದ ಮಕ್ಕಳು ಯಾವುದರಲ್ಲಿಯೂ ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಡಬಹುದು.
ಈಗಿನ ಶಿಕ್ಷಣ ತಜ್ಞರು ಮತ್ತು ಶಿಕ್ಷಣ ಇಲಾಖೆಯವರು ಮುಖ್ಯವಾಗಿ ಗಮನಿಸಬೇಕಾಗಿರುವ ವಿಷಯ ಇಂಗ್ಲಿಷನ್ನು ಉತ್ತಮವಾಗಿ ಕನ್ನಡ ಮಾಧ್ಯಮದ ಮಕ್ಕಳಿಗೆ ಕಲಿಸಿಕೊಡುವ ಮತ್ತು ಅದಕ್ಕೆ ಬೇಕಾಗಿರುವ ನುರಿತ ಶಿಕ್ಷಕರ ಕೊರತೆಯನ್ನು ತುಂಬಿಸುವ ಬಗ್ಗೆ. ಈಗಿರುವ ಸರಕಾರಿ ಶಾಲೆಗಳ ಪರಿಸ್ಥಿತಿಯನ್ನು ನೋಡಿದರೆ ಪಾಲಕರು ತಮ್ಮ ಮಕ್ಕಳನ್ನು ಅಂತಹ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಒಳ್ಳೆಯ ಶಿಕ್ಷಕ ವೃಂದವಿಲ್ಲದೆ, ಮೈದಾನದವಿಲ್ಲದೆ, ಕಟ್ಟಡಗಳಿಲ್ಲದೆ ಅದೆಷ್ಟೋ ಸರಕಾರಿ ಶಾಲೆಗಳು ಯೋಚನೆಗೆ ಮಿಗಿಲಾದ ಕೆಟ್ಟ ಪರಿಸ್ಥಿತಿಗೆ ಬಂದು ನಿಂತಿವೆ. ಹೊಸ ಕಲಿಕಾ ಮಾಧ್ಯಮದ ಬಗ್ಗೆ ಯೋಚಿಸುವುದನ್ನು ಬಿಟ್ಟು ಮೊದಲು ಇವುಗಳತ್ತ ಗಮನ ಹರಿಸಿದರೆ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಲ್ಲಿಯೇ ಮಕ್ಕಳ ಕಲಿಕಾ ಸಂಖ್ಯೆಯನ್ನು ಹೆಚ್ಚಿಸಬಹುದು.
ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಹತ್ತನೇ ತರಗತಿಯವರೆಗೆ ಕಲಿತಿರುವ ಮಕ್ಕಳು ಚೆನ್ನಾಗಿ ವಿಷಯಗಳನ್ನು ತಿಳಿದಿರುವವರಾಗಿದ್ದು, ಇಂಗ್ಲಿಷ್ ಮಾಧ್ಯಮದ ಮಕ್ಕಳಿಗಿಂತ ಹೆಚ್ಚಿನ ಕ್ರಿಯಾಶೀಲತೆಯನ್ನು ಹೊಂದಿರುತ್ತಾರೆ. ಆದರೆ ಪದವಿ ಪೂರ್ವ ವಿದ್ಯಾಭ್ಯಾಸದಲ್ಲಿ ಇದ್ದಕ್ಕಿದ್ದಂತೆ ಬದಲಾದ ಇಂಗ್ಲಿಷ್ ಮಾಧ್ಯಮದ ಕಲಿಕೆ, ಅವರು ವಿಷಯವನ್ನು ತಿಳಿದುಕೊಳ್ಳುವ ಮತ್ತು ಬರೆಯುವ ವಿಚಾರದಲ್ಲಿ ಸ್ವಲ್ಪ ಮಟ್ಟದ ಕಷ್ಟವನ್ನು ಕೊಡುತ್ತದೆ. ಆದಕಾರಣ ಇಂಗ್ಲಿಷ್ ಭಾಷೆಯನ್ನು ಉಪಯೋಗಿಸುವ ಮತ್ತು ಅರ್ಥಮಾಡಿಕೊಳ್ಳುವ ವಿಷಯದಲ್ಲಿ ಅವರು ಇಂಗ್ಲಿಷ್ ಮಾಧ್ಯಮದ ಮಕ್ಕಳಿಗಿಂತ ಹಿಂದುಳಿಯುತ್ತಾರೆ.
ಈ ಒಂದು ಕಾರಣದಿಂದ ಈಗಿನ ಪಾಲಕರು ಇಂಗ್ಲಿಷ್ ಮಾಧ್ಯಮದ ಮೊರೆ ಹೋಗುತ್ತಿದ್ದಾರೆ.ಆದರೆ ಪ್ರಾಥಮಿಕ ಹಂತದಲ್ಲಿ ಕನ್ನಡದಲ್ಲಿಯೇ ಕಲಿಸುವುದರಿಂದ ಮಕ್ಕಳಿಗೆ ಅದೇಗೆ ಸಹಾಯವಾಗುವುದು ಎಂಬುವುದನ್ನು ನಾವು ಇಂದಿನ ಪಾಲಕರಿಗೆ ತಿಳಿ ಹೇಳಬೇಕಾಗಿದೆ.
ನಮಗೆ ತಿಳಿದಿರುವ ಜ್ಞಾನ ಜನಸಾಮಾನ್ಯರಿಗೆ ತಿಳಿಯಬೇಕಾದರೆ ಆಯಾ ನಾಡುಗಳು ಆಯಾ ನುಡಿಯಿಂದಲೇ ಅದನ್ನು ಗೊತ್ತು ಮಾಡಿಕೊಳ್ಳಬೇಕು. ಮಾತೃಭಾಷೆಗೆ ಪ್ರಥಮ ಸ್ಥಾನ ಸಲ್ಲಬೇಕು. ಮಾತೃಭಾಷೆ ಶಿಕ್ಷಣದ ಮಾಧ್ಯಮವಾಗಬೇಕು. ನಮಗೆ ಇಂಗ್ಲಿಷಿನ ಬಗೆಗೆ ದ್ವೇಷವಾಗಲಿ ತಿರಸ್ಕಾರ ವಾಗಲಿ ಎಳ್ಳಷ್ಟೂ ಇಲ್ಲ. ಆದರೆ ಬಲತ್ಕಾರವಾಗಿ ಇಂಗ್ಲಿಷನ್ನು ಹೇರುವುದು ಖಂಡಿನೀಯ.
ಪ್ರಶಾಂತ ಆರ್. ಮುಜಗೊಂಡ
ಅಂಜುಮನ್ ಶಿಕ್ಷಣ ಮಹಾವಿದ್ಯಾಲಯ,
ವಿಜಯಪುರ